ಬಾಗಲಕೋಟೆಯಲ್ಲಿ ನಡೆಯಲಿದೆ ವೈಶಿಷ್ಟಮಯ ಹೋಳಿ: ರಂಗಿನಾಟಕ್ಕೆ ಅಡ್ಡಿ ಆಗುತ್ತಾ ಕೊರೊನಾ?

ಹೋಳಿ ಹಬ್ಬ ಎಂದಾಕ್ಷಣ ನೆನಪಿಗೆ ಬರುವುದೇ ಬಾಗಲಕೋಟೆ. ದೇಶದಾದ್ಯಂತ ಹೋಳಿ ಹಬ್ಬದ ಅಂಗವಾಗಿ ಅತ್ಯಂತ ಅದ್ಧೂರಿಯಾಗಿ ರಂಗಿನಾಟ ನಡೆಯುವುದೇ ಕೋಲ್ಕತ್ತಾ ಮತ್ತು ಬಾಗಲಕೋಟೆಯಲ್ಲಿ ಎನ್ನುವುದು ವಿಶೇಷ. ಇಂತಹ ವೈಶಿಷ್ಟö್ಯಮ ಹಬ್ಬಕ್ಕೆ ಮಾರಕ ಕೊರೊನಾ ಎಲ್ಲಿ ಕಂಟಕವಾಗುತ್ತೋ ಎನ್ನುವ ಭಯ ಜನಮಾನಸದಲ್ಲಿ ಆವರಿಸಿಕೊಳ್ಳತೊಡಗಿದೆ
ಬಾಗಲಕೋಟೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಹಲಗೆ ಮೇಳದ ಸಂಗ್ರಹ ಚಿತ್ರ
ಬಾಗಲಕೋಟೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಹಲಗೆ ಮೇಳದ ಸಂಗ್ರಹ ಚಿತ್ರ

ಬಾಗಲಕೋಟೆ: ಹೋಳಿ ಹಬ್ಬ ಎಂದಾಕ್ಷಣ ನೆನಪಿಗೆ ಬರುವುದೇ ಬಾಗಲಕೋಟೆ. ದೇಶದಾದ್ಯಂತ ಹೋಳಿ ಹಬ್ಬದ ಅಂಗವಾಗಿ ಅತ್ಯಂತ ಅದ್ಧೂರಿಯಾಗಿ ರಂಗಿನಾಟ ನಡೆಯುವುದೇ ಕೋಲ್ಕತ್ತಾ ಮತ್ತು ಬಾಗಲಕೋಟೆಯಲ್ಲಿ ಎನ್ನುವುದು ವಿಶೇಷ. ಇಂತಹ ವೈಶಿಷ್ಟö್ಯಮ ಹಬ್ಬಕ್ಕೆ ಮಾರಕ ಕೊರೊನಾ ಎಲ್ಲಿ ಕಂಟಕವಾಗುತ್ತೋ ಎನ್ನುವ ಭಯ ಜನಮಾನಸದಲ್ಲಿ ಆವರಿಸಿಕೊಳ್ಳತೊಡಗಿದೆ

ಹೋಳಿಯ ರಂಗಿನಾಟಕ್ಕೆ ರಾಷ್ಟವ್ಯಾಪಿ ಹೆಸರು ಮಾಡಿರುವ ಬಾಗಲಕೋಟೆಯಲ್ಲಿ ಈಗ ಹೋಳಿಯದ್ದೇ ಹವಾ. ಇದುವರೆಗೂ ಮೂರು ದಿನಗಳ ಕಾಲ ನಡೆಯುತ್ತಿದ್ದ ಬಣ್ಣದಾಟ ಮತ್ತೊಂದು ದಿನಕ್ಕೆ ವಿಸ್ತರಿಸಿಕೊಂಡಿದೆ. ಅಂದರೆ ಈ ಬಾರಿ ನಾಲ್ಕು ದಿನಗಳ ಕಾಲ ಬಣ್ಣದಾಟ ನಡೆಯಲಿದೆ

ಇದುವರೆಗೂ ಬಾಗಲಕೋಟೆ ಹಳೆ ಪಟ್ಟಣದಲ್ಲಿ ಮಾತ್ರ ಬಣ್ಣದಾಟ ನಡೆಯುತ್ತಿತ್ತು. ಈ ಬಾರಿಯಿಂದ ಅದು ನವನಗರ ಮತ್ತು ವಿದ್ಯಾಗಿರಿ ಪ್ರದೇಶಕ್ಕೂ ವಿಸ್ತರಿಸಿದೆ. ಹೋಳಿಯ ನಾಲ್ಕನೇ ದಿನ ನವನಗರ ಮತ್ತು ವಿದ್ಯಾಗಿರಿಯಲ್ಲಿ ರಂಗಿನಾಟ ನಡೆಯಲಿದೆ. ಇಲ್ಲಿಯೂ ಹೋಳಿಯ ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು ಎನ್ನುವ ಕೂಗು ಕಳೆದ ಮರ‍್ನಾಲ್ಕು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ ಅವಕಾಶ ಸಿಕ್ಕಿರಿಲಿಲ್ಲ. ಇದೀಗ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಮಕ್ಕಳು, ಮಹಿಳೆಯರು ಮತ್ತು ಹಿರಿಯರಾದಿಯಾಗಿ ವಯೋಮಾನದ ಮಿತಿ ಇಲ್ಲದೆ ಎಲ್ಲರೂ ಸೇರಿ ಬಣ್ಣದಾಟವಾಡುತ್ತಾರೆ. ಹೋಳಿಯ ಹಿನ್ನೆಲೆಯಲ್ಲಿ ಈಗಾಗಲೇ ನಗರದ ನಾನಾ ಕಡೆಗಳಲ್ಲಿ ಹಲಗೆ ಮೇಳಗಳ ಸದ್ದು ಜೋರಾಗಿದೆ. 

ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿನ ಬಹುತೇಕರು ಹೋಳಿ ಹಬ್ಬದ ವೇಳೆ ಪ್ರವಾಸಕ್ಕೆ ತೆರಳುತ್ತಾರೆ. ಇದೊಂದು ವಾಡಿಕೆ ಆಗಿಬಿಟ್ಟಿದೆ. ಊರಲ್ಲಿದ್ದು ಬಣ್ಣದಾಟವಾಡುವುದಕ್ಕಿಂತ ಬಣ್ಣದ ಉಸಾಬರಿಯೇ ಬೇಡವೆಂದು ಸೋ ಕಾಲ್ಡ್ ಜನರೆಲ್ಲ ಪ್ರವಾಸಿ ತಾಣಗಳಿಗೆ ಇನ್ನೂ ಕೆಲವರು ಗೋವಾ, ರತ್ನಾಗಿರಿ ಹಾಗೂ ಸಮುದ್ರ ತೀರದ ಪ್ರದೇಶಗಳಿಗೆ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ಹೋಗಲು ಈಗಾಗಲೇ ಜನತೆ ವಾಹನಗಳನ್ನು ಬುಕ್ ಮಾಡಿದ್ದಾರೆ. ನಗರದಲ್ಲಿನ ಬಹುತೇಕ ಎಲ್ಲ ವಾಹನಗಳು ಬುಕ್ ಆಗಿ, ಇತರ ಪ್ರದೇಶಗಳಲ್ಲಿನ ವಾಹನಗಳನ್ನು ಬುಕ್ ಮಾಡುತ್ತಿದ್ದಾರೆ.

ಎಷ್ಟೆಲ್ಲ ಜನತೆ ಊರು ಬಿಟ್ಟರೂ ಊರು ಹೊರಗಡೆ ಇದ್ದವರು ಇಲ್ಲಿಗೆ ರಂಗಿನಾಟವಾಡಲು ಬರುತ್ತಾರೆ. ಹೋಳಿಯ ವೇಳೆ ನಡೆಯುವ ರಂಗಿನಾಟ ಬಾಗಲಕೋಟೆಯ ಸಾಂಸ್ಕೃತಿಕ ಪರಂಪರೆಯ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದೆ. ಇದು ನಗರದ ಅಸ್ಮಿತೆ ಕೂಡ ಆಗಿದೆ. ನೂರಾರು ವರ್ಷಗಳ ಹಿಂದಿನಿಂದಲೂ ವೈಶಿಷ್ಟ್ಯಮಯ ಹೋಳಿ ನಡೆದುಕೊಂಡು ಬಂದಿದೆ.

ನಗರಾದ್ಯಂತ ಹೋಳಿ ಹಬ್ಬವನ್ನು ಆಚರಿಸಲು ಹೋಳಿ ಆಚರಣೆ ಸಮಿತಿಯೊಂದಿದೆ. ಅದರ ನಿರ್ದೇಶನದಂತೆಯೇ ಕಾರ್ಯಕ್ರಮಗಳು ನಡೆಯುತ್ತವೆ. ಇದೀಗ ನಗರದ ಎಲ್ಲೆಡೆ ಹಲಗೆ ಮೇಳ, ಹಲಗೆ ಸಪ್ಪಳದ್ದೇ ಹವಾ ಇದೆ. ಸಂಜೆ ವೇಳೆ ಆರಂಭಗೊಳ್ಳುವ ಹಲಗೆ ಮೇಳಗಳು ತಡರಾತ್ರಿವರೆಗೂ ನಡೆಯುತ್ತವೆ. ಜಾನಪದ ಹಾಡುಗಳ ಪೈಪೋಟಿ ಜೋರಾಗಿರುತ್ತದೆ. ಅವುಗಳನ್ನು ಕೇಳುವುದೇ ಹಬ್ಬ ಎನ್ನುವಂತಿರುತ್ತದೆ

ನಗರದಲ್ಲಿ ಅದ್ಧೂರಿ ಹೋಳಿ ಆಚರಣೆ ಮತ್ತು ಪ್ರವಾಸದ ಗುಂಗಲ್ಲಿ ಜನತೆ ಇರುವಾಗಲೇ ರಾಜ್ಯದಲ್ಲೂ ಕೊರೋನಾ ಭೀತಿ ಆವರಿಸಿಕೊಂಡಿದೆ. ರಾಜಧಾನಿ ಬೆಂಗಳೂರಿಗೆ ಮಹಾಮಾರಿ ಕೊರೊನೆ ಕಾಲಿಟ್ಟಿದೆ ಎನ್ನುವುದೇ ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಪ್ರವಾಸಕ್ಕೆ ತೆರಳಬೇಕು ಎನ್ನುವುವರರು ಚಿಂತಿತರಾಗಿದ್ದಾರೆ.

ಸರ್ಕಾರ ಕೊರೊನಾ ತಡೆಗೆ ಕೈಗೊಳ್ಳುತ್ತಿರುವ ಕಟ್ಟೆಚ್ಚರ ನೋಡಿದಾಗ ಪ್ರವಾಸಕ್ಕೆ ಹೋಗುವುದು ಒಳ್ಳೆಯದಲ್ಲ ಎನ್ನುವ ಭಾವನೆ ಹೆಚ್ಚಾಗತೊಡಗಿದೆ. ಎಲ್ಲಿ ಕೊರೊನಾ ಭೀತಿ ಅದ್ದೂರಿ ಹೊಳಿಯ ಮೇಲೂ ಪರಿಣಾಮ ಬೀರಲಿದೆ ಎನ್ನುವ ಅನುಮಾನ ಶುರುವಾಗಿದೆ. ಎಲ್ಲೋ ಚೀನಾದಲ್ಲಿ ಹುಟ್ಟಿಕೊಂಡಿರುವ ಈ ರೋಗ ವಿಶ್ವವನ್ನೇ ವ್ಯಾಪಿಸತೊಡಗಿದೆ. ಹಾಗೆ ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅದು ಎಲ್ಲಿ ತನ್ನ ಮೃರಣ ಮೃದಂಗ ಬಾರಿಸುತ್ತದೋ ಎನ್ನುವ ಕಾರಣಕ್ಕೆ ರೋಗ ತಡೆಗೆ ರಾಜ್ಯ ಸರ್ಕಾರ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ವರದಿ:ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com