ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಮಾದರಿ ಸಮುದಾಯ ಅರಣ್ಯ!

ಇಲ್ಲಿ ನೀವು ಒಂದು ಗಿಡದ ಎಲೆ ಮುರಿದರೆ, ಹುಲ್ಲಿನ ಒಂದು ಕಡ್ಡಿ ಕಿತ್ತರೆ ಸಾಕು ಗ್ರಾಮಸ್ಥರು ಓಡೋಡಿಕೊಂಡು ಬರುತ್ತಾರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತಮ್ಮ ಮನೆ ಸದಸ್ಯರಂತೆ ಅಷ್ಟು ಕಾಪಾಡಿಕೊಂಡು ಬರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.
ಕುಮಟಾ ತಾಲ್ಲೂಕಿನ ಹಲ್ಕರ್ ಗ್ರಾಮ
ಕುಮಟಾ ತಾಲ್ಲೂಕಿನ ಹಲ್ಕರ್ ಗ್ರಾಮ

ಕುಮಟಾ: ಇಲ್ಲಿ ನೀವು ಒಂದು ಗಿಡದ ಎಲೆ ಮುರಿದರೆ, ಹುಲ್ಲಿನ ಒಂದು ಕಡ್ಡಿ ಕಿತ್ತರೆ ಸಾಕು ಗ್ರಾಮಸ್ಥರು ಓಡೋಡಿಕೊಂಡು ಬರುತ್ತಾರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ತಮ್ಮ ಮನೆ ಸದಸ್ಯರಂತೆ ಅಷ್ಟು ಕಾಪಾಡಿಕೊಂಡು ಬರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹಲ್ಕರ್ ಎಂಬ ಗ್ರಾಮ ಅರಣ್ಯದಿಂದ ಸುತ್ತುವರಿದಿದೆ. ಈ ಅರಣ್ಯವನ್ನು ನೋಡಿಕೊಳ್ಳುವುದು ಇಲ್ಲಿನ ಗ್ರಾಮಸ್ಥರೇ. ಮರಗಳು ಮತ್ತು ಇತರ ಗಿಡಮೂಲಿಕೆಗಳಿಂದ ಆದಾಯವನ್ನು ಉತ್ಪತ್ತಿ ಮಾಡಿ ಗ್ರಾಮಸ್ಥರೇ ಅರಣ್ಯವನ್ನು ನೋಡಿಕೊಳ್ಳುತ್ತಾರೆ. ಅದರೊಟ್ಟಿಗೆ, ಮಣ್ಣು, ಕಣಿವೆ ಮತ್ತು ಅರಣ್ಯದಲ್ಲಿರುವ ಇತರ ವಸ್ತುಗಳನ್ನು ಸಹ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇವರ ಕಾಳಜಿಯನ್ನು ನೋಡಿ ಇದೀಗ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿದೆ.

ಹಲ್ಕರ್ ಅರಣ್ಯದ ವಿಶೇಷತೆಯೇನು?: ಉರುವಲು ಮರಗಳಿಂದ ಹಿಡಿದು ಹಣ್ಣಿನ ಮರಗಳವರೆಗೆ ಈ ಕಾಡಿನಲ್ಲಿದೆ. ಹಲ್ಕರ್ ಗ್ರಾಮ ಅರಣ್ಯ ಪಂಚಾಯತ್ ನ(ವಿಎಫ್ ಟಿ) 9 ಚುನಾಯಿತ ಸದಸ್ಯರು ಇದನ್ನು ನೋಡಿಕೊಳ್ಳುತ್ತಾರೆ. 219 ಎಕರೆ ಪ್ರದೇಶ ವಿಸ್ತಾರವಿರುವ ಈ ಅರಣ್ಯ ಪ್ರದೇಶ ಹೊಳನಗದ್ದೆ ಗ್ರಾಮ ಪಂಚಾಯತ್ ಅಡಿಯಲ್ಲಿ ಬಂದರೂ ಸಹ ಇದರ ಉಸ್ತುವಾರಿಯನ್ನು ಗ್ರಾಮ ಅರಣ್ಯ ಪಂಚಾಯತ್ ನವರೇ ನೋಡಿಕೊಳ್ಳುತ್ತಾರೆ.

1924ರಲ್ಲಿ ಬ್ರಿಟಿಷ್ ಸರ್ಕಾರ ಗ್ರಾಮಸ್ಥರಿಗೆ ಅರಣ್ಯ ನೋಡಿಕೊಳ್ಳುವ ಉಸ್ತುವಾರಿ ನೀಡಿತು. ಬ್ರಿಟಿಷ್ ಕರ್ನಲ್ ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಉರುವಲು ಸಂಗ್ರಹಿಸಿ ಮಾರಾಟ ಮಾಡಿ ಮತ್ತು ಮೇವಿನಿಂದ ತಮ್ಮ ಜೀವನೋಪಾಯ ಸಾಗಿಸುತ್ತಿದ್ದುದನ್ನು ನೋಡಿದರು. ಗ್ರಾಮಸ್ಥರು ಆ ಅರಣ್ಯವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಹೊಂದಿದ್ದರು.

ಈ ಸಮಯದಲ್ಲಿ ವಿಎಫ್ ಪಿಗೆ ಅಧಿಕಾರ ನೀಡಲು ಶಿಫಾರಸು ಮಾಡಿದರು. ಭಾರತೀಯ ಅರಣ್ಯ ಕಾಯ್ದೆಯಡಿ 165 ವಿಎಫ್ ಪಿಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ರಚಿಸಲಾಯಿತು. ಅವುಗಳಲ್ಲಿ 13 ಕುಮಟಾ ತಾಲ್ಲೂಕಿನಲ್ಲಿವೆ. ಇವು ಇಲ್ಲಿಯವರೆಗೆ ಬಾಂಬೆ ಅರಣ್ಯ ಕಾಯ್ದೆಯನ್ನು ಅನುಸರಿಸಿಕೊಂಡು ಬಂದಿವೆ.

1980ರಲ್ಲಿ ಅರಣ್ಯ ಇಲಾಖೆ ನಿಯಮ ಜಾರಿಗೆ ತಂದು ಎಲ್ಲಾ ವಿಎಫ್ ಪಿಗಳನ್ನು ಮುಚ್ಚಿತು. ಸರ್ಕಾರದ ಆದೇಶ ಪ್ರಶ್ನಿಸಿ ಹಲ್ಕರ್ ಮತ್ತು ಮೂರೂರು ವಿಎಫ್ ಪಿಗಳು ನ್ಯಾಯಾಲಯಕ್ಕೆ ಹೋದವು. 10 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಂತರ ಗ್ರಾಮಸ್ಥರಿಗೆ ಮತ್ತೆ ಅರಣ್ಯ ಉಸ್ತುವಾರಿ ಸಿಕ್ಕಿತು. ಮೂರೂರು ವಿಎಫ್ ಪಿಯನ್ನು ಗ್ರಾಮಸ್ಥರು ನೋಡಿಕೊಳ್ಳಲು ಸಾಧ್ಯವಾಗದೆ ಅರಣ್ಯ ಇಲಾಖೆ ಇಂದು ಉಸ್ತುವಾರಿ ವಹಿಸಿಕೊಂಡಿದೆ. ಹಲ್ಕರ್ ವಿಎಫ್ ಪಿ ಯಶಸ್ವಿಯಾಗಿ ಅರಣ್ಯವನ್ನು ರಕ್ಷಿಸಿ ನಿರ್ವಹಿಸುತ್ತಾ ಬಂದಿದೆ.

ಈ ಅರಣ್ಯದಲ್ಲಿ ಅಲ್ಲಿನ ಗ್ರಾಮಸ್ಥರು ಮಾತ್ರ ಮೇವು, ಉರುವಲು ಸಂಗ್ರಹಿಸಬಹುದು. ಹಳೆ ಮರಗಳು, ಗೇರುಬೀಜದ ಮರ, ಮಾವು ಮತ್ತು ಇತರ ಹಣ್ಣುಗಳ ಮರಗಳನ್ನು ಪ್ರತಿವರ್ಷ ಹರಾಜಿಗೆ ಹಾಕಲಾಗುತ್ತದೆ. ಆ ಗ್ರಾಮಸ್ಥರು ಮಾತ್ರ ಟೆಂಡರ್ ನಲ್ಲಿ ಭಾಗವಹಿಸಬಹುದು. ಪಂಚಾಯತ್ ಗೆ ವರ್ಷಕ್ಕೆ 30 ರೂಪಾಯಿ ಶುಲ್ಕ ಪಾವತಿಸಿ ಗ್ರಾಮಸ್ಥರು ಅರಣ್ಯಕ್ಕೆ ಹೋಗಬೇಕು. ಗುತ್ತಿಗೆ ಪಡೆದವರು ಬೇರೆ ಗ್ರಾಮ ಮತ್ತು ಪಟ್ಟಣಗಳಿಗೆ ಉತ್ಪನ್ನಗಳನ್ನು ಸಾಗಿಸಬಹುದು. ಪಂಚಾಯತ್ ಗೆ ಗ್ರಾಮಸ್ಥರ ವಾರ್ಷಿಕ ಶುಲ್ಕ ಮತ್ತು ಹರಾಜಿನ ಹಣವೇ ಮುಖ್ಯ ಆದಾಯ. ಹಣವನ್ನು ಬ್ಯಾಂಕಿನಲ್ಲಿ ಇರಿಸಲಾಗುತ್ತದೆ.

219 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶಕ್ಕೆ ಗಟ್ಟಿಯಾಗಿ ಬೇಲಿ ಹಾಕಿದ್ದಾರೆ, ಹೀಗಾಗಿ ಹೊರಗಿನಿಂದ ಕಳವು ಮಾಡಲು ಸಾಧ್ಯವಿಲ್ಲ.ಇಲ್ಲಿ ಮಳೆ ನೀರಿನ ಕೊಯ್ಲು ವಿಧಾನವನ್ನು ಕೂಡ ಅಳವಡಿಸಲಾಗಿದೆ ಎಂದು ಗ್ರಾಮಸ್ಥ ನಾಗಪ್ಪ ಹರಿಕಂತ್ರ ಹೇಳುತ್ತಾರೆ.

ಹಲ್ಕರ್ ಅರಣ್ಯ ಮತ್ತು ಗ್ರಾಮಸ್ಥರ ಯಶೋಗಾಥೆಯನ್ನು ಕೇಳಿಕೊಂಡು ತಜ್ಞರು, ಸಂಶೋಧಕರು ಹಲವು ರಾಜ್ಯಗಳಿಂದ, ಡೆನ್ಮಾರ್ಕ್, ಜಪಾನ್ ನಂತಹ ದೇಶಗಳಿಂದ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com