ರಾಜ್ಯ ಬಜೆಟ್: ಆರ್ಥಿಕ ಕೊರತೆ ನಡುವಲ್ಲೂ ರಾಜ್ಯದ ಸಂಪೂರ್ಣ ಅಭಿವೃದ್ಧಿಯತ್ತ ಸಿಎಂ ಚಿತ್ತ

ರಾಜ್ಯ ಬಜೆಟ್ ಮಂಡನೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿಯಿದ್ದು, ಕೈಗಾರಿಕಿಯಿಂದ ಕೃಷಿಯವರೆಗೂ ಎಲ್ಲಾ ವಲಯಗಳೂ ಸೇರಿದಂತೆ ರಾಜ್ಯದ ಸಂಪೂರ್ಣ ಅಭಿವೃದ್ಧಿಯತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಮನ ಹರಿಸಿದ್ದಾರೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿಯಿದ್ದು, ಕೈಗಾರಿಕಿಯಿಂದ ಕೃಷಿಯವರೆಗೂ ಎಲ್ಲಾ ವಲಯಗಳೂ ಸೇರಿದಂತೆ ರಾಜ್ಯದ ಸಂಪೂರ್ಣ ಅಭಿವೃದ್ಧಿಯತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಮನ ಹರಿಸಿದ್ದಾರೆ. 

ಮಾಧ್ಯಮ ಮುಖ್ಯಸ್ಥರೊಂದಿಗಿನ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಈಗಿರುವ ಬಜೆಟ್ ಗಾತ್ರ ಕಡಿಮೆಯಾಗುವುದಿಲ್ಲ. ರಾಜ್ಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇದೆ. ಹೀಗಾಗಿ ಬಜೆಟ್ ಗಾತ್ರ ಕಡಿಮೆಗೊಳಿಸಲಾಗುತ್ತದೆ ಎನ್ನುವುದರಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೆ, ಈ ಬಾರಿ ಹಿಂದಿನ ಬಿಜೆಪಿ ಸರ್ಕಾರದಂತೆ ಮಠ-ಮಾನ್ಯಗಳಿಗೆ ವಿಸೇಷ ಅನುದಾನ ನೀಡದಿರಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿರುವುದರಿಂದ ಈ ಬಾರಿ ಬಜೆಟ್ ನ ಗಾತ್ರ ಅನಿವಾರ್ಯವಾಗಿ ಕಡಿಮೆಯಾಗಲಿದೆ ಎಂದು ಈ ಹಿಂದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದರು. 

ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಈ ಬಾರಿ ಸುಮಾರು ರೂ. 12ರಿಂದ 13 ಸಾವಿರ ಕೋಟಿ ಅನುದಾನ ಕಡಿಮೆ ಬಂದಿದೆ. ಇದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಭರಿಸುವಂತೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅದು ಬಂದಲ್ಲಿ ಹಣಕಾಸು ಸ್ಥಿತಿ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. 

ಒತ್ತುವರಿಯಾಗಿರುವ ಸರ್ಕಾರಿ ಭೂಮಿ ವಶಪಡಿಸಿಕೊಂಡು ಅದನ್ನು ಮಾರಾಟ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಉದ್ದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ. ಸರ್ಕಾರಿ ಒತ್ತುವರಿ ಭೂಮಿ ತೆರವು ಸಮಿತಿಗೆ ಇದೀಗ ಶಾಸಕ ಕೆ.ಜಿಬೋಪಯ್ಯ ಅವರನ್ನು ಅಧ್ಯಕ್ಷನ್ನಾಗಿ ನೇಮಿಸಲಾಗಿದ್ದು,  ಮುಂದಿನ ಆರ ತಿಂಗಳ ಒಳಗಾಗಿ ವಶಪಡಿಸಿಕೊಂಡ ಭೂಮಿ ಮಾರಾಟ ಮಾಡುವ ಮೂಲಕ ಸುಮಾರು ರೂ.6ರಿಂದ 7 ಸಾವಿರ ಕೋಟಿ ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com