ಆಗಸ್ಟ್ ನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಸುರೇಶ್ ಕುಮಾರ್

ಜುಲೈ 4ರಂದು ಮುಕ್ತಾಯಗೊಳ್ಳಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

ಬೆಂಗಳೂರು: ಜುಲೈ 4ರಂದು ಮುಕ್ತಾಯಗೊಳ್ಳಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್ ಅವರು, ಪರೀಕ್ಷೆ ಮುಗಿದ ಸುರಕ್ಷಿತ ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸೋಮವಾರ ಎಸ್ಎಸ್ಎಲ್ ಸಿಪಿ ಮೂರನೇ ಪರೀಕ್ಷೆಯನ್ನು ಶೇ. 97.3ರಷ್ಟು ಮಕ್ಕಳು ಬರೆದಿದ್ದಾರೆ. ಕಳೆದ ವರ್ಷ 98.69 ರಷ್ಟು ಮಕ್ಕಳು ಪರೀಕ್ಷೆ ಬರೆದಿದ್ದರು. ನಿನ್ನೆ ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ರಾಯಚೂರಿನಲ್ಲಿ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದರು.

ಎಲ್ ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳಿರುವುದಿಲ್ಲ. ವಾರಕ್ಕೆ ಎರಡು ಬಾರಿ ಶಾಲೆಗಳ ಶಿಕ್ಷಕರು ಮಕ್ಕಳೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸುತ್ತಿರಬೇಕು ಎಂದು ಸೂಚಿಸಿದ್ದೇವೆ ಎಂದರು. 

1ನೇ ತರಗತಿಯಿಂದ 10ನೇ ತರಗತಿಯವರೆಗೆ ಯಾವ ರೀತಿ ಪಾಠಗಳನ್ನು ನಡೆಸಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿ ಆಧಾರದ ಮೇಲೆ ಮತ್ತು ಈ ಹಿಂದೆ ಕೈಗೊಂಡ ನಿರ್ಧಾರಗಳ ಮೇಲೆ ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com