SSLC ಪರೀಕ್ಷೆ: ವಿದ್ಯಾರ್ಥಿಗಳ‌ ಸುರಕ್ಷತೆಯೇ ಮುಖ್ಯ ಎಂದ ಶಿಕ್ಷಣ‌ ಸಚಿವ‌ ಸುರೇಶ್ ಕುಮಾರ್

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದು, ವಿದ್ಯಾರ್ಥಿಗಳ‌ ಸುರಕ್ಷತೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಶಿಕ್ಷಣ‌ ಸಚಿವ‌ ಸುರೇಶ್ ಕುಮಾರ್  ಹೇಳಿದ್ದಾರೆ.
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದು, ವಿದ್ಯಾರ್ಥಿಗಳ‌ ಸುರಕ್ಷತೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಶಿಕ್ಷಣ‌ ಸಚಿವ‌ ಸುರೇಶ್ ಕುಮಾರ್  ಹೇಳಿದ್ದಾರೆ.

ಬೆಂಗಳೂರು ನಗರದ ವಿವಿಧ‌ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ನಾಳೆಯಿಂದ ನಡೆಯಲಿರುವ ಪರೀಕ್ಷಾ‌ಪೂರ್ವ ಸಿದ್ಧತೆಯನ್ನು ಪರಿಶೀಲಿಸಿ ಸುರೇಶ್ ಕುಮಾರ್, 'ವಿದ್ಯಾರ್ಥಿಗಳ‌ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಕ್ರಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಿದ್ದು, ಯಾವುದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಅವರ ಹಿತದೃಷ್ಟಿಯಿಂದ ಕೈಗೊಂಡಿರುವ ಸರ್ಕಾರದ ಕ್ರಮವನ್ನು ಪ್ರೋತ್ಸಾಹಿಸಬೇಕು ಎಂದರು.

ಹೆಬ್ಬಾಳದ ಸರ್ಕಾರಿ ಪ್ರೌಢ ಶಾಲೆ, ಮಲ್ಲೇಶ್ವರಂನ ವೈಯಾಲಿಕಾವಲ್ ಸೊಸೈಟಿ ಶಾಲೆ, ಸ್ಟೆಲ್ಲಾ ಮಾರಿಸ್ ಶಾಲೆ, ನಿರ್ಮಲರಾಣಿ ಪ್ರೌಢ ಶಾಲೆ, ಜಯನಗರದ ಆರ್ ವಿ ಪ್ರೌಢಶಾಲೆ, ವಿಜಯ ಪ್ರೌಢಶಾಲೆ, ಸಾರಕ್ಕಿ‌ ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ‌ ನೀಡಿದ ಸಚಿವರು ಪರೀಕ್ಷಾ‌ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು‌ ಅನುಸರಿಸಿರುವ ಕ್ರಮಗಳು, ಆರೋಗ್ಯಕರ ವಾತಾವರಣ, ಮಕ್ಕಳ ಸುರಕ್ಷೆ, ಆರೋಗ್ಯ ತಪಾಸಣೆ, ಸೇರಿದಂತೆ ಪರೀಕ್ಷೆ ನಡೆಸುವ ಕುರಿತು ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳಲಾಗಿರುವ ಸಿದ್ಧತಾ ಕ್ರಮಗಳನ್ನು ಅವಲೋಕಿಸಿ ತೃಪ್ತಿ‌ ವ್ಯಕ್ತ‌ ಪಡಿಸಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕೊಠಡಿಗಳನ್ನು ಸೊಂಕು ನಿವಾರಕ ದ್ರಾವಣದಿಂದ ಸ್ಯಾನಿಟೈಸ್‌ ಮಾಡುವುದರ ಬಗ್ಗೆಯೂ ಖಚಿತಪಡಿಸಿಕೊಂಡ ಸಚಿವರು ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣಾ ವಿತರಣೆಗೆ ಕ್ರಮ ವಹಿಸುವುದಲ್ಲದೆ ಕಂಟೈನ್‌ಮೆಂಟ್‌ ವಲಯದಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಎನ್.95 ಮಾಸ್ಕ ವಿತರಿಸುವುದು, ಅನಾರೋಗ್ಯಕರ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್‌ಮೆಂಟ್‌ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ‌ ಮೀಸಲಿಾಡುವುದು, ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿಯನ್ನು ನೀಡುವುದು, ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಸೇರಿದಂತೆ ಎಲ್ಲ ಕ್ರಮಗಳು ಅಚ್ಚುಕಟ್ಟಾಗಿ ನಿರ್ವಹಣೆಯಾಗುವಲ್ಲಿ ಎಲ್ಲಾ ಅಧಿಕಾರಿಗಳು ಸಮರ್ಪಣ ಮನೋಭಾವದಿಂದ ಕೆಲಸ ಮಾಡಬೇಕೆಂದು ಹಾಜರಿದ್ದ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com