ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ವೈರಸ್ ಅವಾಂತರ ಬಿಚ್ಚಿಟ್ಟ ಪೊಲೀಸ್ ಇನ್ಸ್‌ ಪೆಕ್ಟರ್‌

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವಂತೆಯೇ ಇತ್ತ ಆರೋಗ್ಯ ಇಲಾಖೆಯ ಮಹಾ ಎಡವಟ್ಟುಗಳು ಒಂದೊಂದೇ ಬಯಲಾಗುತ್ತಿವೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವಂತೆಯೇ ಇತ್ತ ಆರೋಗ್ಯ ಇಲಾಖೆಯ ಮಹಾ ಎಡವಟ್ಟುಗಳು ಒಂದೊಂದೇ ಬಯಲಾಗುತ್ತಿವೆ,

ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಗಳ ಕೊರತೆ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಇತ್ತ ಸ್ವತಃ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸೋಂಕಿತ ಸಹೋದ್ಯೋಗಿಗೇ ಬೆಡ್ ಸಿಗದೇ ಪರದಾಡಿದ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಕೊರೋನಾ ದೃಢಪಟ್ಟ ಸೋಂಕಿತರು ಶಂಕಿತರು ಎಲ್ಲರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಾವುದೇ ಪೂರ್ವಸಿದ್ಧತೆಯಾಗಲೀ ಸರಿಯಾದ ವ್ಯವಸ್ಥೆಯಲ್ಲಾಗಲೀ ಅಥವಾ ರೋಗಿಗಳನ್ನು ಸರಿಯಾಗಿಯೂ ನಡೆಸಿಕೊಳ್ಳುತ್ತಿಲ್ಲವೆಂದು ಆಸ್ಪತ್ರೆಯ ಅವಾಂತರ ನಿರ್ಲಕ್ಷ್ಯವನ್ನು ಪೊಲೀಸರೊಬ್ಬರು ಬಿಚ್ಚಿಟ್ಟಿದ್ದು, ಆಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಆಡಿಯೋದಲ್ಲಿ ಕಲಾಸಿಪಾಳ್ಯದ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್ ಎನ್ನುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ತಮ್ಮ ಅನುಭವ, ಅಳಲನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪೊಲೀಸರು ಕೊರೊನಾ ವಾರಿಯರ್ಸ್ ಎಂದು ಪೋಸು ಕೊಟ್ಟು ಆ ಡ್ಯೂಟಿ ಈ‌ ಡ್ಯೂಟಿ ಎಂದು ಸುಮ್ಮನೆ ಓಡಾಡಬೇಡಿ. ಕೊರೊನಾ ಬಂದರೆ ಯಾರೂ ಸಹಾಯ ಮಾಡುವುದಾಗಲೀ ಕಾಳಜಿ ತೋರುವುದಾಗಲೀ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೆರೆಡು ತಿಂಗಳಿನಿಂದ ನೆಗೆಟಿವ್ ಬಂದಿರುವವರು ಪಾಸಿಟಿವ್ ಬಂದಿರುವವರು ಎಲ್ಲರನ್ನೂ ಒಟ್ಟಿಗೆ ಇರಿಸಲಾಗಿದೆ. ಇಲ್ಲಿಗೆ ಬಂದ ಮೇಲೆ ಸಾಮಾನ್ಯ ಕೂಲಿಕಾರನೂ, ಇಂಜಿನಿಯರೂ, ಪೊಲೀಸರು ಎಲ್ಲರೂ ಒಂದೇ. ಅದೆಷ್ಟೋ ಜನರ ರಿಪೋರ್ಟ್ ಏನೂ ಎನ್ನುವುದನ್ನೂ ಸಹ ಆಸ್ಪತ್ರೆಯವರು ಇನ್ನೂ ಹೇಳಿಲ್ಲ. ಒಳಗಿನ ಅವಾಂತರ ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನಾಗಲೀ ಬೇರೆಯವರನ್ನಾಗಲೀ ಆಸ್ಪತ್ರೆಯ ಹತ್ತಿರವೂ ಸುಳಿಯಲೂ ಬಿಡುತ್ತಿಲ್ಲ.

ತಮಗೆ ಯಾವ ಲಕ್ಷಣಗಳೂ ಇಲ್ಲ. ಆರೋಗ್ಯವಾಗಿದ್ದೇನೆ. ಆದರೂ ಪಾಸಿಟಿವ್ ಕೊಟ್ಟಿದ್ದಾರೆ. ಕೆಲವು ದಿನದ ಹಿಂದೆ ಕಲಾಸಿಪಾಳ್ಯದ ತಮ್ಮ ಸಹೋದ್ಯೋಗಿ ಕೋವಿಡ್‌ನಿಂದ ಮೃತಪಟ್ಟಿದ್ದು ಶವ ನೋಡಲು ಯಾರೂ ಬಂದಿಲ್ಲ. ಈಗ ಬೂದಿಯನ್ನು ಅವರ ಮನೆಗೆ ಮುಟ್ಟಿಸುತ್ತಾರೆನೋ? ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಪಿ.ಶುಗರ್, ಕ್ಯಾನ್ಸರ್ ಕಾಯಿಲೆ ಬಂದಿರುವವರೂ ಇದ್ದಾರೆ. ಅವರ ಜೊತೆಗೆ ಕೊರೊನಾ ಪಾಸಿಟಿವ್ ರೋಗಿಗಳನ್ನು ಇರಿಸಲಾಗಿದೆ. ಒಟ್ಟಾರೆ ಆಸ್ಪತ್ರೆ ಅವ್ಯವಸ್ಥೆಯ ಆಗರ ಎಂದು ಸುಧೀರ್ ಭಾವುಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com