ವಿಜಯಪುರದಲ್ಲಿ ಭೀಮಾ ನದಿ ತೀರದ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನರ ಅಕ್ರಮ ಪ್ರವೇಶ!

ಕೊರೋನಾ ವೈರಸ್ ಸೋಂಕಿನ ಈ ಸಮಯದಲ್ಲಿ ಅಂತರಾಜ್ಯ ಚೆಕ್ ಪೋಸ್ಟ್ ಗಳನ್ನು ತಪ್ಪಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಹಲವು ನಿವಾಸಿಗಳು ಮತ್ತು ವಲಸೆ ಕಾರ್ಮಿಕರು ಪೊಲೀಸರ ಕಣ್ತಪ್ಪಿಸಿ ಬತ್ತಿಹೋಗಿರುವ ಭೀಮಾ ನದಿತೀರದ ಮೂಲಕ ಅಕ್ರಮವಾಗಿ ಗಡಿ ದಾಟುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಭೀಮಾ ನದಿ ಮೂಲಕ ಜನರ ಪ್ರಯಾಣ
ಭೀಮಾ ನದಿ ಮೂಲಕ ಜನರ ಪ್ರಯಾಣ

ವಿಜಯಪುರ: ಕೊರೋನಾ ವೈರಸ್ ಸೋಂಕಿನ ಈ ಸಮಯದಲ್ಲಿ ಅಂತರಾಜ್ಯ ಚೆಕ್ ಪೋಸ್ಟ್ ಗಳನ್ನು ತಪ್ಪಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಹಲವು ನಿವಾಸಿಗಳು ಮತ್ತು ವಲಸೆ ಕಾರ್ಮಿಕರು ಪೊಲೀಸರ ಕಣ್ತಪ್ಪಿಸಿ ಬತ್ತಿಹೋಗಿರುವ ಭೀಮಾ ನದಿತೀರದ ಮೂಲಕ ಅಕ್ರಮವಾಗಿ ಗಡಿ ದಾಟುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಕಾಲ್ನಡಿಗೆಯಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ನಿತ್ಯವೂ ನೂರಾರು ಜನರು ಪಾಸ್ ಮತ್ತು ಅಧಿಕಾರಿಗಳಿಂದ ಅನುಮತಿಯಿಲ್ಲದೆ ಈ ನದಿಪಾತ್ರದ ಮೂಲಕ ಹಾದುಹೋಗುತ್ತಿದ್ದು ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ವಿಜಯಪುರ ಜಿಲ್ಲೆಯ ಚಡಚನ್ ತಾಲ್ಲೂಕಿನಲ್ಲಿದೆ.

ಒಳ ಮಾರ್ಗಗಳ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ವಲಸಿಗರ ಸಂಖ್ಯೆ ಅಧಿಕವಾಗಿದ್ದು ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ವೈರಸ್ ತಗಲಬಹುದು ಎಂಬ ಭೀತಿಯಲ್ಲಿದ್ದಾರೆ. ಜಿಲ್ಲಾಡಳಿತದ ನೆರವಿನೊಂದಿಗೆ ಪೊಲೀಸರು ಇಲ್ಲಿ ಅಂತರಾಜ್ಯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದರು. ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ. ಇಲ್ಲಿ ಪಾಸ್ ಹೊಂದಿರುವ ವಾಹನಗಳನ್ನು ಮಾತ್ರ ಬಿಡಲಾಗುತ್ತದೆ.

ಮಹಾರಾಷ್ಟ್ರ, ದೆಹಲಿ, ತಮಿಳು ನಾಡು ಮತ್ತು ಗುಜರಾತ್ ರಾಜ್ಯಗಳಿಂದ ಬರುವ ಜನರಿಗೆ ಕರ್ನಾಟಕದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ. ಇದನ್ನು ತಪ್ಪಿಸಲು ಜನರು ಒಳ ಮಾರ್ಗಗಳ ಮೂಲಕ, ನದಿ ತೀರಗಳ ಮೂಲಕ ಹಾದು ಅಕ್ರಮವಾಗಿ ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ವಿಜಯಪುರದಲ್ಲಿ ಸದ್ಯ 67 ಸೋಂಕಿತ ಪ್ರಕರಣಗಳಿದ್ದು ಅವರಲ್ಲಿ ಶೇಕಡಾ 85ರಷ್ಟು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ರಾಮ್ ಎಲ್ ಅರಸಿಡಿ ಗಡಿ ಭಾಗದಲ್ಲಿ ಗಸ್ತುಪಡೆಯನ್ನು ಹೆಚ್ಚಿಸಲಾಗುವುದು. ನದಿ ತೀರದಲ್ಲಿ ಗ್ರಾಮಗಳಲ್ಲಿ ಸಹ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಕ್ರಮವಾಗಿ ಗಡಿ ದಾಟುವಾಗ ಸಿಕ್ಕಿಬಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com