ಬೆಂಗಳೂರಿನಲ್ಲಿ ನ್ಯಾನೋ ಪಾರ್ಕ್ ನಿರ್ಮಾಣಕ್ಕೆ  ಭೂಮಿ ಅಂತಿಮ: ರಾಜ್ಯಸರ್ಕಾರದಿಂದ ಸಂಪೂರ್ಣ ಬೆಂಬಲ-ಯಡಿಯೂರಪ್ಪ 

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಸಾಮಾನ್ಯ ಸೌಕರ್ಯದೊಂದಿಗೆ ಬೆಂಗಳೂರಿನಲ್ಲಿ ನ್ಯಾನೋ ಪಾರ್ಕ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಸಾಮಾನ್ಯ ಸೌಕರ್ಯದೊಂದಿಗೆ ಬೆಂಗಳೂರಿನಲ್ಲಿ ನ್ಯಾನೋ ಪಾರ್ಕ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ನವೋದ್ಯಮಗಳಿಗೆ ಕೌಶಲ್ಯ ಭರಿತ ಹಾಗೂ ಕೌಶಲ್ಯರಹಿತ ಮಾನವ ಸಂಪನ್ಮೂಲಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿಂದು ೧೧ನೇ ನ್ಯಾನೋ ತಂತ್ರಜ್ಞಾನ ಸಮಾವೇಶ ಉದ್ಘಾಟಿಸಿ,  ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದವರಿಗೆ ಪ್ರೊ.ಸಿ.ಎನ್.ಆರ್. ರಾವ್, ಇಂಡಿಯಾ ನ್ಯಾನೋ ವಿಜ್ಞಾನ ಪ್ರಶಸ್ತಿಯನ್ನು ಎಸ್.ಆರ್.ಪಿ.ಎಸ್. ಅನಿಲ್ ಕುಮಾರ್ ಅವರಿಗೆ ನೀಡಿ ಗೌರವಿಸಿ ಮಾತನಾಡಿದ ಮುಖ್ಯಮಂತ್ರಿ,  ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು, ನ್ಯಾನೋ ತಂತ್ರಜ್ಞಾನ ಬೆಳವಣಿಗೆ ಕೌಶಲ್ಯ ಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಗಳ ನಡುವಿನ ವ್ಯವಹಾರಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಆಯೋಗವೊಂದನ್ನು ಸ್ಛಾಪಿಸಲಾಗುವುದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಭೂಮಿ ನೀಡಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ  ನ್ಯಾನೋ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್, ಸಹಭಾಗಿ ವ್ಯಾಪ್ತಿಯ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ನ್ಯಾನೊ ಕೇಂದ್ರ ಮತ್ತು ಸಾಪ್ಟ್ ಮ್ಯಾಟರ್ ಸೈನ್ಸ್ ಗಾಗಿ ದೇವನಹಳ್ಳಿ ಬಳಿ 15 ಎಕರೆ ಭೂಮಿ ಲಭ್ಯವಿದೆ. ಅದನ್ನು ಅಭಿವೃದ್ಧಿಪಡಿಸಲಾಗುವುದು, ಕಾವು ಕೇಂದ್ರ ಮತ್ತು ಸಾಮಾನ್ಯ ಸಲಕರಣೆ ಸೌಲಭ್ಯವನ್ನು ಒದಗಿಸಲಾಗುವುದು ನಂತರ ಬೆಂಗಳೂರು ಬಯೋಟೆಕ್ನಾಲಜಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ವಿಜ್ಞಾನಿಗಳು, ತಜ್ಞರು ಹಾಗೂ ಕೈಗಾರಿಕೋದ್ಯಮಗಳೊಂದಿಗೆ ಸಂವಾದ ಮತ್ತು ಅಭಿವೃದ್ಧಿಗಾಗಿ ನೀತಿಯೊಂದನ್ನು ರೂಪಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಅದು ಹೊರಗೆ ಬರಲಿದೆ. ಉತ್ತಮ ಐಟಿ ನೀತಿಯನ್ನು ತರಲು ಸರ್ಕಾರ ಪ್ರಯತ್ನ ನಡೆಸುತ್ತಿರುವುದಾಗಿ ಅವರು ತಿಳಿಸಿದರು.2013ರಲ್ಲಿ 100 ಕೋಟಿ ವೆಚ್ಚದಲ್ಲಿ ನ್ಯಾನೋ ಪಾರ್ಕ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು.

ಸಂಶೋಧನೆ- ಅಭಿವೃದ್ಧಿ ಹಾಗೂ  ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ದಿಮೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹೊಸ ನೀತಿ ತರಲಾಗುವುದು.ಹಿರಿಯ ವಿಜ್ಞಾನಿ, ಭಾರತ ರತ್ನ ಸಿಎನ್ ಆರ್ ರಾವ್ ಅವರ ಮಾರ್ಗದರ್ಶದಲ್ಲಿ ಹೊಸ ಅನ್ವೇಷಣೆಗಳಿಗೆ ಒತ್ತು ನೀಡುವಂತಹ ವಿಜ್ಞಾನ ತಂತ್ರಜ್ಞಾನದ ಹೊಸ ನೀತಿ ತರಲಾಗುವುದು. ಈ ಕ್ಷೇತ್ರದ ಬೆಳವಣಿಗೆ ಹಾಗೂ  ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಿರುವ ನಮ್ಮ ಸರ್ಕಾರ, ವಿಜ್ಞಾನಿಗಳು ಸಂಶೋಧಕರಿಗೆ ಹೆಚ್ಚಿನ ಮನ್ನಣೆ ಗೌರವ ಕೊಡುತ್ತದೆ.  ನಮ್ಮ ದೇಶದ ಭವಿಷ್ಯ ಬದಲಿಸುವ ಸಾಮರ್ಥ್ಯ ಇರುವ ಸಂಶೋಧಕರಿಗೆ ಸರ್ಕಾರದ ಬೆಂಬಲ ಪ್ರೋತ್ಸಾಹ ಸದಾ ಇರುತ್ತದೆ ಎಂದರು.

ವಿಶ್ವಾದ್ಯಂತ ನಡೆಯುತ್ತಿರುವ ಸಂಶೋಧನೆಗಳ ಮಾಹಿತಿ ವಿನಿಮಯ ಆಗಬೇಕು.  ಇದೇ ಕಾರಣಕ್ಕೆ  'ಬೆಂಗಳೂರು ಇಂಡಿಯಾ ನ್ಯೊನೊ' ಸಮಾವೇಶ ನಡೆಯುತ್ತಿದೆ.  ಇಂಥ ಎಲ್ಲ ತಾಂತ್ರಿಕ ಮಾಹಿತಿಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಇದು ಸೂಕ್ತ ವೇದಿಕೆ.  ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ನ್ಯಾನೊ ಮಾಡಿರುವ ಸಾಧನೆಗಳು ಗಮನಾರ್ಹ. ಈ ಸಮಾವೇಶದ ಮಹತ್ವವನ್ನು ಅರಿತೇ ರಾಜ್ಯ ಸರ್ಕಾರ ಈ ಸಮಾವೇಶಕ್ಕೆ  ಹೆಚ್ಚಿನ ಆದ್ಯತೆ ನೀಡುತ್ತಿದೆ  ಎಂದರು.

ಸ್ಟಾರ್ಟ್ ಆಫ್ , ಕೊ ವರ್ಕೀಂಗ್, ಸ್ಪೇಸ್, ಇನ್ ಕ್ಯುಬೇಟರ್ ಸೆಂಟರ್ ಗಳಿಗೆ ಹೆಸರಾಗಿರುವ ಬೆಂಗಳೂರು ನ್ಯಾನೋ ಕೇಂದ್ರವಾಗಿಯೂ ಹೆಸರು ಮಾಡಬೇಕು. ಈ ನಿಟ್ಟಿನಲ್ಲಿ ನ್ಯಾನೋ ಪಾರ್ಕ್ ನಿರ್ಮಿಸುವ ಸಂಬಂಧ ಸಿಎನ್ ಆರ್ ರಾವ್ ಜೊತೆಗೆ ಮಾತುಕತೆ ನಡೆದಿದೆ ಎಂದು ತಿಳಿಸಿದರು.

ನೀತಿ ಆಯೋಗ ಬಿಡುಗಡೆ ಮಾಡಿರುವ ಹೊಸ ಆವಿಷ್ಕಾರ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ನ್ಯಾನೊ ಸಂಶೋಧನಾ ಕೇಂದ್ರಗಳು ಬೆಂಗಳೂರಲ್ಲಿ ತಲೆ ಎತ್ತುವ ಮೂಲಕ ಇತರ ಉದ್ದಿಮಗಳಿಗೆ ಬಲ ತುಂಬಬೇಕು. ಜನರ ಜೀವನ ಮಟ್ಟ ಸುಧಾರಣೆ ಹಾಗೂ ಆರ್ಥಿಕತೆ ಸುಧಾರಣೆಗೂ ಈ ತಂತ್ರಜ್ಞಾನ ದೊಡ್ಡ ಕೊಡುಗೆ ನೀಡಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಸಿ.ಎನ್.ಆರ್. ರಾವ್ ಮಾತನಾಡಿ ನ್ಯಾನೋ ತಂತ್ರಜ್ಞಾನ ಭವಿಷ್ಯದ ತಂತ್ರಜ್ಞಾನವಾಗಲಿದೆ. ಸಣ್ಣ ಅಣುವಿನಂತಿರುವ ಈ ತಂತ್ರಜ್ಞಾನ ಜಾಗತಿಕವಾಗಿ ದೊಡ್ಡಪ್ರಮಾಣದಲ್ಲಿ ಪಸರಿಸಲಿದೆ ಎಂದು ಹೇಳಿದರು.

ಕೃಷಿ, ವೈದ್ಯಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ  ಆಧರಿಸಿ, ರೂಪುಗೊಂಡಿರುವ ಔಷಧಿಗಳು ಕ್ಯಾನ್ಸರ್, ಅಲ್ಜೀಮರೋ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವುದು. ಈ ತಂತ್ರಜ್ಞಾನ ಪರಿಣಾಮ ಆಗಾಧವಾಗಿದ್ದು, ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರಾಜ್ಯ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com