ಬಜೆಟ್ ಅಧಿವೇಶನ: ಕಲಾಪದಲ್ಲಿ ಯತ್ನಾಳ್ ಹೇಳಿಕೆ ಗದ್ದಲ, ಸದನದ ಬಾವಿಗಿಳಿದು ಪ್ರತಿಪಕ್ಷಗಳಿಂದ ಪ್ರತಿಭಟನೆ

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಕುರಿತಾಗಿ ವಿವಾದಾತ್ಮಕ ಹೇಳಿಕ ನೀಡಿದ್ದ ಬಿಜೆಪಿ ಶಾಸಕ ಬಸನಗೊಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸದನದ ಬಾವಿಗಿಳಿದ ಕಾಂಗ್ರೆಸ್ ನಾಯಕರು, ಪ್ರತಿಭಟನೆ ನಡೆಸುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಕುರಿತಾಗಿ ವಿವಾದಾತ್ಮಕ ಹೇಳಿಕ ನೀಡಿದ್ದ ಬಿಜೆಪಿ ಶಾಸಕ ಬಸನಗೊಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸದನದ ಬಾವಿಗಿಳಿದ ಕಾಂಗ್ರೆಸ್ ನಾಯಕರು, ಪ್ರತಿಭಟನೆ ನಡೆಸುತ್ತಿದ್ದಾರೆ. 

ಅಗಲಿದ ಗಣ್ಯರಿಗೆ ಸಂತಾಪ ನಿರ್ಣಯ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಆದರೆ, ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವಕಾಶ ನೀಡಲಿಲ್ಲ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಪ್ರಶ್ನೆಗೆ ಉತ್ತರ ನೀಡಿದ ಬಳಿಕ ಅವಕಾಶ ನೀಡುವುದಾಗಿ ತಿಳಿಸಿದರು. 

ಆದರೆ, ವಿಚಾರ ಪ್ರಸ್ತಾಪಕ್ಕೆ ಸ್ಪೀಕರ್ ವಿಶೇಷಾಧಿಕಾರ ಬಳಸಿ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಪಟ್ಟು ಹಿಡಿದರು. ಇದಕ್ಕೆ ಅವಕಾಶ ನೀಡದೆ ರಾಜ್ಯಪಾಲರ ಭಾಷಣದ ಮೇಲಿನ ಪ್ರಶ್ನೆಗೆ ಉತ್ತರ ನೀಡಲು ಮುಖ್ಯಮಂತ್ರಿಗಳು ಮುಂದಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿವೆ. 

ರಾಜ್ಯ ಸರ್ಕಾರ ಹಾಗೂ ಶಾಸಕ ಯತ್ನಾಳ್ ವಿರುದ್ಧ ಘೋಷಣೆ ಕೂಗುತ್ತಿರುವ ಕಾಂಗ್ರೆಸ್ ನಾಯಕರು ಸಂವಿಧಾನವನ್ನು ರಕ್ಷಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕಲಾಪಕ್ಕೆ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಉತ್ತರದ ಬಳಿಕ ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು. 

ಸಿ.ಚೆನ್ನಿಗಪ್ಪ, ಚತುರ್ವೇದಿ, ಷ.ಶೆಟ್ಟರ್ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ: ಮೃತರ ಸಾಧನೆ ಸ್ಮರಣೆ
ಇತ್ತೀಚೆಗೆ ನಿಧನರಾದ ಇತಿಹಾಸಕಾರ ಮಾಜಿ ಸಚಿವ ಸಿ.ಚೆನ್ನಿಗಪ್ಪ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ ಚತುರ್ವೇದಿ ಹಾಗೂ ಇತಿಹಾಸಕಾರ ಷ.ಶೆಟ್ಟರ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು.ಸದನಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಿಸಲಾಯಿತು. ಸದನ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

ಆರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಿ.ಚನ್ನಿಗಪ್ಪ ಅವರು ಕೊರಟಗೆರೆ ಕ್ಷೇತ್ರದಿಂದ 3 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಧರ್ಮಸಿಂಗ್ ಅವರ ಸಂಪುಟದಲ್ಲಿ, ಕುಮಾರಸ್ವಾಮಿ ಅವರ ಸಂಪುಟದಲ್ಲಿ ರೇಷ್ಮೆ, ಅರಣ್ಯ, ಭೂ ವಿಜ್ಞಾನ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದ ಅವರು ರಾಜಕೀಯದಲ್ಲಿ ಅಪಾರ ಸೇವೆ ಮಾಡಿದ್ದಾರೆ. ಅವರ ನಿಧನದ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ದಯಾಪಾಲಿಸಲಿ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಸುಧಾಕರ ಚತುರ್ವೇದಿಯವರು ಜಲಿಯನ್‌ ವಾಲಾ ಬಾಗ್ ದುರಂತಕ್ಕೆ ಸಾಕ್ಷಿಯಾಗಿದ್ದರು. ದೇಶಕ್ಕಾಗಿ ಹುತಾತ್ಮರಾದವರ ಅಂತಿಮ ಸಂಸ್ಕಾರವನ್ನು ಕೂಡ ಸ್ವತ ಅವರೇ ನೆರವೇರಿಸಿದ್ದರು. ಮಹಾತ್ಮ ಗಾಂಧಿ ತಪ್ಪು ಹೆಜ್ಜೆ ಇಟ್ಟಾಗ ಅದನ್ನು ಪ್ರಶ್ನಿಸುವ ನೈತಿಕತೆಯನ್ನು ಬೆಳೆಸಿಕೊಂಡಿದ್ದರು. ವೇದಾಂತಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದು ಸ್ಮರಿಸಿದರು.

ಸಂಶೋಧಕ ಷ. ಶೆಟ್ಟರ್ ಅವರು ಖ್ಯಾತ ಇತಿಹಾಸಕಾರರಾಗಿದ್ದರು. ಹಳಗನ್ನಡದ ಮೇಲೆ ವಿಶೇಷ ಸಂಶೋಧನೆ ನಡೆಸಿದ್ದರು. ಕನ್ನಡ ಭಾಷೆಯ ಪ್ರಾಚೀನತೆ ಬಗ್ಗೆ ಸಂಶೋಧನೆ ನಡೆಸಿ ಹೊಸ ಬೆಳಕು ಚೆಲ್ಲಿದ್ದರು.  ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಅವರ ಪಾತ್ರ ಅಪಾರವಾದುದು. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂಬುದನ್ನು ನಿರೂಪಿಸಿದ್ದರು.  ಈ ಮೂವರು ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಕುಟುಂಬಕ್ಕೆ ಅವರ ನಿಧನದ ನೋವು ಸಹಿಸುವ ಶಕ್ತಿ ದೊರೆಯಲಿ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಣಯ ಬೆಂಬಲಿಸಿ ಮಾತನಾಡಿ, ಮಾಜಿ ಸಚಿವ ಚೆನ್ನಿಗಪ್ಪ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ ಚತುರ್ವೇದಿ, ಸಂಶೋಧಕ ಷ.ಶೆಟ್ಟರ್ ಅವರು ನಮ್ಮನ್ನು ಅಗಲಿದ್ದಾರೆ. ಚೆನ್ನಿಗಪ್ಪ ಅವರು ಈ ಸದನಕ್ಕೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದರು. 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಬರುವುದಕ್ಕಿಂತ ಪೂರ್ವದಲ್ಲಿ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಪ್ರವೇಶಿಸಿದರು. ಕೊರಟಗೆರೆ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಬಂದಿದ್ದರು. ಅವರು ರೇಷ್ಮೆ, ಅರಣ್ಯ, ಅಬಕಾರಿ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದರು. ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅವರು ನಮ್ಮ ಒಳ್ಳೆಯ ಸ್ನೇಹಿತರಾಗಿದ್ದರು. ಅವರ ಪುತ್ರ ಗೌರಿಶಂಕರ್ ಕೂಡ ಈ ಸದನದ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಚೆನ್ನಿಗಪ್ಪ ಅವರ ಆರೋಗ್ಯ ಕೆಟ್ಟಿತ್ತು. ಶಿಕ್ಷಣ ಪ್ರೇಮಿ, ಸ್ನೇಹಜೀವಿಯಾಗಿದ್ದ ಅವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಹಾಗೂ ಅವರ ನಿಧನದ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಹೇಳಿದರು.

ಸುಧಾಕರ ಚತುರ್ವೇದಿ ಮಹಾತ್ಮ ಗಾಂಧಿಯವರ ಒಡನಾಡಿ, ಅನುಯಾಯಿಯಾಗಿದ್ದರು. 12 ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದರು. ಇಂತಹ ವ್ಯಕ್ತಿ ನಮ್ಮ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಇಂತಹವರನ್ನು ಗೌರವಿಸಿದಾಗ ಸ್ಮರಿಸಿದಾಗ ಅವರ ಆದರ್ಶಗಳನ್ನು ಪಾಲನೆ ಮಾಡಿದಾಗ ದೇಶಕ್ಕೆ ಕಿಂಚಿತ್ತು ಸಹಾಯ ಮಾಡಿದಂತಾಗುತ್ತದೆ. ಅಸ್ಪೃಶ್ಯತೆ ನಿವಾರಣೆಗೆ ಗಾಂಧಿ ಜೊತೆ ಕೆಲಸ ಮಾಡಿದ್ದರು. ಶತಾಯುಷಿಯಾಗಿದ್ದ ಅವರು ಸಮಾಜದ ಪರಿವರ್ತನೆಗೆ ಹೋರಾಟ ಮಾಡಿದ್ದರು. ನಾಲ್ಕು ವೇದಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದರು.

ಷ. ಶೆಟ್ಟರ್ ಹಿರಿಯ ಶಂಶೋಧಕರು, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ನಮ್ಮ ದೇಶ ಮಾತ್ರವಲ್ಲ ವಿದೇಶದಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿದ್ದರು. ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರ ನಿಧನದಿಂದ ಸಂಶೋಧನಾ ಕ್ಷೇತ್ರದಲ್ಲಿ ಶೂನ್ಯ ಆವರಿಸಿದೆ. ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದರು.

ಜೆಡಿಎಸ್‌ನ ಶ್ರೀನಿವಾಸ ಮೂರ್ತಿ ನಿರ್ಣಯದ ಮೇಲೆ ಮಾತನಾಡಿ, ಚೆನ್ನಿಗಪ್ಪ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.  ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಆಶೀರ್ವಾದದಿಂದ ಸಚಿವರಾಗಿ ಕೆಲಸ ಮಾಡಿದ್ದರು. 2018ರಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಸಿಂಗಾಪುರ ಆಸ್ಪತ್ರೆಯಲ್ಲಿ ಸತತವಾಗಿ ಚಿಕಿತ್ಸೆ ಪಡೆದಿದ್ದರು. ಅವರು ಎಲ್ಲಾ ಮಠಗಳಿಗೆ ಆಪ್ತರಾಗಿದ್ದರು. ತುಮಕೂರು ಸಿದ್ದಗಂಗಾ ಶಿವಕುಮಾರಸ್ವಾಮೀಜಿಯವರ ಪರಮಭಕ್ತರಾಗಿದ್ದ ಅವರು ಮಠದ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದರು. ನಮ್ಮ ತಾಲೂಕಿನಲ್ಲಿ ಬಡಮಕ್ಕಳಿಗೆ, ದೀನದಲಿತರಿಗೆ ಕಾಲೇಜಿನಲ್ಲಿ ಉಚಿತ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಿದ್ದರು. ಅವರ ಮನೆಯಲ್ಲಿ ವರ್ಷದ 365 ದಿನಗಳೂ 24 ಗಂಟೆ ದಾಸೋಹ ನಡೆಯುತ್ತಿತ್ತು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದರು.

ಕಾಂಗ್ರೆಸ್ ಸದಸ್ಯ ಡಾ.ಜಿ.ಪರಮೇಶ್ವರ್ ಮಾತನಾಡಿ, ಚನ್ನಿಗಪ್ಪ ಅವರು ತಮಗೆ ಆತ್ಮೀಯರಾಗಿದ್ದರು. ತಾವು ಪ್ರತಿನಿಧಿಸುತ್ತಿರುವ ಕೊರಟಗೆರೆ ಕ್ಷೇತ್ರದಿಂದ ಗೆದ್ದಿದ್ದ ಅವರು ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಹೊಂದಿ, ರಾಜಕೀಯ ಪ್ರವೇಶಿಸಿದ್ದ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸಿಂಗಾಪುರಕ್ಕೆ ಕರೆದೊಯ್ಯಲಾಯಿತು. ತಾವು ಅಲ್ಲಿಗೆ ಭೇಟಿ ನೀಡಿ ಅವರನ್ನು ನೋಡಿದ್ದೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.  ಅವರ ನಡವಳಿಕೆ, ಅವರು ಜನರ ಮೇಲೆ ಇಟ್ಟ ಪ್ರೀತಿ ಅಪಾರವಾದುದು. ಅವರ ಮನೆ ಒಂದು ಛತ್ರದಂತಿತ್ತು. ಅವರ ಮನೆಗೆ ಬರುತ್ತಿದ್ದವರಿಗೆ ದಾಸೋಹ ಕೊಟ್ಟ ಹೋಗುವಾಗ ಬಸ್‌ ಟಿಕೆಟ್‌ ನೀಡಿ ಕಳುಹಿಸುತ್ತಿದ್ದರು. ಅವರ ನಿಧನ ನೋವು ತಂದಿದೆ ಎಂದು ಹೇಳಿದರು.

ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದಾರೆ. ಅವರ ಪೈಕಿ ಸುಧಾಕರ್ ಚತುರ್ವೇದಿ ಅವರು ಕೂಡ ಒಬ್ಬರಾಗಿದ್ದರು. ಆದರ ಅವರು ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. 12 ವರ್ಷ ಸೆರೆವಾಸೆ ಅನುಭವಿಸಿದ್ದ ಅವರು, ಪಾಕಿಸ್ತಾನ ಲಾಹೋರ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ. ಯಂಗ್ ಇಂಡಿಯಾ ಪತ್ರಿಕೆಯ ವರದಿಗಾರನಾಗಿ, ಜಲಿಯನ್‌ವಾಲಾ ಬಾಗ್ ಘಟನೆ ನಡೆದಾಗ ಪ್ರತ್ಯಕ್ಷದರ್ಶಿಯಾಗಿ ವರದಿ ಮಾಡಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅವರಿಗೆ ಇದ್ದ ಕಳಕಳಿ ಅಪಾರವಾಗಿತ್ತು. ಅಸೃಶ್ಯ ನಿರ್ಮೂಲನೆಗೂ ಅವರು ಪ್ರಯತ್ನಿಸಿದ್ದರು ಎಂದು ಸ್ಮರಿಸಿದರು.

ಸಚಿವ ಜೆ.ಸಿ. ಮಾಧುಸ್ವಾಮಿ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ, ಚನ್ನಿಗಪ್ಪ ಅವರು ಮಂತ್ರಿಯಾಗಿ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿದ್ದಗಂಗಾ ಮಠದ ವಿದ್ಯಾರ್ಥಿಯಾಗಿದ್ದ ಅವರು ಮೊದಲು ಶಿಕ್ಷಕರಾಗಿ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ರಾಜಕೀಯಕ್ಕೆ ಬಂದಿದ್ದರು. ಸಿದ್ದಗಂಗಾ ಸ್ವಾಮೀಜಿಯವರಿಂದ ಪ್ರೇರಣೆ ಪಡೆದು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ, ಆ ಭಾಗದ ಜನರಿಗೆ ಉಚಿತವಾದ ಶಿಕ್ಷಣ, ಊಟ ಕೊಟ್ಟು, ಜಿಲ್ಲೆಯನ್ನು ಜವಾಬ್ದಾರಿಯುತವಾಗಿ ಪ್ರತಿನಿಧಿಸಿದ್ದರು ಎಂದು ಸ್ಮರಿಸಿದರು. ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಡಾ.ಅನ್ನದಾನಿ ಕೂಡ ಮೃತದ ಗುಣಗಾಣ ಮಾಡಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com