ಪ್ರವಾಹ ಪರಿಸ್ಥಿತಿ, ಪುನರ್ವಸತಿ ಸಮರ್ಪಕ ನಿರ್ವಹಣೆ: ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸುದೀರ್ಘ ಉತ್ತರ

ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಸರ್ಕಾರ ನಿಭಾಯಿಸಿ ಪುನರ್‌ ವಸತಿ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸುದೀರ್ಘ ಉತ್ತರ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸುದೀರ್ಘ ಉತ್ತರ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಸರ್ಕಾರ ನಿಭಾಯಿಸಿ ಪುನರ್‌ ವಸತಿ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು,  ಸದನದ ಅವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯ ನಮ್ಮ ಸರ್ಕಾರಕ್ಕೆ ಮತ್ತು ಜನತೆಗೆ ಮಹದಾಯಿ ತೀರ್ಪನ್ನು ಅಧಿಸೂಚನೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ್ದು, ನಮಗೆ ಮಹದಾಯಿ ನೀರಿನ ಹಂಚಿಕೆ ವಿಷಯದಲ್ಲಿ ದೊಡ್ಡ ಗೆಲುವಾಗಿದೆ. ಈ ಆದೇಶಗನುಗುಣವಾಗಿ ನಮ್ಮ ಮಾರ್ಚ್ ಆಯವ್ಯಯದಲ್ಲಿ ತ್ವರಿಗತಿಯಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಹಣ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ನಮ್ಮ ಸರ್ಕಾರ ಅಧಿಕಾರ ಸ್ವೀಕರಿಸಿದಾಗ ರಾಜ್ಯದಲ್ಲಿ ತೀವ್ರ ಬರದ ಛಾಯೆ ಇತ್ತು. ಆದರೆ ಅದಾಗಿ ಒಂದೇ ವಾರದೊಳಗೆ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅಂದು ಜನರ ರಕ್ಷಣೆ ಮತ್ತು ಸ್ಥಳಾಂತರವನ್ನೂ ಸಮರ್ಥವಾಗಿ ನಿರ್ವಹಿಸಿದ್ದೇವೆ. ನಂತರ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯವನ್ನು ಸಹ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯಪಾಲದ ಬಾಷಣದ ಮೇಲೆ ಮಾತನಾಡುವಾಗ ರಾಜಕೀಯ ಮಾತನಾಡುವುದು ನನಗೆ ಇಷ್ಟವಿಲ್ಲ. ಆದರೆ ಸಿದ್ದರಾಮಯ್ಯನವರು ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ ಅದಕ್ಕೆ ಉತ್ತರ ಕೊಡಲೇಬೇಕು. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳೇ ಮುಖ್ಯ. ಈ ಸಂಖ್ಯೆ ಮೇಲಾಟದಲ್ಲಿ ನಮ್ಮ ಪಕ್ಷ ಗೆದ್ದಿದೆ. ಉಪ ಚುನಾವಣೆಯಲ್ಲಿ 15ರಲ್ಲಿ 12 ಸ್ಥಾನಗಳನ್ನು ಗೆದ್ದು ಜನರ ಬೆಂಬಲ ನಮ್ಮ ಪಕ್ಷಕ್ಕೆ ಇದೆ ಎಂದು ಸಾಬೀತು ಮಾಡಿದ್ದೇವೆ. ಈ 12 ಸ್ಥಾನಗಳಲ್ಲಿನ ಗೆಲುವು ನಮ್ಮ ಸರ್ಕಾರದ ಮತ್ತು ಪಕ್ಷದ ನೈತಿಕ ಗೆಲುವಾಗಿದೆ. ರಾಜ್ಯದ ಜನತೆ ಸಂಪೂರ್ಣವಾಗಿ ನಮ್ಮ ಜೊತೆ ಇದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದು ಸ್ಥಾನ. ನಾವು 26 ಸ್ಥಾನ ಗೆದ್ದಿದ್ದೇವೆ. ನಿಮ್ಮ ಟೀಕೆ ಜನರ ಅಭಿಮತವನ್ನು ಅಪಹಾಸ್ಯ ಮಾಡಿದಂತಾಗುತ್ತದೆ. ಇದರಿಂದ ಜನ ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಆದುದರಿಂದ ನನಗೆ ನಿಮ್ಮ ಬಗ್ಗೆ ಕಾಳಜಿಯಿಂದ ಈ ಸಲಹೆ ನೀಡುತ್ತಿದ್ದೇನೆ ಎಂದರು.

117  ವರ್ಷಗಳಲ್ಲಿ ಇಂತಹ ಪ್ರವಾಹ ಬಂದಿರಲಿಲ್ಲ, ಹಿಂದೆಂದೂ ಕಾಣದ ಅತಿವೃಷ್ಟಿ ನಮ್ಮ ಸರ್ಕಾರಕ್ಕೆ ಒಂದು ಅಗ್ನಿ ಪರೀಕ್ಷೆ ಆಗಿತ್ತು. ಮೊದಲಿಗೆ ನಾನೊಬ್ಬನೇ ಸರ್ಕಾರದಲ್ಲಿ ಇದ್ದರೂ ಬಿಟ್ಟು ಬಿಡದೆ ಪ್ರವಾಹದಿಂದ  ತತ್ತರಿಸಿದ ಎಲ್ಲಾ ಜಿಲ್ಲೆಗಳಲ್ಲಿ ಹಗಲು ಇರುಳು ಪ್ರವಾಸ ಮಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಈ ಬೃಹತ್ ಕಾರ್ಯದಲ್ಲಿ ನಮ್ಮ ಅಧಿಕಾರಿಗಳು ನನ್ನ ಜೊತೆಗೂಡಿ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಅವರಿಗೆ ಪರಿಹಾರ ಒದಗಿಸುವಲ್ಲಿ ಯಶಸ್ಸು ಕಂಡಿದ್ದೇವೆ ಎಂದರು. ಪ್ರವಾಹವಾದಾಗ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಧಿಕಾರಿಗಳ ತಂಡ ಬಂದು ನೆರೆ ಸಂತ್ರಸ್ತರ ಭಾಗಕ್ಕೆ ಭೇಟಿ ಕೊಟ್ಟರೂ ನರೇಂದ್ರ ಮೋದಿ ಬರಲಿಲ್ಲ ಎಂಬುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಪ್ರವಾಹದಿಂದಾಗಿ 35,160,81 ಕೋಟಿ ರೂ.ನಷ್ಟು ಅಂದಾಜು ಹಾನಿಯಾಗಿದ್ದು, ಪ್ರವಾಹ ಪರಿಹಾರಕ್ಕೆ ನಿಗದಿತ ಮಾರ್ಗಸೂಚಿಯಂತೆ 3891.80 ಕೋಟಿ ರೂ.ಆರ್ಥಿಕ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಎನ್‌ಡಿಆರ್‌ಎಫ್‌ ಅಡಿ ಕೇಂದ್ರ ಸರ್ಕಾರವು 1869.85 ಕೋಟಿ ರೂ.ಬಿಡುಗಡೆ ಮಾಡಿದೆ. ಇನ್ನೂ ಪರಿಹಾರ ಬರುವ ನಿರೀಕ್ಷೆ ಇದೆ ಎಂದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಾಥಮಿಕ ವರದಿಯಂತೆ 2.47 ಲಕ್ಷ ಮನೆ ಹಾನಿ ಎಂದು ಅಂದಾಜಿಸಿದ್ದು, ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ತಯಾರಿಸಲಾದ ಜಿಪಿಎಸ್‌ ತಂತ್ರಾಂಶದ ವತಿಯಿಂದ ಜಿಯೋಟ್ಯಾಗಿಂಗ್ ಮೂಲಕ ಸಂಗ್ರಹಿಸಲಾದ ಮಾಹಿತಿಯಂತೆ 1,25,795 ಮನೆ ಹಾನಿ ಆಗಿವೆ. 2009ರಲ್ಲಿ ಅತಿವೃಷ್ಟಿ ಒಳಗಾದಾಗ ಪುನರ್ ವಸತಿ ಕೇಂದ್ರ ಮಾಡಿ ನವ ನಗರಗಳನ್ನು ಕೂಡ ನಿರ್ಮಾಣ ಮಾಡಿದ್ದೆ. ಶಾಶ್ವತ ಪರಿಹಾರವೆಂದು ಮುಳುಗಡೆಯಾದ ಹಳ್ಳಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದ್ದು, ಹೊಸ ಕಾಲೋನಿಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗುತ್ತದೆ. ತೋಟದ ಮನೆ ಹಾನಿ ಪ್ರಕರಣಗಳಿಗೂ ಸಹ ಪರಿಹಾರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅಡಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಆಯಾ ಇಲಾಖೆಗಳ ಮೂಲಕ ಈ ವರೆಗೆ ಪರಿಹಾರ ಕಾರ್ಯಗಳಿಗೆ ಒಟ್ಟು 4413 ಕೋಟಿ ರೂ.ಬಿಡುಗಡೆ ಮಾಡಿದ್ದು, 3338 ಕೋಟಿ ರೂ.ವೆಚ್ಚವಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಮೊದಲ ಬಾರಿಗೆ ದೇಶದ ಇತಿಹಾಸದಲ್ಲೇ ನಮ್ಮ ಸರ್ಕಾರ ಮನೆ ಕಳೆದುಕೊಂಡವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ನಾವು 5 ಲಕ್ಷ ರೂ.ಪರಿಹಾರ ಘೋಷಿಸಿದ್ದೇವೆ. ಆದರೆ ಮನೆ ಕಳೆದುಕೊಂಡವರಿಗೆ 98 ಸಾವಿರ ಪರಿಹಾರ ಕೊಡಲು ಮಾತ್ರ ಅವಕಾಶವಿತ್ತು. ಆದರೆ ನಾವು 5 ಲಕ್ಷ ರೂ. ನೀಡಿದ್ದೇವೆ. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಮನೆಕಳೆದುಕೊಂಡವರಿಗೆ 1 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದೇವೆ. ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದೆ. ಐದು ಲಕ್ಷ ರೂಪಾಯಿಯಲ್ಲಿ ಒಂದು ಒಳ್ಳೆಯ ಮನೆಯನ್ನು ಕಟ್ಟಿಕೊಳ್ಳಬಹುದು. 2ನೇ ಕಂತು ಒಂದು ಲಕ್ಷ ಬಿಡುಗಡೆ ಮಾಡಲು ಪ್ರಾರಂಭಿಸಿದ್ದೇವೆ ಎಂದು ಯಡಿಯೂರಪ್ಪ ವಿವರಿಸಿದರು.

ಭಾಗಶಃ ಮನೆ ಕಳೆದುಕೊಂಡವರಿಗೆ ಕೂಡ 1 ಲಕ್ಷ ರೂ.ಕೊಡಲಾಗಿದೆ. ಮಳೆಯಿಂದ ಹಾನಿಗೊಳಗಾದ ಅಂಗಡಿ ಮುಂಗಟ್ಟುಗಳಿಗೆ 25 ಸಾವರಿ, ಮಗ್ಗ ಕಳೆದುಕೊಂಡವರಿಗೆ 50 ಸಾವಿರ ಪರಿಹಾರ ನೀಡಲಾಗಿದೆ. ರೈತರಿಗೆ ಕೂಡ ಬೆಳೆ ಪರಿಹಾರ ಕೇಂದ್ರ ಸರ್ಕಾರದಿಂದ ಒಣ ಬೇಸಾಯದಲ್ಲಿ ಪ್ರತಿ ಹೆಕ್ಟೇರ್‌ಗೆ 6500 ರೂ. ನೀರಾವರಿ ಬೆಳೆಗಳಿಗೆ 13,200 ರೂ. ಹಾಗೂ ತೋಟಗಾರಿಕೆ ಬೆಳೆಗಳಿಗೆ 18,500 ರೂ. ಹಾಗೂ 28000 ರೂ. ಘೋಷಿಸಲಾಗಿದೆ. ದೇಶದ ಇತಿಹಾಸದಲ್ಲೇ ಬೇರೆಲ್ಲೂ ಈ ರೀತಿಯ ಪರಿಹಾರ ನೀಡಿದ ಉದಾಹರಣೆ ಇಲ್ಲ.ಇವೆಲ್ಲವುಗಳ ಜೊತೆಗೆ ತಾತ್ಕಾಲಿಕವಾಗಿ ಮನೆ ಕಳೆದುಕೊಂಡವರಿಗೆ ಪಾತ್ರೆ, ಪಗಡೆ ತೆಗೆದುಕೊಳ್ಳಲು 10,000 ರೂ., ಬಾಡಿಗೆ ಪಾವತಿಸಲು 10000 ರೂ. ಕೊಡಲಾಗಿದೆ. ಹಾನಿ ಸಮುದ್ರದಷ್ಟಾದರೂ ಜನರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಒದಗಿಸುವಲ್ಲಿ ನಮ್ಮ ಸರ್ಕಾರ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು. 

ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 4 ಸಾವಿರ ರೂ.ಗಳನ್ನು ನೀಡುತ್ತಿದೆ. 41 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಮೊದಲ ಕಂತಿನ 2000 ನೆರವನ್ನು  ವರ್ಗಾವಣೆ ಮಾಡಲಾಗಿದೆ, ರಾಜ್ಯದ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು ಸುಸ್ತಿಯಾಗಿರುವ ಮಧ್ಯಮ ಅವಧಿ, ದೀರ್ಘ ಅವಧಿ ಕೃಷಿ ಮತ್ತು ಕೃಷಿ ಸಲಕರೆಣೆಗಳ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಈ ಯೋಜನೆಯಿಂದ 92,525 ರೈತರಿಗೆ 466 ಕೋಟಿ ರೂ.ಲಾಭವಾಗಲಿದೆ. ಇದಲ್ಲದೆ ಪ್ರಧಾನಮಂತ್ರಿ ಕಿಸಾನ್ ಭೀಮಾ ಯೋಜನೆಯಡಿ 2019-20ನೆ ಸಾಲಿನಲ್ಲಿ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ. ಈ ಯೋಜನೆ ಅನುಷ್ಠಾನವಾದಾಗಿನಿಂದ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ರೈತರಿಗೆ ನೆರವಾಗಿದೆ. ಇದರೊಂದಿಗೆ ರೈತರಿಗೆ ಸಿರಿಧಾನ್ಯ ಬೆಳೆಗೆ ಭತ್ತ ಬೆಳೆಯಲು ಪ್ರೋತ್ಸಾಹ ಧನ ನೀಡಲಾಗಿದೆ. ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ , ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆ ಸೌಲಭ್ಯ ಮೊದಲಾದವುಗಳಿಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದ ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಕೃಷಿ ಮತ್ತು ನೀರಾವರಿ ವಲಯಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡಲಾಗುವುದು. ಕೃಷಿ ವಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೋಷಿಸಲಾಗಿರುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೃಷಿಗೆ 2.83 ಲಕ್ಷ ಕೋಟಿ ಮೀಸಲಿಟ್ಟು, ಇತಿಹಾಸ ಮೆರೆದಿದೆ. ಆಯವ್ಯಯದ ಶೇ.9.5ರಷ್ಟು ಹಣವನ್ನು ಕೃಷಿಗೆ ಮೀಸಲಿಡಲಾಗಿದೆ. ಇದರೊಂದಿಗೆ 20 ಲಕ್ಷ ಸೌರ ಐಪಿ ಸೆಟ್‌ಗಳನ್ನು ಘೋಷಣೆ ಮಾಡಲಾಗಿದೆ. ನೂರು ಜಿಲ್ಲೆಗಳಲ್ಲಿ ನೀರಿನ ಕ್ಷಾಮ ಅನುಭವಿಸುತ್ತಿರುವ ಕಡೆ ಅಭಿವೃದ್ಧಿಗೆ ಹಣ ಕೊಡುವುದಾಗಿ ಕೇಂದ್ರ ಸರ್ಕಾರ ತನ್ನ ಆಯವ್ಯಯದಲ್ಲಿ ಹೇಳಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ 23 ಸಾವಿರಕ್ಕೂ ಹೆಚ್ಚು ಮೀನುಗಾರರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್‌ ಸೌಲಭ್ಯವನ್ನು ಮೀನುಗಾರರಿಗೂ ವಿಸ್ತರಿಸಿದೆ. ರಾಜ್ಯದ ಸುಮಾರು 25 ಸಾವಿರ ಮೀನುಗಾರರಿಗೆ ಈ ಸೌಲಭ್ಯ ದೊರೆಯಲಿದ್ದು, ಈಗಾಗಲೇ 24 ಸಾವಿರ ರೈತರ ವಿವರಗಳನ್ನು ಬ್ಯಾಂಕುಗಳಿಗೆ ಒದಗಿಸಲಾಗಿದೆ ಎಂದರು. ನಮ್ಮ ಸರ್ಕಾರ ಹಾನಿಗೊಳಗಾದ 330 ದೋಣಿಗಳಿಗೆ ತಲಾ 20 ಸಾವಿರ ರೂ.ಗಳಂತೆ ಹಾಗೂ ಹಾನಿಗೊಳಗಾದ 662 ಬಲೆಗಳಿಗೆ ತಲಾ 10 ಸಾವಿರ ರೂ.ಯಂತೆ ಒಟ್ಟು 1.52 ಕೋಟಿ ರೂ. ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ನೇಕಾರರ ಉದ್ದೇಶಕ್ಕಾಗಿ ವಿವಿಧ ಸಹಕಾರ ಬ್ಯಾಂಕುಗಳಿಂದ ಮತ್ತು ಸಹಕಾರ ಸಂಘಗಳಿಂದ ಸಾಲ ಪಡೆದು 2019, ಮಾರ್ಚ್ 31ಕ್ಕೆ ಹೊಂದಿರುವವರ ಬಾಕಿ ರೂ. 1 ಲಕ್ಷರವರೆಗೆ ಅಸಲು ಮತ್ತು ಬಡ್ಡಿ ಸೇರಿಸಿ ಸಾಲ ಮನ್ನಾಮಾಡಲಾಗಿದೆ ಎಂದು ಹೇಳಿದರು.

ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರ ತರಬೇತಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಮುಂತಾದ ಉಪಕ್ರಮಗಳೊಂದಿಗೆ ಶಾಲಾ ಮಕ್ಕಳಿಗೆ ಹಿತರಕರವಾದ ವಾತಾವರಣ ಸೃಷ್ಟಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಶಾಲೆಗಳು, ಕೊಠಡಿಗಳು, ಶೌಚಾಲಯ ಮತ್ತಿತರ ಮೂಲಸೌಕರ್ಯ ಒದಗಿಸಲು ಒಟ್ಟು 141.81 ಕೋಟಿ ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಲೋಕೋಪಯೋಗಿ ಇಲಾಖೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆರೆಗಳ ದುರಸ್ತಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 449.58 ಕೋಟಿ ರೂ. ಬಿಡುಗಡೆಯಾಗಿದೆ. ಗ್ರಾಮೀಣ ಪ್ರದೇಶಗಳ ರಸ್ತೆ ದುರಸ್ತಿಗಾಗಿ 447.42 ಕೋಟಿ ರೂ.ಹಾಗೂ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಕೆಲಸಗಳ ದುರಸ್ತಿಗಾಗಿ 48.55 ಕೋಟಿ ರೂ. ಮೊತ್ತದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬಿಡಗುಡೆ ಮಾಡಲಾಗಿದೆ. ವಿದ್ಯುತ್ ಉಪಕರಣಗಳ ದುರಸ್ತಿಗಾಗಿ 201.12 ಕೋಟಿ ರೂ. ಅನುದಾನ ಸೇರಿ ಒಟ್ಟು ಈ ಎಲ್ಲಾ ಕಾರ್ಯಕ್ರಮಗಳಿಗಾಗಿ ಒಟ್ಟು 2146.66 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಹಾನಿಗೊಳಗಾದ ಮೂಲಭೂತ ಸೌಲಭ್ಯಗಳನ್ನು ದುರಸ್ತಿಪಡಿಸಲಾಗಿದೆ. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಔದ್ಯೋಗಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಕುಂಠಿತಗೊಂಡಿದೆ. ಆದರೆ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಯಡಿಯೂರಪ್ಪ ಹೇಳಿದರು.

ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಆದರೆ ನಮ್ಮ ಸರ್ಕಾರದ ನಿಲುವು ಗಟ್ಟಿಯಾಗಿದ್ದು, ಮಹಾಜನ್ ವರದಿ ಅಂತಿಮ. ಯಾವುದೇ ಕಾರಣಕ್ಕೂ ನಮ್ಮ ಒಂದಿಂಚು ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾಗರಿಕ ಮನೆ ಬಾಗಿಲಿಗೆ ಸರ್ಕಾರಿ ಸೇವೆಯನ್ನು ತಲುಪಿಸಿ ಅವರ ಜೀವನವನ್ನು ಸುಗಮಗೊಳಿಸಲು ಜನಸೇವಕ್ ಎಂಬ ಯೋಜನೆಯನ್ನು ಟಿ.ದಾಸರಹಳ್ಳಿ ಕ್ಷೇತ್ರದಲ್ಲಿ ಪ್ರಾರಂಭಿಸಲಾಗಿದ್ದು, ಇದನ್ನು ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಕ್ಷೇತ್ರಗಳಿಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು. ದಾವೋಸ್ ಭೇಟಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರು ಸಾಲು ಸಾಲಾಗಿ ಬರಲಿದ್ದಾರೆ. ಹುಬ್ಬಳ್ಳಿ ಬಂಡವಾಳಹೂಡಿಕೆ ಸಮಾವೇಶದಲ್ಲಿ ರಾಜ್ಯಕ್ಕೆ 70 ಸಾವಿರ ಕೋಟಿ ರೂ. ಬಂಡವಾಳ ಬರಲಿದೆ ಎಂದು ಹೇಳಿದರು. ಕೆಲವು ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದಿದ್ದಾರೆ ಎಂಬ ನಿಲುವು ತಳೆದಿದ್ದಾರೆ. ಆದರೆ ಹಣಕಾಸಿನ ಶಿಸ್ತನ್ನು ಪಾಲಿಸಲು ಈ ರೀತಿಯ ಕಾರ್ಯ ಅನಿವಾರ್ಯವಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ತಡೆ ಹಿಡಿದ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಯಡಿಯೂರಪ್ಪ ತಮ್ಮ ಉತ್ತರದಲ್ಲಿ ಭರವಸೆ ನೀಡಿದ್ದಾರೆ. ಬೆಳಗಾವಿ ಸುವರ್ಣ ಸೌಧಕ್ಕೆ ಪ್ರಮುಖ ಐದರಿಂದ ಆರು ಇಲಾಖೆಗಳನ್ನು ಸ್ಥಳಾಂತರ  ಮಾಡಲಾಗುವುದು ಎಂದು ಮುಖ್ಯಮಂತ್ರಿ ಇದೇ ವೇಳೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com