ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ ಪುರುಸೋತ್ತು; ಆಯಕಟ್ಟಿನ ಸ್ಥಾನಗಳ ನೇಮಕ ವಿಳಂಬ

ಆಲಮಟ್ಟಿ ಜಲಾಶಯದ ಹಿನ್ನೀರು ಬಾಧೀತ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಪಾಲಿನ ಸಂಜೀವಿನಿ ಆಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ ರಾಜ್ಯಾಧಿಕಾರ ಸೂತ್ರ ಹಿಡಿದು ವರ್ಷವಾಗುತ್ತ ಬಂದರೂ ಆಡಳಿತ ಮಂಡಳಿ ಅಸ್ತಿತ್ವ ಬರುವುದು ಸಾಧ್ಯವಾಗಿಲ್ಲ.
ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ಕಚೇರಿ
ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ಕಚೇರಿ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರು ಬಾಧೀತ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಪಾಲಿನ ಸಂಜೀವಿನಿ ಆಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ ರಾಜ್ಯಾಧಿಕಾರ ಸೂತ್ರ ಹಿಡಿದು ವರ್ಷವಾಗುತ್ತ ಬಂದರೂ ಆಡಳಿತ ಮಂಡಳಿ ಅಸ್ತಿತ್ವ ಬರುವುದು ಸಾಧ್ಯವಾಗಿಲ್ಲ.

ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ಕಚೇರಿ ಒಂದೊಮ್ಮೆ ಬೆಂಗಳೂರಿನಲ್ಲೇನಾದರು ಇದ್ದಿದ್ದರೆ ರಾಜ್ಯ ಗೃಹ ಮಂಡಳಿ, ಕೋಳಚೆ ನಿರ್ಮೂಲನಾ ಮಂಡಳಿ, ನೀರು ಸರಬರಾಜು ಮಂಡಳಿ ಅಧ್ಯಕ್ಷಸ್ಥಾನಕ್ಕಾಗಿ ಪೈಪೋಟಿ ನಡೆಯುವಂತೆ ಸಭಾಪತಿ ಸ್ಥಾನಕ್ಕೂ ಇನ್ನಿಲ್ಲದ ಪೈಪೋಟಿಯೇ ನಡೆಯುತ್ತಿತ್ತು. ಅಷ್ಟೊಂದು ಮಹತ್ವದ ಸ್ವಾಯತ್ತ ಸಂಸ್ಥೆ ಇದಾಗಿದೆ.

ಆಲಮಟ್ಟಿ ಜಲಾಶಯದ ಹಿನ್ನೀರು ಬಾಧಿತ ಬಾಗಲಕೋಟೆ ಪಟ್ಟಣದ ಸಂತ್ರಸ್ತರಿಗೆ ಪರಿಹಾರ ನೀಡಿಕೆ, ಸ್ಥಳಾಂತರ, ಪುನರ್ ವಸತಿ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತಹ ಗುರುತರ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಸಂಸ್ಥೆ ಇದಾಗಿದೆ. 
ಆಲಮಟ್ಟಿ ಜಲಾಶಯದ ಎತ್ತರವನ್ನು ೫೧೯.೬೦ ರಿಂದ ೫೨೪.೨೫೪ ಮೀಟರ್‌ಗೆ ಹೆಚ್ಚಿಸಬೇಕಿರುವ ಹಿನ್ನೆಲೆಯಲ್ಲಿ ಬಿಟಿಡಿಎ ಬಾಗಲಕೋಟೆಯ ಬಾಧಿತ ಪ್ರದೇಶಗಳ ಮುಳುಗಡೆ ಸಂತ್ರಸ್ತರಿಗಾಗಿ ಮೂರನೇ ಹಂತದ ಯೋಜನೆ ಅನುಷ್ಠಾನಗೊಳಿಸಬೇಕಿದೆ.

ಜತೆಗೆ ನಾನಾ ಕಾರಣಗಳಿಗಾಗಿ ಈಗಾಗಲೇ ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಎರಡು ಹಂತಗಳ ಪುನರ್ವಸತಿ ಕೇಂದ್ರಗಳ ಸಮರ್ಪಕ ನಿರ್ವಹಣೆ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಬೇಕಿದೆ. ನವನಗರ ಯುನಿಟ್-೧ ಮತ್ತು ೨ ಇನ್ನೂ ಬಿಟಿಡಿಎ ಸುಪರ್ದಿಯಲ್ಲೇ ಇದ್ದು, ಇವುಗಳು ನಗರಸಭೆಗೆ ಹಸ್ತಾಂತರಗೊಂಡಿಲ್ಲ.

ಎಷ್ಟೆಲ್ಲ ಮಹತ್ವದ ಕಾರ್ಯ ನಿರ್ವಹಣೆ ಮಾಡಬೇಕಿರುವ ಬಿಟಿಡಿಎಗೆ ಇದುವರೆಗೂ ಆಡಳಿತ ಮಂಡಳಿ ನೇಮಕ ಆಗಿಲ್ಲ. ಜತೆಗೆ ಜಿಲ್ಲೆಯ ಇತರ ನಗರ ಯೋಜನಾ ಪ್ರಾಧಿಕಾರಿಗಳಿಗೂ ಆಡಳಿತ ಮಂಡಳಿ ನೇಮಕ ಆಗಬೇಕಿದೆ. ಅದೇಕೋ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಈ ಬಗ್ಗೆ ಸೂಕ್ತ ಗಮನ ಹರಿಸಲು ಪುರುಸೋತ್ತು ಸಿಕ್ಕಂತೆ ಕಾಣಿಸುತ್ತಿಲ್ಲ.

ಇಷ್ಟು ಹೊತ್ತಿಗೆ ಸಂಬಂಧ ಪಟ್ಟ ಕ್ಷೇತ್ರಗಳ ಶಾಸಕರು ಹಾಗೂ ಮುಖಂಡರ ಅಭಿಪ್ರಾಯ ಪಡೆದು ಆಡಳಿತ ಮಂಡಳಿ ನೇಮಕ ಮಾಡಿ, ಸುಗಮ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಬಿಟಿಡಿಎ ಸಭಾಪತಿ ಸ್ಥಾನ ಸೇರಿದಂತೆ ಜಿಲ್ಲೆಯ ಇತರ ಕಡೆಗಳಲ್ಲಿನ ನಗರಯೋಜನಾ ಪ್ರಾಧಿಕಾರಿಗಳ ಹುದ್ದೆಗಳಿಗೆ ಬಿಜೆಪಿ ಮುಖಂಡರಲ್ಲಿ ಸಾಕಷ್ಟು ಪೈಪೋಟಿ ಇದ್ದರೂ ಯಾರೂ ಗಮನ ಹರಿಸುವವರೇ ಇಲ್ಲವಾಗಿದೆ.

ಆಡಳಿತ ಮಂಡಳಿ ನೇಮಕ ವಿಳಂಬದಿಂದಾಗಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕೇಂದ್ರಗಳ ಸಮರ್ಪಕ ನಿರ್ವಹಣೆ ಅಸಾಧ್ಯವಾಗಿದೆ. ಹಾಗೆ ನಗರ ಯೋಜನಾ ಪ್ರಾಧಿಕಾರಗಳೂ ಹೊಸ ಪ್ರದೇಶಗಳ ನಿರ್ಮಾಣ, ಈಗಾಗಲೇ ಅಭಿವೃದ್ದಿ ಪಡಿಸಲಾಗಿರುವ ಪ್ರದೇಶಗಳಿಗೆ ಅನುಮತಿ ನೀಡುವುದಕ್ಕೆ ವಿಳಂಬವಾಗುತ್ತಿದೆ.

ಸರ್ಕಾರ ಈಗಾಗಲೇ ಅನೇಕ ಪ್ರಮುಖ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡಿದ್ದು, ಜಿಲ್ಲೆಯ ಪ್ರಮುಖ ಹುದ್ದೆಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಬೇಕಿದೆ. ಇದರಿಂದ ಸುಗಮ ಆಡಳಿತ ಸಾಧ್ಯವಾಗುವ ಜತೆಗೆ ಸರ್ಕಾರದಲ್ಲಿ ಪಕ್ಷದ ಕಾರ್ಯಕರ್ತರೂ ಸಕ್ರೀಯವಾಗಿ ಭಾಗಹಿಸಲು ಅವಕಾಶ ಕಲ್ಪಿಸಿದಂತಾಗಲಿದೆ.

ನೇಮಕ ವಿಳಂಬವಾದಂತೆ ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನು ಆಡಳಿತಾರೂಢ ಪಕ್ಷದ ಮುಖಂಡರು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕಿಂತ ಆಡಳಿತ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾರುಪತ್ಯವೇ ಹೆಚ್ಚಾಗಲಿದೆ. ಪಕ್ಷದ ಕಾರ್ಯಕರ್ತರನ್ನು ಕ್ಯಾರೇ ಎನ್ನುವವರು ಇಲ್ಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯಾಡಳಿತ ಭಾರದ ಮಧ್ಯೆಯೇ ಜಿಲ್ಲಾಡಳಿತದ ಬಗೆಗೂ ಗಮನ ಹರಿಸುವರೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಸುಗಮ ಆಡಳಿತ ಮತ್ತು ಕಾರ್ಯಕರ್ತರ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ನೇಮಕ ಆಗಬೇಕು ಎನ್ನುವುದು ಜಿಲ್ಲೆಯ ಬಿಜೆಪಿ ಮುಖಂಡರ ಆಗ್ರಹವಾಗಿದ್ದು, ನೇಮಕ ವಿಳಂಬ ನೀತಿಯನ್ನು ಎಲ್ಲಿಯೂ ಬಹಿರಂಗವಾಗಿ ಖಂಡಿಸುವ ಸ್ಥಿತಿಯಲ್ಲಿ ಕಾರ್ಯಕರ್ತರು ಇಲ್ಲ ಎನ್ನುವುದು ದುರದೃಷ್ಟಕರ ಸಂಗತಿ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com