ಮಂಡ್ಯ: ಜಾನುವಾರು ತೊಳೆಯಲು ಹೋದ ಇಬ್ಬರು ನಾಲೆ ಪಾಲು
ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಯುವಕ ಹಾಗೂ ಬಾಲಕ ಹೇಮಾವತಿ ನಾಲೆಯಲ್ಲಿ ಮುಳುಗಿ ಸಾವನಪ್ಪಿರವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಹುರುಳಿ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ಜರುಗಿದೆ.
Published: 14th June 2020 09:31 PM | Last Updated: 14th June 2020 09:31 PM | A+A A-

ಸಾಂದರ್ಭಿಕ ಚಿತ್ರ
ಮಂಡ್ಯ: ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಯುವಕ ಹಾಗೂ ಬಾಲಕ ಹೇಮಾವತಿ ನಾಲೆಯಲ್ಲಿ ಮುಳುಗಿ ಸಾವನಪ್ಪಿರವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಹುರುಳಿ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ಜರುಗಿದೆ.
ಹುರುಳಿ ಗಂಗನಹಳ್ಳಿ ಗ್ರಾಮದ ಲೇ|| ಸ್ವಾಮೀಗೌಡ ಎಂಬುವರ ಪುತ್ರ ಅಭಿಷೇಕ್(೧೫) ಮತ್ತು ಆದಿಹಳ್ಳಿ ಗ್ರಾಮದ ಜವರೇಗೌಡ ಎಂಬುವರ ಪುತ್ರ ಕುಮಾರ್(೨೫) ನೀರು ಪಾಲಾದ ದುರ್ದೈವಿಗಳಾಗಿದ್ದಾರೆ.
ಘಟನೆ ವಿವರ
ಭಾನುವಾರ ಬೆಳಗ್ಗೆ ಸುಮಾರು ೧೦ಗಂಟೆ ಸಮಯದಲ್ಲಿ ಅಭಿಷೇಕ್ ಮತ್ತು ಕುಮಾರ್ ಗ್ರಾಮದ ಬಳಿ ಇರುವ ಹೇಮಾವತಿ ಕಾಲುವೆಯ ನೀರಿನಲ್ಲಿ ತಮ್ಮ ಜಾನುವಾರುಗಳನ್ನು(ಹಸುಗಳು) ತೊಳೆಯಲು ಹೋಗಿದ್ದರು.
ಈ ಸಂದರ್ಭದಲ್ಲಿ ಅಭಿಷೇಕ್ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯೊಳಗಿದ್ದ ಹೊಂಡದಂತಹ ಜಾಗದಲ್ಲಿ ನೀರೊಳಗೆ ಬಿದ್ದಿದ್ದಾನೆ. ತಕ್ಷಣ ಅಭಿಷೇಕ್ನನ್ನು ರಕ್ಷಿಸಲು ಹೋದ ಕುಮಾರ್ ಸಹ ನೀರಿನಲ್ಲಿ ಮುಳುಗಿದ್ದು, ಇಬ್ಬರು ಕಾಲುವೆ ಪಾಲಾಗಿದ್ದಾರೆ.
ಜಾನುವಾರುಗಳು ಈಜಿ ದಡ ಸೇರಿದ್ದು, ಕೆ.ಆರ್.ಪೇಟೆ ಪಟ್ಟಣದ ಅಗ್ನಿಶಾಮಕ ಠಾಣೆಯ ಅಧಿಕಾರಿ ಶ್ರೀನಿವಾಸರಾವ್ ನೇತೃತ್ವದ ಅಧಿಕಾರಿಗಳ ತಂಡ ಮೃತರ ಶವಗಳನ್ನು ನೀರಿನಿಂದ ಮೇಲೆತ್ತಿ ವಾರಸುದಾರರಿಗೆ ನೀಡಿದ್ದಾರೆ.
ಮೃತ ಅಭಿಷೇಕ್ ಕೊರಟೀಕೆರೆ ಶ್ರೀ ಚನ್ನಕೇಶವ ಅನುಧಾನಿತ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದು, ಕುಮಾರ್ ಅವರು ಅಭಿಷೇಕ್ ನ ಸೋದರ ಮಾವನಾಗಿದ್ದಾರೆ. ಕುಮಾರ್ ಅವರು ಅಕ್ಕನ ಮನೆ ಗಂಗನಹಳ್ಳಿಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ.
ವಿದ್ಯಾರ್ಥಿ ಅಭಿಷೇಕ್ ನಿಧನಕ್ಕೆ ಶ್ರೀ ಚನ್ನಕೇಶವ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಹಾಗೂ ಶಿಕ್ಷಕ ವೃಂದದವರು ಕಂಬನಿ ಮಿಡಿದಿದ್ದಾರೆ.
ತಾಲೂಕು ಎಪಿಎಂಸಿ ಅಧ್ಯಕ್ಷ ಜೆ.ಚಂದ್ರಹಾಸ ಮತ್ತು ಉಪಾಧ್ಯಕ್ಷೆ ಮಂಜಮ್ಮ ಅವರು ಮೃತ ಅಭಿಷೇಕ್ ಮತ್ತು ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇವರ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
-ನಾಗಯ್ಯ