1962ರ ಮನಸ್ಥಿತಿಯಿಂದ ಹೊರಬಂದು ಚೀನಾದೊಂದಿಗೆ ಸಮನಾಗಿ ಹೆಜ್ಜೆ ಹಾಕಿ: ಡಾ ಗುಂಜನ್ ಸಿಂಗ್

ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡುವುದು ಮತ್ತು ಅತಿರೇಕದ ರಾಷ್ಟ್ರಭಕ್ತಿ ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ಸಂಘರ್ಷವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬುದು ಒ ಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಜಿಂದಾಲ್ ಲಾ ಸ್ಕೂಲ್ ನ ಸಹಾಯಕ ಪ್ರಾಧ್ಯಾಪಕಿ ಡಾ. ಗುಂಜನ್ ಸಿಂಗ್ ಅಭಿಪ್ರಾಯ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡುವುದು ಮತ್ತು ಅತಿರೇಕದ ರಾಷ್ಟ್ರಭಕ್ತಿ ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ಸಂಘರ್ಷವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬುದು ಒ ಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಜಿಂದಾಲ್ ಲಾ ಸ್ಕೂಲ್ ನ ಸಹಾಯಕ ಪ್ರಾಧ್ಯಾಪಕಿ ಡಾ. ಗುಂಜನ್ ಸಿಂಗ್ ಅಭಿಪ್ರಾಯ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಅವರು, ಭಾರತ-ಚೀನಾದ ವಾಸ್ತವಿಕ ನಿಯಂತ್ರಣದ ರೇಖೆಯಲ್ಲಿ ಇತ್ತೀಚೆಗೆ ನಡೆದ ಸಂಘರ್ಷ ಈ ಸಂಬಂಧದ ದುರ್ಬಲ ಸಮತೋಲನವನ್ನು ಬದಲಾಯಿಸಿದೆ.ಅಲ್ಲದೆ ಎರಡೂ ಕಡೆಗಳಲ್ಲಿ ಈಗಾಗಲೇ ಇರುವ ತೀವ್ರವಾದ ರಾಷ್ಟ್ರೀಯತಾವಾದಿ ಭಾವನೆಗಳನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಿದೆ. ಇದು ಭಾರತದೊಳಗೆ ಚೀನಾ ವಿರೋಧಿ ಭಾವನೆಗಳನ್ನು ತೀವ್ರಗೊಳಿಸಿದ್ದು ಮಾತ್ರವಲ್ಲದೆ ಚೀನಾದ ಮೇಲಿನ ಅಪನಂಬಿಕೆ ಹೆಚ್ಚಾಗುವಂತೆ ಮಾಡಿದೆ ಎಂದರು.

ಎರಡೂ ರಾಷ್ಟ್ರಗಳ ಮಧ್ಯೆ ಆರ್ಥಿಕ ಸಂಬಂಧಗಳ ಮೂಲಕ ಭಾರತ ಮತ್ತು ಚೀನಾ ದೇಶಗಳು ಉತ್ತಮ ಸಮತೋಲನ ಹೊಂದಲು ಬಯಸಿದ್ದವು. ಆದರೆ ಆರ್ಥಿಕ ಬೆಳವಣಿಗೆಗಳಿಗೆ ಬಗೆಹರಿಯದಿದ್ದ ಗಡಿ ಸಮಸ್ಯೆ ತೀವ್ರ ಅಡ್ಡಿಯಾಗಿತ್ತು. ಭಾರತದೊಳಗೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಕೇಳುವುದರಲ್ಲಿ ಯಾವುದೇ ಆಶ್ಚರ್ಯ ಸಂಗತಿಯಿಲ್ಲ. ಆದರೆ ಗಡಿ ಸಮಸ್ಯೆಗೆ ಇದು ಪರಿಹಾರವೂ ಅಲ್ಲ. ಚೀನಾದ ಉತ್ಪನ್ನಗಳೆಂದು ಟಿವಿ ಸೆಟ್ ಗಳನ್ನು, ಮೊಬೈಲ್ ಫೋನ್ ಗಳನ್ನು ಒಡೆದು ಹಾಕಿದರೆ ಅದರಿಂದ ಆರ್ಥಿಕವಾಗಿ ಚೀನಾಕ್ಕೆ ನಷ್ಟವಾಗುವುದಿಲ್ಲ. ಚೀನಾವನ್ನು ಬಗ್ಗುಬಡಿಯಲು ಭಾರತ ಸರ್ಕಾರ ಹೊಸ ಮತ್ತು ಸೂಕ್ಷ್ಮ ತಂತ್ರಗಳನ್ನು ಬಳಸಬೇಕು ಎಂದರು.

ಸರ್ಕಾರ ದೇಶೀಯ ಉತ್ಪನ್ನಗಳನ್ನು ಉತ್ಪಾದಿಸಿ ಬೆಳೆಸಿ ಅಭಿವೃದ್ಧಿಪಡಿಸಲು ಸಂಪನ್ಮೂಲಗಳನ್ನು ಹೂಡಿಕೆ ಮಾಡಬೇಕಾಗಿತ್ತು. ಉನ್ನತ ಮಟ್ಟದ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು ನೀಡಬೇಕಾಗಿತ್ತು ಎಂದು ಡಾ ಗುಂಜನ್ ಅಭಿಪ್ರಾಯಪಡುತ್ತಾರೆ.
ಈಗ ನಮಗೆ ಸಾಧ್ಯವಿರುವ ಏಕೈಕ ಮಾರ್ಗವೆಂದರೆ, ದೀರ್ಘಾವಧಿಯಲ್ಲಿ, ಭಾರತ ತನ್ನ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬೇಕು. ಭಾರತದಲ್ಲಿ ಚೀನಾದ ಕಂಪನಿಗಳು ಮಾಡಿರುವ ಅತಿಕ್ರಮಣವನ್ನು ಎದುರಿಸಲು ನಾವೀನ್ಯತೆ ಮತ್ತು ತಂತ್ರಜ್ಞಾನವು ಪ್ರಮುಖ ಮಾರ್ಗಗಳಾಗಿವೆ. ನಮ್ಮ ಹೆಚ್ಚಿನ ಉತ್ಪಾದನೆಯು ಕಣ್ಮರೆಯಾಗಿರುವುದು ಮತ್ತು ಚೀನಾಕ್ಕೆ ಸ್ಥಳಾಂತರಗೊಂಡಿರುವುದು ಭಾರತೀಯ ಕಂಪೆನಿಗಳ ವೈಫಲ್ಯವಾಗಿದೆ ಎಂದರು.

ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಭಾರತ ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ ದೇಶಗಳೊಂದಿಗೆ ವ್ಯವಹಾರ ಸಂಬಂಧ ಹೆಚ್ಚು ಬೆಳೆಸಬೇಕು. ತೈವಾನ್ ಜೊತೆ ಸಂಬಂಧ ಬೆಳೆಸಿಕೊಳ್ಳುವುದು ಸಹ ಪ್ರಮುಖ ಹೆಜ್ಜೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಥಿತಿ ಬದಲಾಗಬೇಕು. 1962 ರ ಯುದ್ಧದ ಮನಸ್ಥಿತಿಯಿಂದ ಹೊರಬರಬೇಕು. ಚೀನಾವನ್ನು ಸಮಾನ ಹೆಜ್ಜೆಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ. ಅಂದಿನಿಂದ ಎರಡೂ ದೇಶಗಳು ಸಾಕಷ್ಟು ರೂಪಾಂತರಗೊಂಡಿವೆ. ನಾವು 1962 ರಲ್ಲಿ ಚೀನಾ ವಿರುದ್ಧ ಸೋತಿದ್ದೇವೆ ಆ ಸೋಲು ಇನ್ನೂ ನಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ ಡಾ ಗುಂಜನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com