ಬೆಂಕಿಯಿಂದ ಗುಡಿಸಲುಗಳು ನಾಶ: ಕಾರ್ಮಿಕರ ಪತ್ತೆ ಹಚ್ಚಿ, ಪುನರ್ವಸತಿ ಕಲ್ಪಿಸಿ; ಸರ್ಕಾರಕ್ಕೆ 'ಹೈ' ಸೂಚನೆ
ನಗರದ ಕಾಚರಕನಹಳ್ಳಿ ಬಳಿಯ ಕೊಳಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ 90ಕ್ಕೂ ಅಧಿಕ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿರುವ ಪ್ರಕರಣ ಸಂಬಂಧ ಕಾರ್ಮಿಕರಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
Published: 25th June 2020 08:36 AM | Last Updated: 25th June 2020 12:40 PM | A+A A-

ಸಂಗ್ರಹ ಚಿತ್ರ
ಬೆಂಗಳೂರು; ನಗರದ ಕಾಚರಕನಹಳ್ಳಿ ಬಳಿಯ ಕೊಳಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ 90ಕ್ಕೂ ಅಧಿಕ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿರುವ ಪ್ರಕರಣ ಸಂಬಂಧ ಕಾರ್ಮಿಕರಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಘಟನೆ ಕುರಿತು ವಕೀಲರಾದ ವೈಶಾಲಿ ಹೆಗ್ಡೆ ಬರೆದಿದ್ದ ಪತ್ರ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಗುಡಿಸಲುಗಳನ್ನು ನಾಶಪಡಿಸುವ ಮೂಲಕ ನಿವಾಸಿಗಳ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಗುಡಿಸಲುಗಳಲ್ಲಿದ್ದ ಕಾರ್ಮಿಕರು ಸದ್ಯ ಎಲ್ಲಿದ್ದಾರೆಂಬ ಬಗ್ಗೆ ಸರ್ಕಾರ ವಿಚಾರಣೆ ನಡೆಸಬೇಕು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಬೇಕು ಹಾಗೆಯೇ, ಗುಡಿಸಲುಗಳಲ್ಲಿದ್ದ ವಸ್ತುಗಳು ನಾಶವಾಗಿರುವುದಕ್ಕೂ ಪರಿಹಾರ ಪಾವತಿಸಬೇಕು. ಗುಡಿಸಲುಗಳಿದ್ದ ಜಾಗದ ಸದ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ಈ ಆದೇಶ ಪಾಲನೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜು.7ಕ್ಕೆ ಮುಂದೂಡಿತು.