ಮೇಲುಕೋಟೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದಂಪತಿ ಭೇಟಿ, ದೇವರ ದರ್ಶನ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದಂಪತಿ ಸಮೇತರಾಗಿ ಶುಕ್ರವಾರ ಮೇಲುಕೋಟೆಗೆ ಆಗಮಿಸಿ ಶ್ರೀಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು. 
ಶಿವರಾಜ್ ಸಿಂಗ್ ಚೌಹಾಣ್ ದಂಪತಿ
ಶಿವರಾಜ್ ಸಿಂಗ್ ಚೌಹಾಣ್ ದಂಪತಿ

ಮಂಡ್ಯ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದಂಪತಿ ಸಮೇತರಾಗಿ ಶುಕ್ರವಾರ ಮೇಲುಕೋಟೆಗೆ ಆಗಮಿಸಿ ಶ್ರೀಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು. 

ಇಂದು ಮಧ್ಯಾಹ್ನ ೩-೩೦ರ ವೇಳೆಗೆ ಮೈಸೂರಿನಿಂದ ರಸ್ತೆ ಮಾರ್ಗದಲ್ಲಿ ಆಗಮಿಸಿದ ಶಿವರಾಜ್ ಸಿಂಗ್ ಚೌಹಾಣ್ ದಂಪತಿಗಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರು ಮೈಸೂರುಪೇಟ ತೊಡಿಸಿ ಬರಮಾಡಿಕೊಂಡರು. 

ದೇವಸ್ಥಾನಕ್ಕೆ ತೆರಳುವ ಮುನ್ನವೇ ಆಂದ್ರಪ್ರದೇಶದ ಚಿನ್ನಜೀಯರ್ ಸ್ವಾಮೀಜಿಯ ಶಾಖಾಮಠದಲ್ಲಿ ಶಿವರಾಜ್ ಸಿಂಗ್ ದಂಪತಿ ಪೂಜೆಮಾಡಿದರು. ನಂತರ ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ತೆರಳಿ ಕ್ಷೇತ್ರದ ಆರಾಧ್ಯ ದೈವ ಶ್ರೀಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇಶದ ಸುಭೀಕ್ಷಕ್ಕಾಗಿ ಪ್ರಾರ್ಥಿಸಿದರು.

ಇದೇ ವೇಳೆ ಯದುಗಿರಿನಾಯಕಿ ಅಮ್ಮನವರು ಆಚಾರ್ಯರಾಮಾನುಜಾಚಾರ್ಯರು, ಮಣವಾಳಮಾಮುನಿ ಜೀಯರ್ ದರ್ಶನಮಾಡಿ ಬೆಟ್ಟಹತ್ತಿ ಯೋಗನರಸಿಂಹನ ದರ್ಶನ ಸಹ ಮಾಡಿದರು. ನಂತರ ರಾತ್ರಿ ಮೈಸೂರಿಗೆ ಹಿಂದಿರುಗಿದರು. 

ಬೆಳ್ಳಿಯ ರಥ ನಿರ್ಮಿಸಲು ಸಂಕಲ್ಪ
ಚೆಲುವನಾರಾಯಣಸ್ವಾಮಿಗೆ ಬೆಳ್ಳಿಯ ರಥನಿರ್ಮಿಸಿಕೊಡಲು ಸಂಕಲ್ಪಮಾಡುತ್ತೇನೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಕಲ್ಪಮಾಡಿದರು. 

ದೇವಾಲಯದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ವಿದ್ವಾನ್ ರಾಮಪ್ರಿಯ ಈ ಪರ್ವಕಾಲದ ಹರಕೆಯ ಪೂರೈಕೆಗಾಗಿ ಚೆಲುವನಾರಾಯಣಸ್ವಾಮಿಗೆ ಬೆಳ್ಳಿಯ ಪುಟ್ಟರಥನಿರ್ಮಿಸಿಕೊಡಿ ಎಂದು ಮನವಿ ಸ್ವೀಕರಿಸಿ ಸಂಕಲ್ಪಮಾಡುವುದಾಗಿ ತಿಳಿಸಿದರು. 

ಈ ಹಿಂದೆ ಅಧಿಕಾರ ಕಳೆದುಕೊಂಡಿದ್ದ ಶಿವರಾಜ್‌ ಸಿಂಗ್ ಅವರು ದಂಪತಿ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿದ್ದ ವೇಳೆ 
ಆಂಧ್ರದ ತ್ರಿದಂಡಿಶ್ರೀಮನ್ನಾರಾಯಣ ಚಿನ್ನಜೀಯರ್ ಸ್ವಾಮೀಜಿಯವರ ಸಲಹೆಯಂತೆ ಜೀಯರ್ ಮಠದಲ್ಲಿ ಪ್ರಸಾದ ಸ್ವೀಕರಿಸಿ ಚೆಲುವನಾರಾಯಣಸ್ವಾಮಿಗೆ ಪೂಜೆಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರು. ಅಂತೆಯೇ ಅವರ ಅಪೇಕ್ಷೆ ಶೀಘ್ರವೇ ಈಡೇರಿ ಮತ್ತೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಕಾರಣ ಚೆಲುವನಾರಾಯಣಸ್ವಾಮಿಗೆ ಇಂದು ದಂಪತಿ ಹಾಗೂ ಹಿತೈಷಿಗಳ ಸಮೇತ ಸ್ವಾಮಿಗೆ ಹರಕೆ ಸಲ್ಲಿಸಿ, ದೇವರ ದರ್ಶನ ಪಡೆದರು.

ಜೊತೆಗೆ ಬೆಳ್ಳಿಯ ರಥಸಮರ್ಪಣೆಗೂ ವಿಶೇಷ ಸಂಕಲ್ಪಮಾಡಿದರು. ದೇವರ ದರ್ಶನವಾದ ನಂತರ ದೇವಾಲಯದ ಕೈಂಕರ್ಯಪರರೆಲ್ಲಾ ಸೇರಿ ಯಶಸ್ಸು ಸಿಗಲಿ ಎಂದು ಹಾರೈಸಿ ರಾಜಾಶೀರ್ವಾದಮಾಡಿ ಕಳುಹಿಸಿಕೊಟ್ಟರು. 

ಮುಖ್ಯಮಂತ್ರಿಗಳ ಕಾರ್ಯಕ್ರಮ ಯಶಸ್ಸಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್, ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಪ್ರಮೋದ್ ಪಾಟೀಲ್ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ಮಠದ ಸ್ಥಳೀಯ ಶ್ರೀಕಾರ್ಯಕರ್ತ ಹರಿಕೃಷ್ಣಮಾಚಾರ್ಯ ಶ್ರಮಿಸಿದರು.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com