ಕ್ಯಾನ್ಸರ್ ರೋಗಿಯಲ್ಲಿ ಕೊರೋನಾ ಪತ್ತೆ: ಇಬ್ಬರು ನರ್ಸ್, 6 ವೈದ್ಯರು ಕ್ವಾರಂಟೈನ್ ಗೆ

ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕ್ಯಾನ್ಸರ್ ರೋಗಿಯೊಬ್ಬರಲ್ಲಿ ಕೊರೋನಾ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ನರ್ಸ್ ಗಳು ಹಾಗೂ 6 ಮಂದಿ ವೈದ್ಯರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. 
ಕಿದ್ವಾಯಿ ಆಸ್ಪತ್ರೆ
ಕಿದ್ವಾಯಿ ಆಸ್ಪತ್ರೆ

ಬೆಂಗಳೂರು: ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕ್ಯಾನ್ಸರ್ ರೋಗಿಯೊಬ್ಬರಲ್ಲಿ ಕೊರೋನಾ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ನರ್ಸ್ ಗಳು ಹಾಗೂ 6 ಮಂದಿ ವೈದ್ಯರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. 

ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದ್ದ ಹಿನ್ನೆಲೆಯಲ್ಲಿ 28 ವರ್ಷದ ಮಹಿಳೆ ಬುಧವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ನಿಯಮದ ಅನುಸಾರ ರೋಗಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಇದೀಗ ಮಹಿಳೆಯಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. 15 ದಿನಗಳ ಹಿಂದೆ ಕೂಡ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ವೈರಸ್ ಇಲ್ಲದಿರುವುದು ಕಂಡು ಬಂದಿತ್ತು. ಇದೀಗ ವೈರಸ್ ಇರುವುದು ದೃಢಪಟ್ಟಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. 

ಮಹಿಳೆ ಬೆಂಗಳೂರು ಮೂಲದ ನಿವಾಸಿಯಾಗಿದ್ದು, ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಕೊರೋನಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇನ್ನು ಸೋಂಕಿತ ಮಹಿಳೆ ಈ ಹಿಂದೆ ದಾಖಲಾಗಿದ್ದ ವಾರ್ಡ್ ನಲ್ಲಿ ಇನ್ನೂ 7 ಮಂದಿ ರೋಗಿಗಳಿದ್ದು, ಅವರನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ. 

ಸೋಂಕಿತ ಮಹಿಳೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿರಲಿಲ್ಲ. ಇನ್ನೂ ನಾಲ್ಕು ವಾರಗಳ ನಂತರ ಕೂಡ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ಈಗಾಗಲೇ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com