ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

ಕರ್ತವ್ಯನಿರತ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಂತಹ ಸಂದರ್ಭದಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು 20 ಲಕ್ಷದಿಂದ 30 ಲಕ್ಷಕ್ಕೆ ರಾಜ್ಯಸರ್ಕಾರ ಹೆಚ್ಚಿಸಿದೆ
ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿ

ಬೆಂಗಳೂರು: ಕರ್ತವ್ಯನಿರತ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಂತಹ ಸಂದರ್ಭದಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು 20 ಲಕ್ಷದಿಂದ 30 ಲಕ್ಷಕ್ಕೆ ರಾಜ್ಯಸರ್ಕಾರ ಹೆಚ್ಚಿಸಿದೆ. ಈ ವರ್ಷದ ಜೂನ್ ತಿಂಗಳಿನಿಂದಲೇ ಇದು ಜಾರಿಯಾಗಲಿದೆ. ಪೊಲೀಸ್ ಸಿಬ್ಬಂದಿಯಂತೆ ಅರಣ್ಯಾ ಸಿಬ್ಬಂದಿ ಮೃತಪಟ್ಟಾಗ ಅವರ ಕುಟುಂಬ ಸದಸ್ಯರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರು, ಕಳ್ಳರನ್ನು ತಡೆಯುವಾಗ ಅಥವಾ ವನ್ಯಜೀವಿಗಳ ದಾಳಿಯಿಂದ ಅರಣ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಯೋಜನೆಯನ್ನು 2018 ಆಗಸ್ಟ್ ನಿಂದ ಜಾರಿಗೆ ತರಲಾಗಿದೆ.

ಈವರೆಗೂ ರಾಜ್ಯದಲ್ಲಿ ಕರ್ತವ್ಯನಿರತ 49ರಿಂದ 50 ಅರಣ್ಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ 10 ಲಕ್ಷ ರೂ. ಪರಿಹಾರವನ್ನು ಹೆಚ್ಚಿಸುವುದಲ್ಲದೇ, ಪೊಲೀಸರಿಗೆ ಸಮನಾಗಿ ಭತ್ಯೆಯನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದಾಗ್ಯೂ, ದಿವ್ಯಾಂಗರಾದವರಿಗೆ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿರಲಿಲ್ಲ.

ಕರ್ತವ್ಯನಿರತ ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳಿಂದ ಉಪ ಆರ್ ಎಫ್ ಒ, ಫಾರೆಸ್ಟ್ ಗಾರ್ಡ್ಸ್, ಹಾಗೂ ಕವಲುಗಾರರಿಗೆ ಪರಿಹಾರವನ್ನು ನೀಡಲಾಗುತ್ತದೆ.ವಿವಿಧ ಆನೆ ಶಿಬಿರಗಳಲ್ಲಿರುವ ಮಾವುತರು, ಕಾವಾಡಿಗರಿಗೂ ಇದು ಅನ್ವಯವಾಗಲಿದೆ. ಇತ್ತೀಚಿಗೆ ಕಬಿನಿ ಹಿನ್ನೀರಿನ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ವಲಯದಲ್ಲಿ ಇಬ್ಬರು ಅರಣ್ಯ ಇಲಾಖೆ ನೌಕರರು ಮೃತಪಟ್ಟಿದ್ದರು. 

ಅರಣ್ಯ ಪ್ರದೇಶಗಳಲ್ಲಿ ಮರಗಳ ಕಳ್ಳ ಸಾಗಣೆ, ಬೇಟೆಗಾರರ ಕಾನೂನು ಬಾಹಿರ ಚಟುವಟಿಕೆಗಳು ಸಾಮಾನ್ಯ ಎಂಬಂತೆ ಆಗಿ ಬಿಟ್ಟಿವೆ. ಇಂತಹ ದುರಂತದ ಸಂದರ್ಭದಲ್ಲಿ ಮೃತಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಗಳ ಕುಟುಂಬ ಸದಸ್ಯರಿಗೆ ವಿಮೆ, ಅಥವಾ ವಿಶೇಷ ಭತ್ಯೆಯನ್ನು ನೀಡುತ್ತಿಲ್ಲ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸಂಜಯ್ ಗುಬ್ಬಿ ಹೇಳುತ್ತಾರೆ. 

ಅರಣ್ಯ ಸಂರಕ್ಷಿಸುತ್ತಿರುವ ದಿನಗೂಲಿ ನೌಕರರಿಗೂ ಪರಿಹಾರವನ್ನು ನೀಡಬೇಕು, ಅನೇಕ ಮಂದಿ ಕವಲುಗಾರರು ತೀವ್ರ ರೀತಿಯ ಗಾಯಗಳಿಂದ ಮೃತಪಡುತ್ತಿದ್ದಾರೆ ಅಂತಹವರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರ ಪರಿಹಾರ ಸಮಸ್ಯೆಯನ್ನು ಪರಿಹರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಅದು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು  ಪರಿಸರ ಹೋರಾಟಗಾರರೊಬ್ಬರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com