ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಪುತ್ರನಿಂದನೇ ಉದ್ಯಮಿ ತಂದೆಯ ಕೊಲೆ: ಪ್ರಕರಣ ಭೇದಿಸಿದ ದಕ್ಷಿಣ ವಿಭಾಗದ ಪೊಲೀಸರು

ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಪುತ್ರನೇ ತನ್ನ ತಂದೆಯನ್ನು ಕೊಲೆ ಮಾಡಿರುವ ಪ್ರಕರಣವನ್ನು ಭೇದಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಪುತ್ರನೇ ತನ್ನ ತಂದೆಯನ್ನು ಕೊಲೆ ಮಾಡಿರುವ ಪ್ರಕರಣವನ್ನು ಭೇದಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದೇ ವರ್ಷದ ಫೆಬ್ರವರಿ 14ರಂದು ನಡೆದ ಬಳ್ಳಾರಿಯ ಸ್ಟೀಲ್ ಆಂಡ್‌ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ ಅವರ ಸುಪಾರಿ ಕೊಲೆ ಹಂತಕರನ್ನು ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. 

ಪ್ರಮುಖ ಆರೋಪಿಗಳಾದ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಮಾಧವ ಕಿರಿಯ ಮಗ ಹರಿಕೃಷ್ಣ ತಲೆಮರೆಸಿಕೊಂಡಿದ್ದಾರೆ.

ಗೋವಾದ ಮಡಗಾಂ ನಗರದ ಮೀನು ವ್ಯಾಪಾರಿ ರಿಯಾಜ್ ಅಬ್ದುಲ್ ಶೇಖ್ (40), ಯಲಹಂಕ ಕೋಗಿಲು ಕ್ರಾಸ್ ನಲ್ಲಿ ಮೊಬೈಲ್ ಸರ್ವೀಸ್ ಕೆಲಸ ಮಾಡುವ ಶಹಬಾಜ್ (23), ಗೋವಾದ ಮಡಗಾಂ ಕಾರೆವಾನ್‌ನ ಕಾರ್ಪೆಂಟರ್ ಕೆಲಸ ಮಾಡುತ್ತಿರುವ ಶಾರೂಕ್‌ ಮನ್ಸೂರ್ (24), ಯಶವಂತಪುರದ ಬಿ.ಕೆ.ನಗರ ಆಟೋ ಚಾಲಕ ಆದಿಲ್ ಖಾನ್ (28), ಶಾಮಣ್ಣ ಗಾರ್ಡನ್‌ನಲ್ಲಿ ಕಾರ್ಪೆಂಟರ್ ಕೆಲಸ ಮಾಡುವ ಸಲ್ಮಾನ್ (24) ಬಂಧಿತ ಆರೋಪಿಗಳು.

ಕೊಲೆಯ ಹಿನ್ನೆಲೆ: 
ಬಳ್ಳಾರಿಯ ನಿವಾಸಿ ಸಿಂಗನಮನ ಮಾಧವ ಅವರು ಖ್ಯಾತ ಉದ್ಯಮಿಯಾಗಿದ್ದು, ಬಳ್ಳಾರಿಯಲ್ಲಿ ಸ್ಟೀಲ್ ಆಂಡ್ ಅಲೈ ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಲಾಳ ಮುಖ್ಯರಸ್ತೆ ರಾಯಲ್ ಫಾಮ್ಸ್ ಬಡಾವಣೆಯಲ್ಲಿ ತಮ್ಮ ಪತ್ನಿ ಪಾರ್ವತಿ, ಎರಡನೇ ಪುತ್ರ ಮಧುಬಾಬು ಅವರೊಂದಿಗೆ ವಾಸವಾಗಿದ್ದರು. 

ಮೃತ ಮಾಧವ ಅವರೊಂದಿಗೆ ಅವರ ತಮ್ಮ ಶಿವರಾಮ್ ಪ್ರಸಾದ್ ಹಾಗೂ ಮಾಧವ ಅವರ ಕಿರಿಯ ಮಗ ಹರಿಕೃಷ್ಣ ಆಸ್ತಿಯ ವಿಚಾರದಲ್ಲಿ ಹಲವು ಬಾರಿ ಜಗಳವಾಡಿದ್ದರು. 2020, ಫೆಬ್ರವರಿ 14ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಾಧವ ಅವರು ಗುಬ್ಬಲಾಳ ಮುಖ್ಯರಸ್ತೆಯ ರಾಯಲ್ ಫಾಮ್ಸ್ ಲೇಔಟ್‌ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಕತ್ತನ್ನು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದರು.

ಮೃತರ ಕಿರಿಯ ಮಗ ಹರಿಕೃಷ್ಣ ಹಾಗೂ ಮೃತರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಇತರರು ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಕಟೋಚ್ ಅವರ ಆದೇಶದಂತೆ ಸುಬ್ರಹ್ಮಣ್ಯಪುರ ಉಪ ವಿಭಾಗದ ಸಹಾಯಕ ಆಯುಕ್ತರು, ತಲಘಟ್ಟಪುರ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ರಾಮಪ್ಪ ಗುತ್ತೇರ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.

ಈ ತಂಡ ಆರೋಪಿಗಳ ಸಮಗ್ರ ಮಾಹಿತಿ ಸಂಗ್ರಹಿಸಿ, ಪಾಂಡಿಚೇರಿ, ಆನಂತಪುರ, ಗೋವಾ, ಪೂನಾ, ಮುಂಬೈ, ಬೆಳಗಾವಿ, ಬಳ್ಳಾರಿ ಕಡೆ ಸಂಚರಿಸಿ ಕೊನೆಗೆ ಮೂರನೇ ಆರೋಪಿ ರಿಯಾಜ್‌ ಅಲಿಯಾಸ್ ಗೋವಾ ರಿಯಾಸ್‌ನನ್ನು ಗೋವಾದಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದರು. 

ವಿಚಾರಣೆಗೆ ವೇಳೆ ರಿಯಾಜ್ ಕೊಲೆಯ ಬಗ್ಗೆ ಮಾಹಿತಿ ನೀಡಿ, ಸಿಂಗನಮಲ ಮಾಧವ ಅವರ ಮಗ ಹರಿಕೃಷ್ಣ ಹಾಗೂ ಮಾಧವರ ಅವರ ತಮ್ಮ ಶಿವರಾಮ್‌ ಪ್ರಸಾದ್ ಇಬ್ಬರೂ ಮಾಧವ ಅವರನ್ನು ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ಕೊಟ್ಟಿರುವುದನ್ನು ಬಾಯಿಬಿಟ್ಟಿದ್ದಾನೆ. ಈ ಹಣದಲ್ಲಿ ಐವರು ಆರೋಪಿಗಳಿಗೆ ತಲಾ 5 ಲಕ್ಷ ರೂ.ಕೊಡುವುದಾಗಿ ರಿಯಾಜ್ ಹೇಳಿದ್ದನು. 

ಈ ಬಗ್ಗೆ ಒಪ್ಪಂದ ಆದ ಮೇಲೆ ಮಾಧವ ಅವರ ಚಲನವಲನಗಳನ್ನು ಗಮನಿಸಿ ಯೋಜನೆಯಂತೆ ಫೆಬ್ರವರಿ 14ರಂದು ಐವರು ಆರೋಪಿಗಳು ದ್ವಿಚಕ್ರ ವಾಹನ ಹಾಗೂ ಆಟೋದಲ್ಲಿ ಬಂದು ಮಾಧವ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಕಾಯುತ್ತಿದ್ದರು. ಮಾಧವ ಅವರು ಅಂದು ಮಧ್ಯಾಹ್ನ 1.30ರ ಸುಮಾರಿಗೆ ಆಟೊದಲ್ಲಿ ಬಂದು ಇಳಿದು ರಾಯಲ್ ಫಾಮ್ಸ್ ಗೇಟ್ ಲೇಔಟ್‌ ಒಳಗೆ ಹೋಗುತ್ತಿದ್ದಾಗ ಹಿಂಭಾಗದಿಂದ ಶಹಬಾಜ್‌ ಮತ್ತು ಸಲ್ಮಾನ್ ದ್ವಿಚಕ್ರ ವಾಹನದಲ್ಲಿ ಹೋಗಿ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು. ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದರು ಎಂಬುದು ವಿಚಾರಣೆಯ ವೇಳೆ ರಿಯಾಜ್ ಬಾಯ್ಬಿಟ್ಟಿದ್ದಾನೆ.

ಆರೋಪಿಗಳಾದ ಮಾಧವ ಅವರ ಕಿರಿಯ ಮಗ ಹರಿಕೃಷ್ಣ ಹಾಗೂ ಮೃತನ ತಮ್ಮ ಶಿವರಾಮ್ ಪ್ರಸಾದ್ ಅವರು ಮಾಧವ ಅವರನ್ನು ಕೊಲೆ ಮಾಡಿಸಲು ಈ ಮೊದಲು ಎರಡು ತಂಡಗಳಿಗೂ ಸುಫಾರಿ ನೀಡಿದ್ದರು. ಅವರು ಕೂಡ ಕೊಲೆ ಮಾಡಲು ಪ್ರಯತ್ನದಲ್ಲಿದ್ದರು. ಆದರೆ ಕೊಲೆ ಮಾಡುವುದು ವಿಳಂಬವಾದುದರಿಂದ ಅಸಮಾಧಾನಗೊಂಡು, ಮೂರನೇ ಸುಫಾರಿಯನ್ನು ರಿಯಾಜ್ ಗೆ ಕೊಟ್ಟಿದ್ದರು. ರಿಯಾಜ್‌ನೊಂದಿಗೆ 25 ಲಕ್ಷ ರೂ.ಮಾತನಾಡಿದ್ದರೂ ಮುಂಗಡವಾಗಿ 7.5 ಲಕ್ಷ ರೂ. ನೀಡಿದ್ದರು.

ಮಾಧವ ಅವರ ಕೊಲೆ ಆರೋಪಿಗಳಾದ ಹರಿಕೃಷ್ಣ ಮತ್ತು ಶಿವರಾಮ್‌ ಪ್ರಸಾದ್ ಅವರ ವಿರುದ್ಧ ಎಸ್‌ಜೆ.ಪಾರ್ಕ್‌, ವಿವೇಕ್ ನಗರ, ಜೆ.ಸಿ.ನಗರ, ಸುಬ್ರಹ್ಮಣ್ಯನಗರ, ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಹರಿಕೃಷ್ಣ ಮತ್ತು ಶಿವರಾಮ್ ಪ್ರಸಾದ್ ವಿರುದ್ಧ ಕಿಡ್ನಾಪ್‌, ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. 

ಮಾಧವ ಅವರಿಗೆ ಬಳ್ಳಾರಿಯಲ್ಲಿ ಸುಮಾರು 2 ಸಾವಿರ ಎಕರೆಯಲ್ಲಿ ಬಳ್ಳಾರಿ ಸ್ಟೀಲ್ ಆಂಡ್ ಅಲೈ ಲಿಮಿಟೆಡ್‌ ಮೈನ್ಸ್ ಕಂಪನಿ ಇದ್ದು, ಸುಮಾರು 100 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ಮಾಧವ ಅವರನ್ನು ಕೊಲೆ ಮಾಡಿದರೆ ಸಂಪೂರ್ಣ ಆಸ್ತಿ ತಮ್ಮ ಕೈ ವಶವಾಗುತ್ತದೆ ಎಂಬ ದುರಾಸೆಯಿಂದ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣದ ಮೂರನೇ ಆರೋಪಿ ರಿಯಾಜ್ ಅಲಿಯಾಸ್ ಗೋವಾ ರಿಯಾಸ್ ವಿರುದ್ಧ 2010ರಲ್ಲಿ ಮಡಗಾವ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳಾದ ಹರಿಕೃಷ್ಣ ಮತ್ತು ಶಿವಪ್ರಸಾದ್ ತಲೆಮರೆಸಿಕೊಂಡಿದ್ದಾರೆ.

ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಕಟೋಚ್ ಸಪಟ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಸಹಾಯಕ ಆಯುಕ್ತ ಮಂಜುನಾಥ್ ಬಾಬು ಅವರ ನೇತೃತ್ವದಲ್ಲಿ ತಲಘಟ್ಟಪುರ ಪೊಲೀಸ್ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತೇರ್, ಸಬ್ ಇನ್ಸ್ ಪೆಕ್ಟರ್ ನಾಗೇಶ್, ಕೆ.ಆರ್. ಶ್ರೀನಿವಾಸ್ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com