ಪಿಪಿಇ ಕಿಟ್ ಧರಿಸದೆ ಮೃತ ವ್ಯಕ್ತಿಯ ದಫನಕ್ಕೆ ಗುಂಡಿ ತೋಡಿದ ಶಾಸಕ ಖಾದರ್: ಸಾರ್ವಜನಿಕ ವಲಯದಿಂದ ತೀವ್ರ ಟೀಕೆ

ಕೊರೋನಾದಿಂದ ಮೃತಪಟ್ಟ ಕುಟುಂಬಸ್ಥರ ಮೃತದೇಹ ನೋಡಲೂ ಹೋಗದಿರುವ ಭೀತಿಯ ವಾತಾವರಣ ಇರುವಾಗ ಮಂಗಳೂರಿನಲ್ಲಿ ಕೊರೋನಾದಿಂದ ಸಾವಿಗೀಡಾದ 70 ವರ್ಷದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಶಾಸಕ ಯುಟಿ.ಖಾದರ್ ಸ್ವತಃ ಹಾರೆ ಹಿಡಿದು ಗುಂಡಿ ತೋಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 
ಮೃತ ವ್ಯಕ್ತಿಯ ದಫನಕ್ಕೆ ಗುಂಡಿ ತೋಡುತ್ತಿರುವ ಶಾಸಕ ಖಾದರ್
ಮೃತ ವ್ಯಕ್ತಿಯ ದಫನಕ್ಕೆ ಗುಂಡಿ ತೋಡುತ್ತಿರುವ ಶಾಸಕ ಖಾದರ್

ಮಂಗಳೂರು: ಕೊರೋನಾದಿಂದ ಮೃತಪಟ್ಟ ಕುಟುಂಬಸ್ಥರ ಮೃತದೇಹ ನೋಡಲೂ ಹೋಗದಿರುವ ಭೀತಿಯ ವಾತಾವರಣ ಇರುವಾಗ ಮಂಗಳೂರಿನಲ್ಲಿ ಕೊರೋನಾದಿಂದ ಸಾವಿಗೀಡಾದ 70 ವರ್ಷದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಶಾಸಕ ಯುಟಿ.ಖಾದರ್ ಸ್ವತಃ ಹಾರೆ ಹಿಡಿದು ಗುಂಡಿ ತೋಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಈ ವೇಳೆ ಪಿಪಿಇ ಕಿಟ್ ಧರಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗತೊಡಗಿವೆ. 
 
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾದೊಂದಿಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷ ವಯಸ್ಸಿನ ವ್ಯಕ್ತಿ ಮಂಗಳವಾರ ಮೃತಪಟ್ಟಿದ್ದರು. ಆರಂಭದಲ್ಲಿ ಬಂದರು ಮಸೀದಿ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಲಾಗಿತ್ತು. ಆದರೆ, ಅಲ್ಲಿ ನೀರು ಉಕ್ಕಿ ಬಂದಿದ್ದರಿಂದ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಸಿದ್ಧತೆ ನಡೆಸಲಾಯಿತು. ಗುಂಡಿ ತೋಡುವ ವೇಳೆ ಸ್ಥಳಕ್ಕೆ ತೆರಳಿದ ಶಾಸಕ ಖಾದರ್ ಸ್ವತಃ ಹಾರೆ ಹಿಡಿದು ಗುಂಡಿ ತೋಡುವ ಕೆಲಸವನ್ನೂ ಮಾಡಿದ್ದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಮೃತದೇಹದ ಅಂತ್ಯ ಸಂಸ್ಕಾರವನ್ನೂ ನೆರವೇರಿಸಿದ್ದಾರೆ. 

ಅಂತ್ಯಸಂಸ್ಕಾರದ ವೇಳೆ ಖಾದರ್ ಪಿಪಿಇ ಕಿಟ್ ಧರಿಸಿರಲಿಲ್ಲ. ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆಂಬ ಟೀಕೆಗಳೂ ವ್ಯಕ್ತವಾಗತೊಡಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖಾದರ್ ಅವರು, ಅಂತ್ಯ ಸಂಸ್ಕಾರ ನಡೆಸುವುದು ಪುಣ್ಯ ಕಾರ್ಯ. ಹಾಗಾಗಿ ಈ ಕಾರ್ಯದಲ್ಲಿ ಭಾಗಿಯಾಗಿದ್ದೆ. ಕೊರೋನಾದಿಂದ ಸತ್ತ ವ್ಯಕ್ತಿಯಿಂದ ಸೋಂಕು ಹರಡುತ್ತದೆ ಎನ್ನುವುದಕ್ಕೆ ಎಲ್ಲೂ ನಿದರ್ಶನಗಳಿಲ್ಲ. ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ ಮಾಡಿಯೇ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಂಡ ಬಳಿಕವೇ ಭಾಗಿಯಾಗಿದ್ದೇನೆ. ನಂತರವೂ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದ್ದೇನೆ. ಪಿಪಿಇ ಕಿಟ್ ಧರಿಸುವುದು ಒಳ್ಳೆಯದೇ ಎಂದಿದ್ದಾರೆ. 

ಕೊರೋನಾದಿಂದ ಸಾವಿಗೀಡಾದ ತಂದೆ-ತಾಯಿ ಮೃತದೇಹದ ಅಂತ್ಯಸಂಸ್ಕಾರಕ್ಕೆ ಮಕ್ಕಳೇ ಬಾರದಿರುವ ಪ್ರಕರಣಗಳು ನಡೆದಿವೆ. ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಯಾರದ್ದೋ ಮೃತದೇಹ ಹೊತ್ತು ತರಲು ಧೈರ್ಯ ಬರುತ್ತದೆ. ಹಾಗಿರುವಾಗ ಕುಟುಂಬಸ್ಥರ ಅಂತ್ಯಕ್ರಿಯೆಯ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಜನರೇಕೆ ಹೆದರಬೇಕು? ಈ ಮಾನವೀಯ ಕಾರ್ಯ ಮಾಡಲು ಆಗದೆ ಇದ್ದರೆ ಎಷ್ಟು ಶಿಕ್ಷಣ ಪಡೆದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಖಾದರ್, ಕೊರೋನಾದಿಂದ ಯಾರೋ ತೀರಿಕೊಂಡರೂ ಅವರವರ ಧರ್ಮಕ್ಕೆ ಅನುಗುಣವಾಗಿ ಅಂತ್ಯಸಂಸ್ಕಾರ ಮಾಡುವುದು ಎಲ್ಲರ ಜವಾಬ್ದಾರಿ. ಈ ಮನಸ್ಥಿತಿ ಜನರಲ್ಲಿ ಬರಬೇಕು ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com