ಕೊರೋನಾ ಜೊತೆ ರೈತರಿಗೆ ಹೊಡೆತ ನೀಡುತ್ತಿದೆ ಕಳಪೆ ಗುಣಮಟ್ಟದ ಬೀಜ ವಿತರಣೆ

ರಾಜ್ಯಾದ್ಯಂತ ಕಳಪೆ ಗುಣಮಟ್ಟದ ಬೀಜ ವಿತರಣೆ ಕೊರೋನಾ ಜೊತೆಗೆ ರೈತರಿಗೆ ಇನ್ನಷ್ಟು ಹೊಡೆತ ಕೊಟ್ಟಿದೆ. ಸರಿಸುಮಾರು 10 ಸಾವಿರದ 288 ಕ್ವಿಂಟಾಲ್ ಕಳಪೆ ಗುಣಮಟ್ಟದ ಬೀಜ ಕಳೆದ ಏಪ್ರಿಲ್ ನಿಂದ ಇಲ್ಲಿಯವರೆಗೆ ವಿತರಣೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ರಾಜ್ಯಾದ್ಯಂತ ಕಳಪೆ ಗುಣಮಟ್ಟದ ಬೀಜ ವಿತರಣೆ ಕೊರೋನಾ ಜೊತೆಗೆ ರೈತರಿಗೆ ಇನ್ನಷ್ಟು ಹೊಡೆತ ಕೊಟ್ಟಿದೆ. ಸರಿಸುಮಾರು 10 ಸಾವಿರದ 288 ಕ್ವಿಂಟಾಲ್ ಕಳಪೆ ಗುಣಮಟ್ಟದ ಬೀಜ ಕಳೆದ ಏಪ್ರಿಲ್ ನಿಂದ ಇಲ್ಲಿಯವರೆಗೆ ವಿತರಣೆಯಾಗಿದೆ.

ಮುಂಗಾರು ಮಳೆ ಆಗಮನ, ಖಾರಿಫ್ ಋತುವಿನಲ್ಲಿ ಕೃಷಿ ಚಟುವಟಿಕೆಗಳಿಗೆ ತಯಾರಾಗುತ್ತಿರುವ ರೈತರಿಗೆ ಇದು ಆಘಾತವನ್ನುಂಟುಮಾಡಿದೆ. ಈ ಸಂಬಂಧ ಇಲ್ಲಿಯವರೆಗೆ ಸುಮಾರು 10 ಮಂದಿ ವ್ಯಕ್ತಿಗಳು ಮತ್ತು ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ. ಪ್ರತಿದಿನ ಸರಿಸುಮಾರು 31 ಸಾವಿರ ಕೆಜಿ ಕಳಪೆ ಗುಣಮಟ್ಟದ ಬೀಜಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಸಾಮಾನ್ಯವಾಗಿ ರೈತರಿಗೆ ಪ್ರಮಾಣೀಕೃತ ಬೀಜಗಳನ್ನು ವಿತರಿಸಲಾಗುತ್ತದೆ. ಅದು ಬೆಲೆ ಸ್ವಲ್ಪ ಅಧಿಕ. ಆದರೆ ಕಡಿಮೆ ಬೆಲೆ ಎಂದು ಹೇಳಿಕೊಂಡು ಕಳಪೆ ಗುಣಮಟ್ಟದ ಪ್ರಮಾಣೀಕೃತ ಬೀಜದ ಮಾದರಿಯ ಬೀಜಗಳನ್ನು ವಿತರಿಸಿ ರೈತರನ್ನು ಮೋಸ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ಕಳಪೆ ಗುಣಮಟ್ಟದ ಬೀಜಗಳನ್ನು ಬಿತ್ತಿದರೆ ಸಹಜವಾಗಿ ಇಳುವರಿ ಚೆನ್ನಾಗಿರುವುದಿಲ್ಲ. ರೈತರು ಸಾಲ ಮಾಡಿ ಬೀಜ ಖರೀದಿಸಿರುತ್ತಾರೆ. ಕಳಪೆ ಗುಣಮಟ್ಟದ ಬೀಜಗಳಲ್ಲಿ ಉತ್ತಮ ಇಳುವರಿ ಬಾರದಿದ್ದಾಗ ತಾವು ಹಾಕಿದ ಹಣ ಸಿಗದೆ ರೈತರು ಇನ್ನಷ್ಟು ಸಾಲಗಾರರಾಗಿ ಕಂಗಾಲಾಗುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಇದು ಕೂಡ ಒಂದು ಕಾರಣವಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳಿದರು.

ಹಿಂದೆ ಹೊರಗಿನವರು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುತ್ತಿದ್ದರು, ಇಲಾಖೆಯ ಅಧಿಕಾರಿಗಳನ್ನು ಬಿಡುತ್ತಿರಲಿಲ್ಲ. ಹಲವು ಬಾರಿ ಕೇಸುಗಳೇ ದಾಖಲಾಗುತ್ತಿರಲಿಲ್ಲ. ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿ ಇಲಾಖೆಯ ಹಿರಿಯ ಅಧಿಕಾರಿ, ವಶಪಡಿಸಿಕೊಂಡಿರುವ ಕಳಪೆ ಗುಣಮಟ್ಟದ ಬೀಜಗಳನ್ನು ಜಿಲ್ಲಾ ಗೋದಾಮುಗಳಲ್ಲಿ ಇಡಲಾಗಿದ್ದು ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇಂತಹ ಕಳಪೆ ಗುಣಮಟ್ಟದ ಬೀಜಗಳಿಗೆ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತದೆ. ಇವುಗಳಲ್ಲಿ ತಿರಸ್ಕೃತಗೊಂಡ ಬೀಜಗಳು ಸಹ ಕೆಲವೊಮ್ಮೆ ಇರುತ್ತವೆ. ಇವುಗಳನ್ನು ಗದ್ದೆಯಲ್ಲಿ ಬಿತ್ತಿದರೆ ಶೇಕಡಾ 60ಕ್ಕಿಂತ ಹೆಚ್ಚು ಫಸಲು ಬರುವುದಿಲ್ಲ ಎಂದರು.

ಹಿಂದೆಯೆಲ್ಲಾ ತಿಂಗಳಿಗೆ ಒಂದೆರಡು ಕೇಸುಗಳು ದಾಖಲಾಗುತ್ತಿದ್ದವು. ಅವುಗಳನ್ನು ಕೋರ್ಟ್ ಗಳಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆ ನಡೆಸುತ್ತಿದ್ದರು. ಈಗ ಇಂತಹ ಕೇಸುಗಳು ಹೆಚ್ಚಾಗಿರುವುದರಿಂದ ನಮ್ಮ ಅಡ್ವೊಕೇಟ್ ಗಳನ್ನು ನೇಮಿಸಿ ಅವರು ವಿಚಾರಣೆ ನಡೆಸುವಂತೆ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದರು.

ಈ ಬಗ್ಗೆ ಮಾತನಾಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕಳಪೆ ಗುಣಮಟ್ಟದ ಬೀಜ ವಿತರಣೆ ಹಿಂದೆ ದೊಡ್ಡ ಮಟ್ಟದ ಮಾಫಿಯಾವೇ ಇದೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜ ಸಿಗುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ ಅವರು ಮಾಫಿಯಾದವರ ಆಮಿಷ, ಒತ್ತಡಕ್ಕೆ ಸಿಲುಕಿ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ. ಇಷ್ಟೊಂದು ಸಾವಿರಾರುಗಟ್ಟಲೆ ಕ್ವಿಂಟಾಲ್ ಕಳಪೆ ಗುಣಮಟ್ಟದ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆಯೆಂದರೆ ಇದರ ಹಿಂದೆ ಅಧಿಕಾರಿಗಳ ಕೈವಾಡ ಇಲ್ಲದಿರಲಿಕ್ಕಿಲ್ಲ. ಹೋಬಳಿ-ತಾಲ್ಲೂಕು ಮಟ್ಟಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ನಿರ್ದಿಷ್ಟ ಕಂಪೆನಿಯ ಬೀಜಗಳನ್ನು ಖರೀದಿಸಲು ರೈತರಲ್ಲಿ ಹೇಳುತ್ತಾರೆ. ಇಂತಹ ಮಾಫಿಯಾಗಳ ವಿರುದ್ಧ ಕ್ರಿಮಿನಲ್ ಕೇಸು ಏಕೆ ದಾಖಲಿಸಬಾರದು ಎಂದು ಕೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com