ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂ. ಮೀಸಲು: ರಮೇಶ್ ಜಾರಕಿಹೊಳಿ

ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂ. ಮೀಸಲಿರಿಸಿದ್ದು,ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

ಕೊಪ್ಪಳ: ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂ. ಮೀಸಲಿರಿಸಿದ್ದು,ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಐತಿಹಾಸಿಕ ವಿಜಯನಗರ ಕಾಲುವೆಗಳಾದ ಹುಲಿಗೆ, ಶಿವಪುರ ಹಾಗೂ ಇತರೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳಿಗೆ ತಾಲ್ಲೂಕಿನ ಹುಲಿಗಿ ಗ್ರಾಮದಲ್ಲಿಂದು ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 500 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತುಂಗಭದ್ರ ನದಿಗೆ ಅಡ್ಡಲಾಗಿ ಆಯಾ ಸ್ಥಳಗಳಲ್ಲಿ 11 ಅಣೆಕಟ್ಟುಗಳನ್ನು ಹಾಗೂ 16 ಕಾಲುವೆಗಳ ಜಾಲ ನಿರ್ಮಿಸಲಾಗಿದೆ ಎಂದರು.

ಒಟ್ಟು ಕಾಲುವೆಗಳ ಉದ್ದ 215 ಕಿ.ಮೀ. ಗಳಿದ್ದು,ಅಣೆಕಟ್ಟು ಪ್ರದೇಶವು 11,154 ಹೆಕ್ಟರ್ (27,561 ಎಕರೆ) ಇರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹುಲಿಗಿ, ಶಿವಪುರ, ಆನೆಗುಂದಿ, ಗಂಗಾವತಿಯ ಅಪ್ಪರ್ ಮತ್ತು ಲೋವರ್ ಎಡದಂಡೆ ಕಾಲುವೆಗಳು ಹಾಗೂ ಆಣೆಕಟ್ಟಿನ ಪ್ರದೇಶವು ಒಟ್ಟು 2899 ಹೆಕ್ಟರ್ ಅಂದರೆ 7,163 ಎಕರೆಯಷ್ಟು ಪ್ರದೇಶವನ್ನಾಗಿ ಗುರುತಿಸಲಾಗಿದೆ ಎಂದರು.

ಬಳ್ಳಾರಿ ಜಿಲ್ಲೆಯ ರಾಯ, ಬಸವಣ್ಣ, ಬೆಲ್ಲ, ಕಳಘಟ್ಟ, ತುರ್ತಾ, ಬೆಳಗೋಡಹಾಳ, ರಾಮಸಾಗರ, ಕಂಪ್ಲಿ, ದೇಶನೂರು, ಸಿರುಗುಪ್ಪ ಸೇರಿದಂತೆ ಒಟ್ಟು 10 ಬಲದಂಡೆ ಕಾಲುವೆಗಳು ಮತ್ತು ಆಣೆಕಟ್ಟಿನ ಪ್ರದೇಶವು 7,979 ಹೆಕ್ಟರ್ ಅಂದರೆ 19,716 ಎಕರೆ ಪ್ರದೇಶವನ್ನಾಗಿ ಗುರುತಿಸಲಾಗಿದೆ. ಅಲ್ಲದೇ ರಾಯಚೂರು ಜಿಲ್ಲೆಯ ಎಡದಂಡೆ ಕಾಲುವೆಯು ಬಿಜ್ಜಳ ಆಣೆಕಟ್ಟು ಪ್ರದೇಶವು ಸುಮಾರು 276 ಹೆಕ್ಟರ್ ಅಂದರೆ 682 ಎಕರೆಗಳಷ್ಟಿರುತ್ತದೆ ಎಂದು ತಿಳಿಸಿದರು.

ಈ ಕಾಲುವೆಗಳು ಹಾಗೂ ಆಣೆಕಟ್ಟುಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾಗಿದ್ದು, ಪ್ರಸ್ತುತ ಕಾಲುವೆಗಳು ಮೂಲ ಸ್ವರೂಪವನ್ನು ಕಳೆದುಕೊಂಡು ಶಿಥಿಲಾವಸ್ಥೆಯಲ್ಲಿರುವುದರಿಂದ ಎಡಿಬಿ ಸಹಾಯಧನದಿಂದ ಆಧುನೀಕರಣಗೊಳಿಸಲು ಎರಡು ಪ್ಯಾಕೇಜುಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಆಯೋಜಿಸಲಾಗಿದೆ. 3 ಅಣೆಕಟ್ಟುಗಳು ಹಾಗೂ 15 ಕಾಲುವೆಗಳ ಒಟ್ಟು ಉದ್ದ 196.62 ಕಿ.ಮೀ ನಷ್ಟು ಭೂಮಿಯಿದ್ದು, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ವಿಜಯನಗರ ಕಾಲುವೆಗಳು ಮತ್ತು 3 ಅಣೆಕಟ್ಟುಗಳು 371.09 ಕೋಟಿಗಳಿಗೆ ಎಂ/ಎಸ್ ಆರ್.ಎನ್.ಎಸ್. ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಇವರಿಗೆ ಟೆಂಡರ್ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿಯನ್ನು ತುಂಗಭದ್ರ ನೀರುನಾಯಿ ಸಂರಕ್ಷಣಾ ಪ್ರದೇಶ ಹಾಗೂ ಹಂಪಿ ವಿಶ್ವ ಪರಂಪರೆ ಸಂರಕ್ಷಣಾ ಪ್ರದೇಶಗಳನ್ನು ಹೊರತು ಪಡಿಸಲಾಗಿದೆ.ಟೆಂಡರ್ ಅವಧಿ 30 ತಿಂಗಳಾಗಿದೆ 
8 ಅಣೆಕಟ್ಟುಗಳು ಮತ್ತು ತುರ್ತು ಕಾಲುವೆ ಇದ್ದು, ಕಾಲುವೆಯ ಸುಮಾರು 18.38 ಕಿ.ಮೀ ಗಳಷ್ಟು ಉದ್ದ ಇದ್ದು, ಕಾಮಗಾರಿಗೆ 74.38 ಕೋಟಿಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಹೇಳಿದರು.

ಕಾಮಗಾರಿಯು ತುಂಗಾಭದ್ರ ನೀರುನಾಯಿ ರಾಷ್ಟ್ರೀಯ ವನ್ಯ ಜೀವಿ ಪ್ರಾಧಿಕಾರ ಮತ್ತು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಕೆಲವು ಷರತ್ತು ಮತ್ತು ನಿಯಮಾವಳಿಗೆ ಒಳಪಟ್ಟು ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ರಾಜ್ಯ ವನ್ಯ ಜೀವಿ ಪ್ರಾಧಿಕಾರವು ಈಗಾಗಲೇ ರಾಷ್ಟೀಯ ವನ್ಯ ಜೀವಿ ಮಂಡಳಿಗೆ ಅನುಮತಿಗಾಗಿ ಶಿಫಾರಸ್ಸು ಮಾಡಲಾಗಿದ್ದು, ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com