ಜೂ.25ಕ್ಕೆ ರಾಜೀವ್ ಗಾಂಧಿ ವಿವಿ ಘಟಿಕೋತ್ಸವ, ಪಿಎಚ್ ಡಿ, ಚಿನ್ನದ ಪದಕ ಪಡೆದವರು ಮಾತ್ರ ಭಾಗಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಜೂನ್ 25ರಂದು ನಡೆಯಲಿದ್ದು, ಪಿಎಚ್ ಡಿ ಮತ್ತು ಚಿನ್ನದ ಪದಕ ಪಡೆಯುವವರು ಮಾತ್ರ ಭಾಗವಹಿಸಲಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಜೂನ್ 25ರಂದು ನಡೆಯಲಿದ್ದು, ಪಿಎಚ್ ಡಿ ಮತ್ತು ಚಿನ್ನದ ಪದಕ ಪಡೆಯುವವರು ಮಾತ್ರ ಭಾಗವಹಿಸಲಿದ್ದಾರೆ.

ರಾಜ್ಯಪಾಲ ವಜುಭಾಯಿ ವಾಲಾ ಅವರು ಘಟಿಕೋತ್ಸವದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು, ಆನ್ ಲೈನ್ ಮೂಲಕ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಜ್ಞಾನ ಆಯೋಗದ ಸದಸ್ಯ ಪ್ರೊ. ಬಲರಾಮ್ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಲಿದ್ದಾರೆ.

22ನೇ ಘಟಿಕೋತ್ಸವ ಜೂನ್ 25ರಂದು ನಡೆಯಲಿದೆ. ಪಿಎಚ್ ಡಿ ಮತ್ತು ಚಿನ್ನದ ಪದಕ ಪಡೆಯುವವರು ಮಾತ್ರ ಭಾಗವಹಿಸುತ್ತಾರೆ. ಉಳಿದಂತೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ವರ್ಚುವಲ್ ವ್ಯವಸ್ಥೆ ಮೂಲಕ ಪಾಲ್ಗೊಳ್ಳಲಿದ್ದಾರೆ. ಕೋವಿಡ್-19 ಸುರಕ್ಷತಾ ಕ್ರಮದೊಂದಿಗೆ ಗರಿಷ್ಠ 200 ಜನ ಮೀರಂತೆ ಕಾರ್ಯಕ್ರಮ ನಡೆಯಲಿದೆ ಎಂದು ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಅವರು ತಿಳಿಸಿದ್ದಾರೆ.

ಕೋವಿಡ್-19 ಸಂಶೋಧನೆಗೆ ಪ್ರಸ್ತಾವನೆ ಆಹ್ವಾನಿಸಿದ್ದೆವು. 50 ಪ್ರಸ್ತಾವನೆ ಬಂದಿದ್ದು, ಅದರಲ್ಲಿ 15 ಅಂತಿಮಗೊಳಿಸಿದ್ದೇವೆ. ಇದರಲ್ಲಿ ಪರಿಸರ ಸ್ನೇಹಿ ಗ್ರೀನ್ ಪಿಪಿಇ ಕಿಟ್ ಸಿದ್ಧಪಡಿಸುವ ಒಂದು ವಿಶೇಷ ಪ್ರಸ್ತಾವನೆ ಸೇರಿಕೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳಿಗಾಗಿ ಐಡಿಯಾಥಾನ್ ಆಯೋಜಿಸಿದ್ದು, ಸೋಂಕು ತಡೆ ಕುರಿತ 200 ಹೊಸ ಐಡಿಯಾಗಳು ಬಂದಿದ್ದು, ಅದರಲ್ಲಿ 28 ಅಂತಿಮಗೊಳಿಸಿದ್ದೇವೆ ಎಂದರು.

ಈ ವರ್ಷ 36,434 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡುತ್ತಿದ್ದೇವೆ. ಒಟ್ಟಾರೆ ಶೇ.82.3ರಷ್ಟು ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಿದೆ. ಕೋವಿಡ್-19 ತಡೆ ಸಂಬಂಧ 100 ಕಾರ್ಯಕ್ರಮ ಮಾಡಿ, 2 ಲಕ್ಷ ವಾರಿಯರ್ಸ್ ಗೆ ತರಬೇತಿ ನೀಡಿದ್ದೇವೆ. ಜಿಲ್ಲಾವಾರು ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಿದ್ದೇವೆ. ವೈದ್ಯಕೀಯ ಪರೀಕ್ಷೆ ಸಂಬಂಧ ಜೂನ್ 30ರಂದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ನಂತರ ತೀರ್ಮಾನಿಸಲಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com