ಕೊರೋನಾ ನಿಯಂತ್ರಣ ವಿಚಾರದಲ್ಲಿ ವಿಪಕ್ಷಗಳ ಸಲಹೆ ಪರಿಗಣನೆ: ಯಡಿಯೂರಪ್ಪ

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ವಿಪಕ್ಷಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದುವರೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ವಿಪಕ್ಷಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದುವರೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜರುಗಿದ ಸರ್ವಪಕ್ಷ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಪ್ರಸ್ತಾಪ ಇಲ್ಲ ಎಂದರು . 

ಬೆಂಗಳೂರಲ್ಲಿ ಲಾಕ್ ಡೌನ್ ಬೇಡ, ಆದರೆ ಸೀಲ್ ಡೌನ್ ಮಾಡಿ ಮತ್ತಷ್ಟು ಬಿಗಿ ಕ್ರಮಕೈಗೊಳ್ಳಬೇಕು. ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕೊರೋನಾ ನಿಯಂತ್ರಿಸಬೇಕು ಎಂಬ ನಿಟ್ಟಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇಡೀ ಬೆಂಗಳೂರು ಲಾಕ್ ಡೌನ್ ಬಗ್ಗೆ ಯಾವುದೇ ಆತುರದ ನಿರ್ಧಾರ ಬೇಡ. ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆಯುತ್ತಿದೆ. ಈಗಾಗಲೇ ಲಾಕ್ ಡೌನ್ ನಿಂದ ಬಾರಿ ನಷ್ಟವಾಗಿದ್ದು, ಸರ್ಕಾರದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಈಗ ಮತ್ತೆ ಲಾಕ್ ಡೌನ್ ಮಾಡಿದರೆ ಸರ್ಕಾರದ ಆರ್ಥಿಕ ಸುಧಾರಣೆ ಮಾಡಲು ತುಂಬಾ ಕಷ್ಟ ಆಗಲಿದೆ ಎಂದರು.

ಈಗ ಮತ್ತೆ ಲಾಕ್ ಡೌನ್ ಮಾಡಿದರೆ ಸರ್ಕಾರದ ಆರ್ಥಿಕ ಸುಧಾರಣೆ ಮಾಡಲು ತುಂಬಾ ಕಷ್ಟ ಆಗಲಿದೆ.ಹೀಗಾಗಿ ಲಾಕ್ ಡೌನ್ ಬೇಡ. ಬರೀ ಸೀಲ್ ಡೌನ್ ಮಾಡಿಯೇ ಕೊರೋನಾ ನಿಯಂತ್ರಿಸೋಣ ಎಂಬ ಸಂಪುಟ ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಸಮಾಲೋಚನೆ ಮಾಡಲಾಗುತ್ತಿದೆ. ಎಲ್ಲರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಹೇಳಿದರು.

ಬೆಂಗಳೂರು ಲಾಕ್‌ ಡೌನ್ ಮಾಡುವಂತೆ ಸಲಹೆ ನೀಡಿದ ಕಾಂಗ್ರೆಸ್
ಬೆಂಗಳೂರಿನಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ಸರ್ವಪಕ್ಷ ಶಾಸಕರ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್, ಬೆಂಗಳೂರನ್ನು ಲಾಕ್‌ ಡೌನ್‌ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಪ್ರತಿಕ್ಷೇತ್ರದಲ್ಲಿಯೂ ಕೋವಿಡ್ ತಪಾಸಣಾ ಕೇಂದ್ರ, ಎಲ್ಲರಿಗೂ ರಾಂಡೆಮ್ ಪರೀಕ್ಷೆ ಮಾಡಿಸುವಂತೆ ಸಭೆಯಲ್ಲಿ ಕಾಂಗ್ರೆಸ್ ಒತ್ತಾಯಿಸಿದೆ. ಆದರೂ ವಿಪಕ್ಷಗಳ ಲಾಕ್ ಡೌನ್ ಸಲಹೆಯನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ‌.

ಸಭೆಗೂ ಮುನ್ನ ಕಾಂಗ್ರೆಸ್ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಚರ್ಚಿಸಿ ಸರ್ಕಾರಕ್ಕೆ ಸಲಹೆ ನೀಡುವ ಬಗ್ಗೆ ಎಲ್ಲರೂ ಒಮ್ಮತದ ತೀರ್ಮಾನ ವ್ಯಕ್ತಪಡಿಸುವಂತೆ ನಿರ್ಣಯ ಕೈಗೊಂಡಿದ್ದರು.

ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಬೆಂಗಳೂರಿನ ಶಾಸಕರ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಭೆಯ ಬಳಿಕ ಎನ್.ಎ.ಹ್ಯಾರೀಸ್ ಮಾತನಾಡಿ, ಕೋವಿಡ್ ಸಾಮುದಾಯಿಕವಾಗಿ ಹರಡಲಾರಂಭಿಸಿದೆ. ಲಾಕ್ ಡೌನ್ ಮಾಡುವುದಿಲ್ಲ ಎಂದು ಸಭೆಯಲ್ಲಿ ಸರ್ಕಾರ ಹೇಳಿದೆ. ನಾವು ಪ್ರತಿಯೊಬ್ಬರ ಪ್ರಾಣ ಕಾಪಾಡಬೇಕಿದೆ. ಆರ್ಥಿಕ ನಷ್ಟವಾಗುತ್ತದೆ ಎಂದು ಹೇಳಿ ಲಾಕ್‌ ಡೌನ್ ಮಾಡುವುದಿಲ್ಲ ಎಂದರೆ ಹೇಗೆ?. ಮಳೆ ಬಂದ ಮೇಲೆ ಕೊಡೆ ಹಿಡಿಯುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಸಭೆ ಕರೆದಿದ್ದಕ್ಕೆ ಧನ್ಯವಾದ ಸಲ್ಲಿಸಿದ ಹ್ಯಾರೀಸ್, ಆದರೆ ಸಭೆ ಸರಿಯಾಗಿ ಆಗಿಲ್ಲ. ವೈಯಕ್ತಿಕವಾಗಿ ನಾನು ಲಾಕ್ ಡೌನ್ ಮಾಡಿ ಎಂದು ಸಲಹೆ ನೀಡಿದ್ದೇನೆ. ಆದರೆ ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಯ ಪ್ರಮಾಣ ಹೆಚ್ಚಿಸುವುದಾಗಿ ಹೇಳಿದೆ. ಇದರರ್ಥ ಕೊರೊನಾ ಹೆಚ್ಚಾಗುತ್ತದೆ ಎಂದು ಸರ್ಕಾರವೇ ಪರೋಕ್ಷವಾಗಿ ಹೇಳಿದೆ. ನಾವು ನೀಡಿದ ಸಲಹೆಯನ್ನು ತೆಗೆದುಕೊಂಡು ಸರ್ಕಾರ ಏನು ಮಾಡುತ್ತದೆಯೋ ಗೊತ್ತಿಲ್ಲ ಎಂದು ಹೇಳಿದರು.

ರಾಮಲಿಂಗಾರೆಡ್ಡಿ ಮಾತನಾಡಿ, ಲಾಕ್ ಡೌನ್ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸಭೆಯಲ್ಲಿ ಕೇಳಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಚಿವ ಅಶೋಕ್ ಕೂಡಾ ಮಾಹಿತಿ ನೀಡಿ,ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಮನಸಿಲ್ಲ. ಸರ್ಕಾರ ಕೊರೊನಾ ನಿಯಂತ್ರಣ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಜನದಟ್ಟಣೆ ಕಡಿಮೆ ಮಾಡಿಸಲು, ರಾಂಡಮ್ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದೇನೆ ಎಂದರು.

ರಿಜ್ವಾನ್ ಅರ್ಷದ್ ಮಾತನಾಡಿ, ಸರ್ಕಾರಕ್ಕೆ ಕೆಲವು ಸಲಹೆ ಕೊಡಲಾಗಿದೆ. ಸಾಮಾನ್ಯ ಜನರಿಗೆ ಬಹಳ ತೊಂದರೆ ಆಗಿದೆ. ಈಗಾಗಲೇ ಕೋವಿಡ್ ಗೆ ಮೀಸಲಿಟ್ಟ ಆಸ್ಪತ್ರೆಗಳು ತುಂಬಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಚಿಕಿತ್ಸೆ ಪಡೆದುಕೊಳ್ಳಲು ಕಷ್ಟವಾಗಿದೆ. ವೆಂಟಿಲೇಟರ್ ಗಳು ಇನ್ನೂ ಅಗತ್ಯ ಇದೆ ಎಂದು ಸಲಹೆ ನೀಡಿರುವುದಾಗಿ ಹೇಳಿದರು.

ಒಂದು ರೋಗಿಯನ್ನು ಕರೆದುಕೊಂಡು ಬರಲು ಅರ್ಧ ದಿನ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಟೆಸ್ಟಿಂಗ್ ಸೆಂಟರ್ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಕೊರೋನಾ ಫಲಿತಾಂಶ ಬರಲು ಮೂರುನಾಲ್ಕು ದಿನ ತೆಗೆದುಕೊಳ್ಳುತ್ತಿದ್ದಾರೆ. ಫಲಿತಾಂಶ ಬರುವುದರೊಳಗೆ ಸೋಂಕಿತ ವ್ಯಕ್ತಿ ಹಲವು ಕಡೆ ಓಡಾಡಿ ಬಂದಿರುತ್ತಾನೆ. ತಜ್ಞರ ಜೊತೆ ಚರ್ಚಿಸಿ ಲಾಕ್ ಡೌನ್ ಬಗ್ಗೆ ನಿರ್ಧಾರ‌ ಮಾಡುವಂತೆಯೂ ಲಾಕ್ ಡೌನ್ ಮಾಡಿದರೆ ಬಡವರಿಗೆ ಸಹಾಯ ಮಾಡುವಂತೆಯೂ ಸಲಹೆ ನೀಡಲಾಗಿದೆ ಎಂದರು.

ಶಾಸಕ ಬೈರತಿ ಸುರೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಳಕ್ಕೆ, ಹಾಸಿಗೆಗಳ ಬಗ್ಗೆ ಮಾಹಿತಿ ಪಡೆಯಲು ವೆಬ್ ಸೈಟ್ ಆರಂಭಿಸುವಂತೆ ಸಲಹೆ ನೀಡಿದ್ದೇವೆ. ಕೊರೊನಾ ತಡೆಯಲು ಸರ್ಕಾರದ ಜೊತೆ ಪಕ್ಷಾತೀತವಾಗಿ ರಾಜಕಾರಣ ಬಿಟ್ಟು ಜೊತೆಗಿರುತ್ತೇವೆ ಎಂದರು.

ಬೆಂಗಳೂರನ್ನು ಲಾಕ್ ಡೌನ್ ಮಾಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನಾದರೂ ಲಾಕ್ ಡೌನ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಒಪ್ಪುತ್ತಿಲ್ಲ. ಸೀಲ್ ಡೌನ್ ಮಾಡುವುದಾಗಿ ಹೇಳಿದ್ದಾರೆ. ಸೂಕ್ಷ್ಮಮತಿ ಮುಖ್ಯಮಂತ್ರಿಗಳು ನಮ್ಮ ಸಲಹೆ ಪರಿಗಣಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಬೈರತಿ ಸುರೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com