ಯಡಿಯೂರಪ್ಪ
ಯಡಿಯೂರಪ್ಪ

ಬಾಗಲಕೋಟೆ: ಬೆಟ್ಟದಷ್ಟು ಬೇಡಿಕೆಗಳಲ್ಲಿ ಮುಷ್ಠಿಯಷ್ಟಕ್ಕಾದರೂ ಸಿಗಬೇಕಿದೆ ಸ್ಪಂದನೆ!

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಳೆ ಬೇಡಿಕೆಗಳ ಜತೆಗೆ ಹೊಸ ಅಂಶಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಗಳ ಮಹಾಪುರವನ್ನೇ ಹರಿಸಿದ್ದಾರೆ.

ಬಾಗಲಕೋಟೆ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಳೆ ಬೇಡಿಕೆಗಳ ಜತೆಗೆ ಹೊಸ ಅಂಶಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಗಳ ಮಹಾಪುರವನ್ನೇ ಹರಿಸಿದ್ದಾರೆ.

ಬೆಟ್ಟದಷ್ಟು ಬೇಡಿಕೆಗಳ ಪೈಕಿ ಕೆಲವಷ್ಟಾದರೂ ಈಡೇರಿದಲ್ಲಿ ಅಷ್ಟೇ ಸಾರ್ಥಕ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.

ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ನೀರಾವರಿ ಯೋಜನೆಗಳ ಅನುಷ್ಠಾನ, ಭೂಸ್ವಾದೀನಕ್ಕಾಗಿ  ಏಕರೂಪ ಭೂಬೆಲೆ ನಿಗದಿ, ಸಂತ್ರಸ್ತರಿಗೆ ಪರಿಹಾರ, ಕೆರೂರ ಏತ ನೀರಾವರಿ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಪಟ್ಟಿಯನ್ನು ನೀಡಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕೃಷ್ಣಾ ಮೇಲ್ದಂಡೆ ಯೋಜನೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ಯೋಜನೆ ಅನುಷ್ಠಾನಕ್ಕಾಗಿ ೨೦ ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

ಬಾದಾಮಿ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೆರೂರ ಏತ ನೀರಾವರಿ ಯೋಜನೆ ಸೇರಿದಂತೆ ಹತ್ತಾರು ಮೂಲ ಸೌಕರ್ಯಗಳನ್ನು ಕಲ್ಪಿಸಲು ಮನವಿ ಮಾಡಿ ಪತ್ರ ಬರೆದಿದ್ದಾರೆ. ಬೀಳಗಿ ಶಾಸಕ ಮುರುಗೇಶ ನಿರಾಣಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಅನುಷ್ಟಾನ ಮತ್ತು ವಿಸ್ತರಣೆಗಾಗಿ ೧೫೦೦ ಕೋಟಿ ರೂ.ಗಳನ್ನು ಮೀಸಲಿಡುವಂತೆ ಮನವಿ ಮಾಡಿದ್ದಾರೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗಲಿರುವ ಬಾಗಲಕೋಟೆ ನಗರದ ಬಾಧಿತ ಪ್ರದೇಶದ ಸ್ಥಳಾಂತರ, ನಡುಗಟ್ಟೆ ಆಗಲಿರುವ ಕಿಲ್ಲಾ ಪ್ರದೇಶ ಸ್ಥಳಾಂತರ, ಬಾಗಲಕೋಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸಬೇಕು ಎನ್ನುವ ಮನವಿಯನ್ನು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.

ಜನಪ್ರತಿನಿಧಿಗಳ ಜತೆಗೆ ಜನಪರ ಹೋರಾಟಗಾರರು ಬಾಗಲಕೋಟೆಯಲ್ಲಿ ಸರ್ಕಾರಿ ಮೇಡಿಕಲ್ ಕಾಲೇಜ್ ಆರಂಭಿಸುವಂತೆ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇಷ್ಟೆಲ್ಲ ಬೇಡಿಕೆಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಪರಿಗಣಿಸುವಂತೆ ಕೋರಲಾಗಿದ್ದು, ಇವುಗಳಲ್ಲಿ ಎಷ್ಟು ಯೋಜನೆಗಳಿಗೆ ಅದೃಷ್ಟ ಕೂಡಿ ಬರಲಿದೆ ಎನ್ನುವ ಕಾತರ ಶುರುವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. 

ಸಿಎಂ ಭರವಸೆಯಂತೆ ಯುಕೆಪಿ ಯೋಜನೆ ಅನುಷ್ಠಾನ, ಕೆರೂರ ಏತ ನೀರಾವರಿ, ಹೆರಕಲ್ ಬ್ರಿಡ್ಜ್ನಲ್ಲಿ ೫೧೫ ರಿಂದ ೫೧೯.೬೦ ಮೀಟರ್ ವರೆಗೆ ನೀರು ಸಂಗ್ರಹಣೆಗೆ ಅನುಮತಿ ಸಿಕ್ಕುವ ಸಾಧ್ಯತೆಗಳು ನಿಚ್ಚಳವಾಗಿವೆ.

ಉಳಿದಂತೆ ಮೆಡಿಕಲ್ ಕಾಲೇಜ್ ಆರಂಭ, ತಾಂತ್ರಿಕ ಕಾಲೇಜ್‌ಗಳ ಆರಂಭ, ಪ್ರವಾಸೋದ್ಯಮ ಅಭಿವೃದ್ಧಿ, ಮಹಾನಗರ ಪಾಲಿಕೆ ಘೋಷಣೆ ಸೇರಿದಂತೆ ಇತರ ಮನವಿಗಳಿಗೆ ಸಿಎಂ ಎಷ್ಟರ ಮಟ್ಟಿಗೆ ಸ್ಪಂದಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.

ಪ್ರಸಕ್ತ ಸಾಲಿನ ರಾಜ್ಯ ಮುಂಗಡಪತ್ರ ಮಂಡನೆಗೆ ದಿನಗಣನೆ ಆರಂಭಗೊಂಡಿದ್ದು, ಜಿಲ್ಲೆಯ ಹತ್ತಾರು ಪ್ರಮುಖ ಬೇಡಿಕೆಗಳಲ್ಲಿ ಯಾವ ಬೇಡಿಕೆಗಳಿಗೆ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆ ಬಹುತೇಕರಲ್ಲಿ ಹುಟ್ಟಿಕೊಂಡಿದೆ. 

ಇವುಗಳ ಜತೆಗೆ ಇಂದಿರಾ ಕ್ಯಾಂಟಿನ್‌ನಲ್ಲಿನ ಆಹಾರಗಳ ಬೆಲೆ ಎಷ್ಟು ಹೆಚ್ಚಾಗಲಿದೆ. ಬಿಪಿಎಲ್ ಪಡಿತರ ಚೀಟಿದಾರರ ಸದ್ಯ ಹಂಚಿಕೆ ಆಗುತ್ತಿರುವ ಏಳು ಕೆಜಿ ಅಕ್ಕಿಯಲ್ಲಿ ಎಷ್ಟು ಪ್ರಮಾಣದಲ್ಲಿ ಕಡಿಮೆ ಆಗಲಿದೆ ಎನ್ನುವ ವಿಷಯ ಜನಸಾಮಾನ್ಯರ ಚಿಂತನೆಗೆ ಕಾರಣವಾಗಿದೆ.

ಏನೆ ಆಗಲಿ ಪ್ರಸಕ್ತ ¨ಜೆಟ್‌ನಲ್ಲಿ ನೀರಾವರಿ, ಕುಡಿವ ನೀರು, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು ಎನ್ನುವ ಆಶಯದಲ್ಲಿ ಜನತೆ ಇದ್ದಾರೆ. ಅವರ ಆಶಯಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರೀಕ್ಷಿತ ಸ್ಪಂದನೆ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಜನಪ್ರತಿನಿಧಿಗಳು ಇದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com