ಕೊರೋನಾ ಹೋರಾಟದಿಂದ ವಿಮುಖರಾಗಲು ನಿರ್ಧಾರ: ರಾಜಿನಾಮೆ ನೀಡಲು ಮುಂದಾದ 507 ಗುತ್ತಿಗೆ ವೈದ್ಯರು

ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೀನಾ ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಗುತ್ತಿಗೆ ವೈದ್ಯರು ತಮ್ಮ ಕೆಲಸಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೀನಾ ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಗುತ್ತಿಗೆ ವೈದ್ಯರು ತಮ್ಮ ಕೆಲಸಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸುಮಾರು 507 ಗುತ್ತಿಗೆ ವೈದ್ಯರು  ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕೊರೊನಾ ಹೋರಾಟದ ಕರ್ತವ್ಯದಿಂದ ವಿಮುಖರಾಗಲಿದ್ದಾರೆ.

ಬೇಡಿಕೆ ಈಡೇರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿಕೊಂಡರೂ ಯಾವುದೇ ಭರವಸೆ ಸಿಕ್ಕಿಲ್ಲ . ಕಳೆದ 3 ವಷಗಳಿಂದ ಗುತ್ತಿಗೆ ವೈದ್ಯರು ರಾಜ್ಯದ ವಿವಿಧ ಸೇವೆ ಸಲ್ಲಿಸುತ್ತಿದ್ದು ತಮ್ಮ ಸೇವಾವಧಿಯನ್ನು ಖಾಯಂಗೊಳಿಸುವುದು ಹಾಗೂ ವೇತನ ಪರಿಷ್ಕರಣೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು. ವೈದ್ಯರಿಗೆ ಸರ್ಕಾರ 45,000 ಸಂಬಳ ನೀಡುತ್ತಿದೆ. 

ಗುತ್ತಿಗೆ ವೈದ್ಯರು 3 ರಿಂದ 7 ವರ್ಷದವರೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇನ್ನೂ ಕೆಲಸದಲ್ಲಿ ಖಾಯಂಗೊಳಿಸಿಲ್ಲ. ಹೀಗಾಗಿ  ಕೊನೆಗೆ ರಾಜೀನಾಮೆ ಅಸ್ತ್ರಕ್ಕೆ ವೈದ್ಯರು ಮುಂದಾಗಿದ್ದಾರೆ.

ಈ ಸಂಬಂಧ ಗುತ್ತಿಗೆ ವೈದ್ಯರ ಸಂಘದ ಪದಾಧಿಕಾರಿಗಳು ಸಿಎಂ ಬಿಎಸ್‍ವೈ , ಸಚಿವ ಶ್ರೀರಾಮುಲು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರನ್ನು ಭೇಟಿಯಾಗಿ ಬೇಡಿಕೆಯನ್ನು ಸಲ್ಲಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ 3 ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಖಾಯಂ ಮಾಡಿತ್ತು. ಕಳೆದ ಮೂರು ವರ್ಷಗಳಿಂದ ಗುತ್ತಿಗೆ ವೈದ್ಯರಿಗೆ ಆ ಭಾಗ್ಯವೂ ಸಿಗುತ್ತಿಲ್ಲ. ಹಳ್ಳಿಗಳಿಗೆ ಹೋಗಿ ಎನ್ನುವ ಸರ್ಕಾರದಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ಇಂದು ಗುತ್ತಿಗೆ ವೈದ್ಯರು ಸಚಿವ ಶ್ರೀರಾಮುಲುಗೆ ಅವರ ಮನೆಗೆ ತೆರಳಿದ್ದು, ರಾಜೀನಾಮೆ ನೀಡಿ, ಸೇವೆ ಖಾಯಂ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ನಂತರ ಕಾಲ್ನಡಿಗೆಯಲ್ಲಿ ಮುಖ್ಯಮಂತ್ರಿ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸಿ, ತಮ್ಮ ಬೇಡಿಕೆಗಳನ್ನು ತಿಳಿಸಲಿದ್ದಾರೆ.

ಸದ್ಯ, ಗುತ್ತಿಗೆ ವೈದ್ಯರಿಗೆ ಸರ್ಕಾರ 45,000 ರೂಪಾಯಿ ಸಂಬಳ ನೀಡುತ್ತಿದೆ, ಖಾಯಂ ವೈದ್ಯರಿಗೆ ಸರ್ಕಾರದಿಂದ 80,000 ರೂಪಾಯಿ ಸಂಬಳ ಸಿಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ಗುತ್ತಿಗೆ ವೈದ್ಯರಿಗೆ ಸರ್ಕಾರ 60,000 ರೂಪಾಯಿ ಸಂಬಳ ಘೋಷಿಸಿತ್ತು ಎಂದು‌ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com