ರಾಯಚೂರಿನಲ್ಲಿ ಕೋವಿಡ್-19 ಆಸ್ಪತ್ರೆಯ 6 ಸಿಬ್ಬಂದಿ ಸೇರಿ 14 ಮಂದಿಗೆ ಸೋಂಕು ದೃಢ

ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿದ್ದು, ಇಂದು ರಾಯಚೂರು ಜಿಲ್ಲೆಯೊಂದರಲ್ಲೇ ಕೋವಿಡ್-19 ಆಸ್ಪತ್ರೆಯ 6 ಸಿಬ್ಬಂದಿ ಸೇರಿ 14 ಮಂದಿಗೆ ಸೋಂಕು  ದೃಢವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಯಚೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿದ್ದು, ಇಂದು ರಾಯಚೂರು ಜಿಲ್ಲೆಯೊಂದರಲ್ಲೇ ಕೋವಿಡ್-19 ಆಸ್ಪತ್ರೆಯ 6 ಸಿಬ್ಬಂದಿ ಸೇರಿ 14 ಮಂದಿಗೆ ಸೋಂಕು  ದೃಢವಾಗಿದೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 375 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ ದೇವದುರ್ಗ ತಾಲೂಕಿನಿಂದ 39, ಲಿಂಗಸೂಗೂರು ತಾಲೂಕಿನಿಂದ 5, ಮಾನ್ವಿ ತಾಲೂಕಿನಿಂದ 7, ಸಿಂಧನೂರು ತಾಲೂಕಿನಿಂದ 18 ಮತ್ತು ರಾಯಚೂರು ತಾಲೂಕಿನಿಂದ 71 ಸೇರಿದಂತೆ ಗುರುವಾರ 140 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೋವಿಡ್-19 ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ 186 ನೆಗೆಟಿವ್ ಆಗಿವೆ. ಒಟ್ಟಾರೆ ಜಿಲ್ಲೆಯಿಂದ ಇದುವರೆಗೆ 17, 897 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 16, 151 ವರದಿಗಳು ನೆಗೆಟಿವ್ ಆಗಿವೆ. ಉಳಿದ 1,366 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್, ನಾಲ್ವರು ಮಹಾರಾಷ್ಟ್ರದಿಂದ ವಾಪಸಾದವರು, ಒಬ್ಬ ಮಹಿಳೆ ಮಸ್ಕಿಯ ಸೋಂಕಿತರ ಸಂಪರ್ಕದಲ್ಲಿದ್ದವರಲ್ಲಿ ಹಾಗೂ ಒಬ್ಬರಲ್ಲಿ ಇನ್ಪ್ಯೂಯೆಂಜಾ ಮಾದರಿ ಅನಾರೋಗ್ಯ ಕಾಣಿಸಿಕೊಂಡಿದೆ. ಜೂ.9 ರಂದು ಸಂಜೆ ಮಾನ್ವಿ ತಾಲೂಕಿನ ಹರವಿ ಗ್ರಾಮದ 60 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಅವರ ಗಂಟಲಿನ ದ್ರವದ ಮಾದರಿ ಲ್ಯಾಬ್‌ಗೆ ಕಳುಹಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಆ ವ್ಯಕ್ತಿಗೆ ಹೃದಯದ ಸಂಬಂಧಿ ಕಾಯಿಲೆ ಹಾಗೂ ಕಿಡ್ನಿ ತೊಂದರೆಯಿತ್ತು. ಹೀಗಾಗಿ ಇವರ ಸಾವನ್ನು ಕೊರೊನಾದಿಂದಲೇ ಆಗಿದೆ ಎಂದು ಹೇಳಲಾಗದು.

ಕೋವಿಡ್ ಪ್ರೋಟೋಕಾಲ್ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲ. ನರ್ಸಗಳು ಮತ್ತು ಕೋವಿಡ್ ಆಸ್ಪತ್ರೆಯ ಸೋಂಕಿತರ ಸಿಬ್ಬಂದಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡಲಾಗುತ್ತಿದ್ದು ಅವರನ್ನು ಐಸೋಲೇಷನ್ ಮಾಡಲಾಗುವುದು ಎಂದು ಯಚೂರು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com