ದುಬೈಗೆ ರಫ್ತಾಗಬೇಕಿದ್ದ ಆಸ್ಟ್ರೇಲಿಯನ್ ಗ್ರೀನ್ ಬೆರ್ರಿ ಲಾಕ್ಡೌನ್: ಬಡವರಿಗೆ ಉಚಿತವಾಗಿ ಹಂಚಿದ ಯುವಕ

ದೂರದ ದುಬೈ ದೇಶಕ್ಕೆ ರಫ್ತಾಗಬೇಕಿದ್ದ ನೂರಾರು ಕ್ವಿಂಟಲ್ ಆಸ್ಟ್ರೇಲಿಯನ್ ಗ್ರೀನ್ ಬೆರ್ರಿ ಎಂಬ ತಳಿಯ ಪಪ್ಪಾಯ ಹಣ್ಣು ಲಾಕ್ಡೌನ್ ಪರಿಣಾಮದಿಂದ ಸಕಾಲಕ್ಕೆ ರಫ್ತಾಗದೆ ಬೆಳಗಾರರು ಸಂಕಷ್ಟಕ್ಕೀಡಾದ ಘಟನೆ ತಾಲ್ಲೂಕಿನ ವೆಂಕಟಗಿರಿ ಕಂದಾಯ ಹೋಬಳಿಯಲ್ಲಿ ನಡೆದಿದೆ.
ಪಪ್ಪಾಯ ನೀಡುತ್ತಿರುವ ವಿಷ್ಣುತೀರ್ಥ
ಪಪ್ಪಾಯ ನೀಡುತ್ತಿರುವ ವಿಷ್ಣುತೀರ್ಥ

ಗಂಗಾವತಿ: ದೂರದ ದುಬೈ ದೇಶಕ್ಕೆ ರಫ್ತಾಗಬೇಕಿದ್ದ ನೂರಾರು ಕ್ವಿಂಟಲ್ ಆಸ್ಟ್ರೇಲಿಯನ್ ಗ್ರೀನ್ ಬೆರ್ರಿ ಎಂಬ ತಳಿಯ ಪಪ್ಪಾಯ ಹಣ್ಣು ಲಾಕ್ಡೌನ್ ಪರಿಣಾಮದಿಂದ ಸಕಾಲಕ್ಕೆ ರಫ್ತಾಗದೆ ಬೆಳಗಾರರು ಸಂಕಷ್ಟಕ್ಕೀಡಾದ ಘಟನೆ ತಾಲ್ಲೂಕಿನ ವೆಂಕಟಗಿರಿ ಕಂದಾಯ ಹೋಬಳಿಯಲ್ಲಿ ನಡೆದಿದೆ.

ಇದೀಗ ತೋಟದಲ್ಲಿಯೇ ಹಣ್ಣು ಹಾಳಾಗಬಾರದು ಎಂಬ ಉದ್ದೇಶಕ್ಕೆ ಮಾಲೀಕ ವಿಷ್ಣುತೀರ್ಥ ಆದಾಪುರ, ಹಣ್ಣನ್ನು ಕಟಾವು ಮಾಡಿಸಿ ಬಡವರಿಗೆ, ಅಪೌಷ್ಠಿಕದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ನಿತ್ಯ ಉಚಿತವಾಗಿ ಹಂಚುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
 
ಅಲ್ಲದೇ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ವಿತರಿಸುತ್ತಿದ್ದಾರೆ. ಅಗತ್ಯ ಇರುವ ಮತ್ತು ಜನ ಸಂದಣಿ ಇರುವ ಸ್ಥಳಕ್ಕೆ ಹಣ್ಣು ಸಾಗಿಸಿ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.

'ಕೊರೊನಾ ವ್ಯಾಧಿ ಎಲ್ಲೆಡೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪಪ್ಪಾಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಅಲ್ಲದೇ ದೇಹದೊಳಗಿನ ಇತರೆ ಯಾವುದೇ ವೈರಸ್ ವಿರುದ್ಧ ಹೋರಾಡುವ ಗುಣ ಪಪ್ಪಾಯ ಹೊಂದಿದೆ. ಈ ಹಿನ್ನೆಲೆ ಹಣ್ಣನ್ನು ರೋಗಿಗಳು ಹಾಗೂ ಕುಟುಂಬದವರು ಸೇವಿಸಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಮಾತನಾಡಿದ ವಿಷ್ಣು ಆದಾಪುರ, ವಿಠಲಾಪುರದಲ್ಲಿರುವ ತಮ್ಮ 12 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆಸಲಾಗಿದೆ. ಇದು ಕಳೆದ ಮೇ ತಿಂಗಳಲ್ಲಿ ದುಬೈಗೆ ರಪ್ತಾಗಬೇಕಿತ್ತು. ಆದರೆ ಲಾಕ್ಡೌನ್ ಸೇರಿದಂತೆ ನಾನಾ ಕಾರಣಕ್ಕೆ ರಫ್ತು ಮಾಡಲಾಗಿಲ್ಲ. ಹೀಗಾಗಿ ಜನರಿಗೆ ಉಚಿತ ಬಳಕೆಗೆ ನೀಡಲಾಗುತ್ತಿದೆ ಎಂದರು.

ಲಾಕ್ಡೌನ್ ಮುನ್ನ ಕೆಜಿಗೆ 18ರಿಂದ 21 ರೂಪಾಯಿ ಇತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಕೇವಲ ಐದಾರು ರೂಪಾಯಿ ಬೆಲೆಯೂ ಸಿಕ್ಕುತ್ತಿಲ್ಲ. ಈಗಲೂ ಬೆಂಗಳೂರು ಮತ್ತು ಗೋವಾದಲ್ಲಿ ಈ ಹಣ್ಣಿಗೆ ಭಾರಿ ಬೇಡಿಕೆ ಇದೇ. ಆದರೆ ರಫ್ತು ಮಾಡಲಾಗುತ್ತಿಲ್ಲ.

ಪಪ್ಪಾಯ ಒಂದು ವರ್ಷದ ಬೆಳೆಯಾಗಿದ್ದು, ಏಳನೇ ತಿಂಗಳಿಂದ ಇಳುವರಿ ಬರಲಾರಂಭಿಸಿದೆ. ಆದರೆ ಸಿಗುತ್ತಿರುವ ಬೆಳೆಯನ್ನು ಸಕಾಲಕ್ಕೆ ರಫ್ತು ಮಾಡಲಾಗುತ್ತಿಲ್ಲ. ಹೀಗಾಗಿ ಹಣ್ಣನ್ನು ಹಾಳು ಮಾಡಬಾರದು ಎಂಬ ಕಾರಣಕ್ಕೆ ಉಚಿತವಾಗಿ ನಿಡಲಾಗುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳು, ನಗರಸಭೆಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ ಗೆ ನೀಡುವ ಉದ್ದೇಶವಿದೆ. ತಲಾ 20 ಕೆಜಿ ತೂಕದ 25ರಿಂದ 30 ಬಾಕ್ಸ್ ಹಣ್ಣನ್ನು ನಿತ್ಯ ಉಚಿತವಾಗಿ ನೀಡಲಾಗುತ್ತಿದೆ. ಆಸಕ್ತರು (ಮೊ: 9844127576) ಸಂಪರ್ಕಿಸಿದರೆ ಅಗತ್ಯವಿದ್ದವರಿಗೂ ಉಚಿತವಾಗಿ ನೀಡಲಾಗುವುದು ಎಂದರು.

-ಶ್ರೀನಿವಾಸ ಎಂಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com