ರಾಜ್ಯದಲ್ಲಿ ಕೋವಿಡ್ -19 ಸೋಂಕು ತಡೆಗೆ ಸಕಲ ಮುನ್ನೆಚ್ಚರಿಕೆ ಕ್ರಮ; ಆರೋಗ್ಯ ಸಚಿವ ಶ್ರೀರಾಮುಲು

ಕೊರೋನಾ ಸೋಂಕು ದೃಢಪಟ್ಟಿರುವ ಸಾಫ್ಟ್ ವೇರ್ ಕಂಪನಿಯ ಎಂಜಿನಿಯರ್ ಜೊತೆ ತೆರಳಿದ್ದ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರ ಆರೋಗ್ಯದ ಮೇಲೆ ಹದ್ದಿನ ಕಣ್ಣಿರಿಸಿರುವುದು ಸೇರಿದಂತೆ ಕೋವಿಡ್ -19 ಸೋಂಕು ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮಂಗಳವಾರ ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು (ಎಎನ್ಐ ಚಿತ್ರ))
ಆರೋಗ್ಯ ಸಚಿವ ಶ್ರೀರಾಮುಲು (ಎಎನ್ಐ ಚಿತ್ರ))

ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟಿರುವ ಸಾಫ್ಟ್ ವೇರ್ ಕಂಪನಿಯ ಎಂಜಿನಿಯರ್ ಜೊತೆ ತೆರಳಿದ್ದ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರ ಆರೋಗ್ಯದ ಮೇಲೆ ಹದ್ದಿನ ಕಣ್ಣಿರಿಸಿರುವುದು ಸೇರಿದಂತೆ ಕೋವಿಡ್ -19 ಸೋಂಕು ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮಂಗಳವಾರ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದುಬೈನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಹೈದ್ರಾಬಾದ್ ಪ್ರಯಾಣಿಸಿರುವ 25 ವರ್ಷದ ಹೈದ್ರಾಬಾದ್ ಮೂಲದ ಸಾಪ್ಟ್ ವೇರ್ ಎಂಜಿನಿಯರ್ ಜೊತೆ ತೆರಳಿದ್ದ ಬಹುತೇಕ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರನ್ನು ತೀವ್ರ ನಿಗಾ ವ್ಯವಸ್ಥೆಯಡಿ ಇರಿಸಲಾಗಿದೆ. ಈ ಪೈಕಿ ಯಾರೊಬ್ಬರಲ್ಲೂ ಸೋಂಕು ತಗುಲಿರುವುದು ದೃಢಪಟ್ಟಿಲ್ಲ ಎಂದು ಸಚಿವರು ವಿವರಿಸಿದರು.

ಸೋಂಕು ದೃಢ ಪಟ್ಟಿರುವ ಸಾಪ್ಟ್ ವೇರ್ ಎಂಜಿನಿಯರ್ ನ.23 ಸಹೋದ್ಯೋಗಿಗಳಿಗೂ ಸಹ ಮನೆಯಿಂದ ಹೊರಬರದಂತೆ ನಿರ್ಬಂಧ ದಲ್ಲಿರಲು ಸಲಹೆ ನೀಡಲಾಗಿದೆ. ಇವರ ಆರೋಗ್ಯ ಸ್ಥಿತಿಯನ್ನು ವಿಶೇಷ ವೈದ್ಯಕೀಯ ತಂಡದ ಸದಸ್ಯರು ಪರೀಕ್ಷಿಸಿ ನಿಗಾವಹಿಸಿದ್ದಾರೆ ಎಂದರು. 

ಸೋಂಕು ದೃಢಪಟ್ಟ ಎಂಜಿನಿಯರ್ ವಾಸವಾಗಿದ್ದ ಅಪಾರ್ಟ್ ಮೆಂಟ್ ನಿವಾಸಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಸಚಿವರು ಬಹಿರಂಗಪಡಿಸಿದರು. ರಾಜ್ಯದ ಯಾವುದೇ ಭಾಗದಲ್ಲಿ ಈವರೆಗೆ ಕೊರೊನಾ ಸೋಂಕು ತಗುಲಿರುವ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಒಂದೊಮ್ಮೆ ಸೋಂಕಿನ ಪ್ರಕರಣಗಳ ಪತ್ತೆಯಾದರೆ ಅವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲೊಕು ಆಸ್ಪತ್ರೆಗಳಲ್ಲಿ 630 ಹಾಸಿಗೆಗಳ ಐಸೋಲೇಷನ್ ವಾರ್ಡ್ ನಿಗದಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಹಾಗೂ ಬಸ್ ಟರ್ಮಿನಲ್ ಗಳು ಸೇರಿದಂತೆ ರಾಜ್ಯವನ್ನು ಪ್ರವೇಶಿಸುವ ಎಲ್ಲ ಸ್ಥಳಗಳಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರಿಕೆ ಘೋಷಿಸಿದೆ ಎಂದು ಸಚಿವರು ಹೇಳಿದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 43 ಸಾವಿರ ಪ್ರಯಾಣಿಕರನ್ನು ಈವರೆಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡು ಬಂದ 240 ಪ್ರಯಾಣಿಕರ ರಕ್ತದ ಮಾದರಿ ಪಡೆದು ಪರೀಕ್ಷೆಗೆಒಳಪಡಿಸಲಾಗಿದ್ದು ಎಲ್ಲ ಪ್ರಕರಣಗಳಲ್ಲಿ ನಕಾರಾತ್ಮಕ ವರದಿ ಬಂದಿದೆ ಎಂದರು.

ಪರಿಸ್ಥಿತಿಯನ್ನು ನಿಭಾಯಿಸಲು ಖಾಸಗಿ ಆಸ್ಪತ್ರೆಗಳು ಎಲ್ಲ ಸಹಕಾರ ನೀಡುತ್ತಿವೆ ಎಂದು ಸಚಿವ ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com