ವೃಷಭಾವತಿ ನದಿ ತಡೆಗೋಡೆ ಕುಸಿತ: ಮೈಸೂರು ರಸ್ತೆಯಲ್ಲಿ ಸಂಚಾರಕ್ಕೆ ವ್ಯತ್ಯಯ

ನಗರದ ಮೈಸೂರು ರಸ್ತೆಯ ಕೆಂಗೇರಿ ಸಮೀಪ ಭಾರೀ ಮಳೆಯಿಂದಾಗಿ ವೃಷಭಾವತಿ ನದಿಯ ತಡೆಗೋಡೆ ಕುಸಿದುಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದ ಸುಮಾರು 1 ಕಿ.ಮೀ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಪಕ್ಕದ ಮಾರ್ಗದಲ್ಲಿ ಎರಡೂ ಕಡೆಗಳ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 
ಗೋಡೆಕುಸಿತ ಕಂಡಿರುವುದನ್ನು ನೋಡುತ್ತಿರುವ ಸ್ಥಳೀಯರು
ಗೋಡೆಕುಸಿತ ಕಂಡಿರುವುದನ್ನು ನೋಡುತ್ತಿರುವ ಸ್ಥಳೀಯರು

ಬೆಂಗಳೂರು: ನಗರದ ಮೈಸೂರು ರಸ್ತೆಯ ಕೆಂಗೇರಿ ಸಮೀಪ ಭಾರೀ ಮಳೆಯಿಂದಾಗಿ ವೃಷಭಾವತಿ ನದಿಯ ತಡೆಗೋಡೆ ಕುಸಿದುಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದ ಸುಮಾರು 1 ಕಿ.ಮೀ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಪಕ್ಕದ ಮಾರ್ಗದಲ್ಲಿ ಎರಡೂ ಕಡೆಗಳ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

ಇದರಿಂದಾಗಿ ಅಲ್ಲಿ ಸಂಚಾರಿ ದಟ್ಟಣೆ ಉಂಟಾಗುತ್ತಿದೆ. ಈಗಾಗಲೇ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಿಸಲಾಗುತ್ತಿದ್ದು, ಈಗ ನಗರದಿಂದ ಹೊರ ಮಾರ್ಗದಲ್ಲಿ ಸಂಚಾರಿ ಸಮಸ್ಯೆಯಾಗಿದೆ. 

ತಡೆಗೋಡೆ ಕುಸಿದು ಬೀಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹಾಗೂ ಮೇಯರ್ ಎಂ.ಗೌತಮ್ ಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು. 

ಈ ನಡುವೆ ಬಿಬಿಎಂಪಿ ಇಂಜಿನಿಯರ್ ಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಆರೋಪ ಮಾಡಿದ್ದು, ವೃಷಭಾವತಿ ಕಾಲುವೆ ತಡೆಗೋಡೆ ಕುಸಿದ ದುರಂತಕ್ಕೆ ಹೆದ್ದಾರಿ ಪ್ರಾಧಿಕಾರವೇ ಕಾರಣ ಎಂದಿದ್ದಾರೆ. 

ವೃಷಭಾವತಿ ರಾಜಕಾಲುವೆಗೆ ಕಳೆದ 20 ವರ್ಷಗಳ ಹಿಂದೆಯೇ ತಡೆಗೋಡೆ ನಿರ್ಮಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಳೆ ತಡೆಗೋಡೆಯನ್ನು ಬಳಸಿಕೊಂಡೇ ಹೊಸ ರಕ್ಷಣಾ ತಡೆಗೋಡೆ ಕಾಮಗಾರಿ ನಡೆಸಿದ್ದರು. ಈ ಕಾಮಗಾರಿ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಗುರುವಾರ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದುಬಿದ್ದಿದೆ. ಈ ಅನಾಹುತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕಾರಣ ಎಂದು ಹೇಳಿದ್ದಾರೆ. 

ತಡೆಗೋಡೆ ಕುಸಿದಿರುವ ಹಿನ್ನೆಲೆಯಲ್ಲಿ ತುರ್ತಾಗಿ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com