ಬೆಂಗಳೂರು: ಸರ್ಕಾರಿ ಉದ್ಯೋಗದ ಆಮಿಷ ತೋರಿ ಶಿಕ್ಷಕರಿಗೆ 98 ಲಕ್ಷ ರೂ. ದೋಖಾ, ದೂರು ದಾಖಲು

ಸರ್ಕಾರಿ ನೌಕರಿ ಸಿಗಲಿದೆ ಎಂಬ ಆಸೆಯಿಂದ ಲಕ್ಷ ಲಕ್ಷ ಹಣ ನೀಡಿದ್ದ 80 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು,ಈಗ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ವಂಚನೆಗೆ ಒಳಗಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಸದ್ಯ ಈ ಶಿಕ್ಷಕರು ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ಧ ದೊಡ್ಡಬಳ್ಳಾಪುರ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರಿ ನೌಕರಿ ಸಿಗಲಿದೆ ಎಂಬ ಆಸೆಯಿಂದ ಲಕ್ಷ ಲಕ್ಷ ಹಣ ನೀಡಿದ್ದ 80 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು,ಈಗ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ವಂಚನೆಗೆ ಒಳಗಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಸದ್ಯ ಈ ಶಿಕ್ಷಕರು ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ಧ ದೊಡ್ಡಬಳ್ಳಾಪುರ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

ಘಟನೆ ವಿವರ:
ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿ ಭರವಸೆ ನೀಡಿದ್ದ ವ್ಯಕ್ತಿಯೊಬ್ಬ ಖಾಸಗಿ ಶಾಲಾ ಶಿಕ್ಷಕರಿಂದ ತಲೆಗೆ 2.5 ಲಕ್ಷ ರೂ. ನಂತೆ ಪಡೆದು ಬದಲಿಯಾಗಿ ಅವರುಗಳಿಗೆ ನಕಲಿ ನೇಮಕಾತಿ ಆದೇಶ ಪತ್ರ ನೀಡಿ ವಂಚಿಸಿದ್ದಾನೆ. 80 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ಆ ವ್ಯಕ್ತಿಗೆ ಒಟ್ಟೂ ಸುಮಾರು 98 ಲಕ್ಷ ರೂಪಾಯಿ ನೀಡಿದ್ದಾರೆ.ಅದಕ್ಕೆ ಬದಲಾಗಿ ಆ ವ್ಯಕ್ತಿ ವಿವಿಧ ಶಿಕ್ಷಕರಿಗೆ ವಿವಿಧೆಡೆಯ ಜಿಲ್ಲೆಗಳಿಂದ 10 ಕ್ಕೂ ಹೆಚ್ಚು ಇಲಾಖೆಗಳಲ್ಲಿ ವಿವಿಧ ಉದ್ಯೋಗಗನಕಲಿ ನೇಮಕಾತಿ ಆದೇಶಪತ್ರ ನೀಡಿದ್ದಾನೆ. ಈ ಆದೇಶ ಪತ್ರ ಕೈಸೇರಿದ ಬೆನ್ನಲ್ಲೇ ಆ ಎಲ್ಲಾ ಶಿಕ್ಷಕರು ತಮ್ಮ ನೌಕರಿಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ತಾವು ನೇಮಕಾತಿ ಆದೇಶವನ್ನು ಹಿಡಿದು ನೌಕರಿಗೆ ಸೇರಲು ಹೋದಾಗಲೇ ಅವರುಗಳು ವಂಚನೆಗೆ ಒಳಗಾಗಿರುವುದು ಪತ್ತೆಯಾಗಿದೆ. ಇದೀಗ ಅವರುಗಳಿಗೆ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ಪರಿಪಾಟಲು ಪಡುವಂತಾಗಿದೆ.

ದೊಡ್ಡಬಳ್ಳಾಪುರದ ಚಿಕ್ಕಪೇಟೆಯಲ್ಲಿ ನೆಲೆಸಿರುವ ಮಹೇಶ್ ಹೀಗೆ ಶಿಕ್ಷಕರನ್ನು ವಂಚನೆ ಮಾಡಿದ ವ್ಯಕ್ತಿ. ಈತ ಹಲವಾರು ಶಿಕ್ಷಕರ ವಿಶ್ವಾಸ ಗಳಿಸಿ ಅವರಿಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು  ವಂಚನೆಗೊಳಗಾದ ಶಿಕ್ಷಕ ಹನುಮಂತರಾಯಪ್ಪ ಹೇಳಿದ್ದಾರೆ. ಮಹೇಶ್  ಜನರಿಂದ ಹಣವನ್ನು ಸಂಗ್ರಹಿಸಿದ್ದ. ಅದೂ ಒಂದೆರಡಲ್ಲ ಬರೋಬ್ಬರಿ 98 ಲಕ್ಷ ರೂ ಸಂಗ್ರಹಿಸಿದ್ದನೆಂದು ಅವರು ಮಾಹಿತಿ ಕೊಟ್ಟಿದ್ದಾರೆ.

ಸಧ್ಯ ಆರೋಪಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸರ್ಕಾರಿ ಉದ್ಯೋಗದ ಭರವಸೆ ನೀಡಿ ಜನರನ್ನು ಮೋಸ ಮಾಡಿದ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಟಿ.ರಂಗಪ್ಪ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com