ಕಾನೂನು ತೊಡಕು ನಿವಾರಣೆ ನಂತರ ಮಹದಾಯಿ ಕಾಮಗಾರಿ: ರಮೇಶ್ ಜಾರಕಿಹೊಳಿ

ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತ ಕಾನೂನು ಅಡೆತಡೆಗಳು ನಿವಾರಣೆಯಾದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತ ಕಾನೂನು ಅಡೆತಡೆಗಳು ನಿವಾರಣೆಯಾದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಕೇಂದ್ರ ಸರ್ಕಾರ ಮಹದಾಯಿ ನದಿ ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸಿದ್ದು, ಪೂರ್ಣಪ್ರಮಾಣದಲ್ಲಿ ಕಾನೂನು ತೊಡಕುಗಳು ನಿವಾರಣೆಯಾದ ನಂತರ ಕಳಸಾ ಬಂಡೂರಿ ನಾಲಾ ಯೋಜನೆಯ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ಬರುವ ಜುಲೈ ತಿಂಗಳಿನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ನಾಡಿದ್ದು ಸೋಮವಾರ ಸರ್ವೋಚ್ಛ ನ್ಯಾಯಾಲಯದ ಮುಂದೆ ವಿಷಯ ಪ್ರಸ್ತಾಪವಾಗಲಿದೆ ಎಂದರು.

ಈಗಾಗಲೇ ನ್ಯಾಯಾಲಾಯದ ಆದೇಶದ ಪ್ರಕಾರ ಮಹಾದಾಯಿ ನದಿಯಿಂದ 32 ಟಿಎಂಸಿಗಿಂತ ಹೆಚ್ಚು ನೀರು ಲಭ್ಯವಾಗಲಿದೆ. ಮುಂದೆ ಕುಡಿಯುವ ನೀರಿನ ಲಭ್ಯತೆಗೆ ಯಾವುದೇ ತೊಂದರೆಯುಂಟಾಗುವುದಿಲ್ಲ. ಜುಲೈನಲ್ಲಿ ಪ್ರಕಟಗೊಳ್ಳುವ ಅಂತಿಮ ತೀರ್ಪಿನನ್ವಯ 44 ಟಿಎಂಸಿಕ್ಕಿಂತಲೂ ಹೆಚ್ಚು ನೀರು ಕರ್ನಾಟಕಕ್ಕೆ ದೊರೆಯುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದರು.

ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಿಲ್ಲ. ಅಧಿಸೂಚನೆ ಹೊರಡಿಸುವ ಮುನ್ನ 200 ಕೋಟಿ ರೂ. ಹಣವನ್ನು ಬಜೆಟ್ ನಲ್ಲಿ ಮೀಸಲಿಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಬರುವ ದಿನಗಳಲ್ಲಿ ಸರ್ಕಾರ ಮಹದಾಯಿ ನದಿ ನೀರು ಯೋಜನೆಗೆ ಒಂದು ಸಾವಿರ ಕೋಟಿ ರೂ. ಒದಗಿಸಲಿದೆ. ಯೋಜನೆ ಅನುಷ್ಟಾನಕ್ಕೆ ಎಷ್ಟೇ ಹಣ ವೆಚ್ಚವಾದರೂ ಸರ್ಕಾರ ಒದಗಿಸಲಿದೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಕಾವೇರಿ, ಮೇಕೆದಾಟು ಮೊದಲಾದ ನದಿ ನೀರಿನ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕಾರ್ಯೋನ್ಮುಖವಾಗಲಿದೆ. ನೀರಿನ ತಂಟೆ, ತಕರಾರುಗಳ ನಿವಾರಣೆಗೆ ಕೇಂದ್ರ ಸರ್ಕಾರದ ಸಂಪರ್ಕ ಸಾಧಿಸಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com