ಮಂಡ್ಯ: ಲೋಕಪಾವನಿ ನದಿಯಲ್ಲಿ ಗಾಡಿ, ಎತ್ತುಗಳ ಸಹಿತ ಕೊಚ್ಚಿಹೋದ ಯುವಕ

ಗಾಡಿ ಮತ್ತು ಎತ್ತುಗಳ ಮೈ ತೊಳೆಯಲು ನೀರಿಗಿಳಿದ ವೇಳೆ ಎತ್ತಿನ ಗಾಡಿ ಸಮೇತ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಗಾಡಿ ಮತ್ತು ಎತ್ತುಗಳ ಮೈ ತೊಳೆಯಲು ನೀರಿಗಿಳಿದ ವೇಳೆ ಎತ್ತಿನ ಗಾಡಿ ಸಮೇತ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿಯಲ್ಲಿ ನಡೆದಿದೆ.

ಸೋಮಶೇಖರ್(೨೧) ಎಂಬ ಯುವಕನೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

ಸೋಮಶೇಖರ್ ತನ್ನ ಸ್ನೇಹಿತನೊಂದಿಗೆ ಗಾಡಿ ಸಮೇತ ಎತ್ತುಗಳ ಮೈ ತೋಳೆಯಲು ಲೋಕಪಾವನಿ ಸೇತುವೆ ಸಮೀಪದಲ್ಲಿ ನದಿಗೆ ಇಳಿದಿದ್ದಾರೆ. ಭಾನುವಾರ ರಾತ್ರಿ ಪಾಡಂವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಸೇರಿದಂತೆ ಸುತ್ತಮುತ್ತ ಸುರಿದ ಭಾರಿ ಮಳೆಗೆ ನದಿಯಲ್ಲಿ ಅಪಾರ ಪ್ರಮಾಣದ ನೀರು ಏಕಾಏಕಿ ಹರಿದು ಬಂದಿತ್ತು. ಈ ನೀರಿನ ಸೆಳೆತಕ್ಕೆ ಗಾಡಿ, ಎತ್ತುಗಳು ಸೋಮಶೇಖರ್ ಹಾಗೂ ಮತ್ತೊಬ್ಬ ಸಹ ಕೊಚ್ಚಿ ಹೋಗಿದ್ದಾರೆ. 

ಈ ವೇಳೆ ನದಿಯಿಂದ ಎತ್ತುಗಳು ಗಾಡಿಯಿಂದ ಬಿಡಿಸಿಕೊಂಡು ದಡ ಸೇರಿವೆ. ಇನ್ನೊಬ್ಬ ಯುವಕನು ಸಹ ನದಿಯ ರಭಸದಲ್ಲಿ ಈಜಿ ದಡ ಸೇರಿದ್ದಾನೆ. ಆದರೆ ಸೋಮಶೇಖರ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಕೆಲ ಅಂತರದ ದೂರದಲ್ಲೇ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. 
ವಿಷಯ ತಿಳಿದು ಬಾಬುರಾಯನಕೊಪ್ಪಲು ಗ್ರಾಮಸ್ಥರು ನದಿಯಲ್ಲಿ ಹುಡುಕಾಟ ನಡೆಸಿ ಬಳಿಕ ಅಗ್ನಿಶಾಮಕದಳ ಹಾಗೂ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯ ಮೀನುಗಾರರ ಸಹಾಯದಿಂದ ತೆಪ್ಪದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಘಟನೆಯಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಎತ್ತಿನಗಾಡಿ ಕಿಲೋ ಮೀಟರ್ ದೂರದಲ್ಲಿ ನದಿಯೊಳಗೆ ಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿರುವ ಯುವಕನಿಗಾಗಿ ತೀವ್ರ ಶೋಧನೆ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com