ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ಸಲ್ಲಿಕೆ

ಸ್ವಾತಂತ್ರ್ಯ ಹೋರಾಟಗಾರ  ಎಚ್.ಎಸ್. ದೊರೆಸ್ವಾಮಿ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಪಕ್ಷ ನಾಯಕ  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿತು.
ಯತ್ನಾಳ್ ಗೆ ಮುಂದೆ ಬರುವಾಸೆ; ವಿಧಾನಸಭೆಯಲ್ಲಿ ಕಿಚಾಯಿಸಿದ ಸಿದ್ದರಾಮಯ್ಯ
ಯತ್ನಾಳ್ ಗೆ ಮುಂದೆ ಬರುವಾಸೆ; ವಿಧಾನಸಭೆಯಲ್ಲಿ ಕಿಚಾಯಿಸಿದ ಸಿದ್ದರಾಮಯ್ಯ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸದನದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಬೇಕು ಹಾಗೂ  ಯತ್ನಾಳ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಪಕ್ಷ ನಾಯಕ  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿತು.

ರಾಜಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ ನೇತೃತ್ವದ ನಿಯೋಗದಲ್ಲಿ ಮುಖಂಡರಾದ ಯು.ಟಿ.ಖಾದರ್, ಆರ್.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಮತ್ತಿತರರು ಇದ್ದರು.

ಬುಧವಾರ ಬೆಳಿಗ್ಗೆ ಕಲಾಪ ಆರಂಭಕ್ಕೂ ಮುನ್ನ  ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ನಾಯಕರು,ಸದನದ ಕಲಾಪದ ವೇಳೆ ಸ್ಪೀಕರ್  ವಿಪಕ್ಷಗಳಿಗ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸಂವಿಧಾನದ 175ನೇ ಪರಿಚ್ಛೇದದಡಿ ಸ್ಪೀಕರ್ ಗೆ ನಿರ್ದೇಶನ ನೀಡಲು ಘನತೆವೆತ್ತ  ರಾಜ್ಯಪಾಲರಿಗೆ ಅಧಿಕಾರವಿದೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸ್ಪೀಕರ್ ಗೆ ನಿರ್ದೇಶಿಸಿ ಯತ್ನಾಳ್ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮನವಿ ಸಲ್ಲಿಕೆ ಬಳಿಕ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ,  ಕಾಂಗ್ರೆಸ್  ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದೆ. ಬಸನಗೌಡ ಪಾಟೀಲ್ ಯತ್ನಾಳ್, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.  ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಾಡಿದ ಅವಮಾನವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಿಗೂ ಅಪಮಾನ ಮಾಡಿದ್ದಾರೆ ಎಂದರು. ಇದು ಸಂವಿಧಾನ ಕ್ಕೆ ಮಾಡುವ ಅಪಮಾನ. ಗಾಂಧೀಜಿಯವರ ಕೊನೆಯ ಕೊಂಡಿಯಾಗಿರುವ ದೊರೆಸ್ವಾಮಿ ದೇಶಕ್ಕೋಸ್ಕರ ಈಗಲೂ ಹೋರಾಟ ಮಾಡುತ್ತಲೇ ಇದ್ದಾರೆ. ಯತ್ನಾಳ್ ಅವರು ಸಾಮಾನ್ಯ ಪ್ರಜೆ ಅಲ್ಲ ಅವರು ಹಿರಿಯ ಶಾಸಕ. ಶಾಸಕರಾಗಿ  ಸಂವಿಧಾನ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿದ್ದಾರಾದರೂ ಅವರಿಗೆ ಗೌರವಯುತವಾಗಿ  ನಡೆದು‌ಕೊಳ್ಳುವುದು ಗೊತ್ತಿಲ್ಲ. ಅವರು ಸಂವಿಧಾನಕ್ಕೆ  ದೊಡ್ಡ ಅಪರಾಧವೆಸಗಿರುವುದು  ಅಲ್ಲದೇ ಅವರ ಪಕ್ಷದವರೂ ಕೂಡ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಇವೆಲ್ಲವನ್ನೂ ನೋಡಿದರೆ ಇದರ ಹಿಂದೆ ದೊಡ್ಡ ಹುನ್ನಾರವೇ ಇದ್ದಂತೆ ಕಾಣುತ್ತಿದೆ. ಸ್ವಾತಂತ್ರ್ಯ  ಎಲ್ಲರಿಗೂ ಇದೆ. ಅದನ್ನ ಬಿಜೆಪಿಯವರು ಕೇವಲ ಟೀಕೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದು  ಟೀಕಿಸಿದರು.

ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ‌ ನಡೆದುಕೊಂಡಿರುವ ಯತ್ನಾಳ್‌ ಶಾಸಕರಾಗಿ ಮುಂದುವರೆಯುವ ಅರ್ಹತೆ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಬಿಜೆಪಿ ನಾಯಕರು ಅವರನ್ನು ಸಮರ್ಥಿಸುವ ಕೆಲಸ ಮಾಡಿದ್ದಾರೆ.  ಬಿಜೆಪಿ‌ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಸ್ವಾತಂತ್ರ್ಯದ ಬಗ್ಗೆ ಬಿಜೆಪಿ‌ ನಾಯಕರಿಗೆ ಎಳ್ಳಷ್ಟು ಗೌರವವಿಲ್ಲ. ಇದೊಂದು ಷಡ್ಯಂತ್ರ ಎಂಬ ಅನುಮಾನವಿದೆ. ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಜರುಗಿಸಲು ಮನವಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಹಿತದೃಷ್ಟಿಯಿಂದ ಹಾಗೂ ಬಿಜೆಪಿ ಸರ್ಕಾರದ ಲೂಟಿ ತಡೆಯುವ ದೃಷ್ಟಿಯಿಂದ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದೇವೆ. ಸ್ಪೀಕರ್‌  ವಿರುದ್ಧ ನಾವು ಯಾವುದೇ ದೂರು ನೀಡಿಲ್ಲ. ಈ ಬಗ್ಗೆ ಮಾಧ್ಯಮದಲ್ಲಿ ಬಂದಿರುವ ವರದಿಯಲ್ಲಿ ಹುರುಳಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ರಾಜ್ಯಪಾಲರು ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ‌ ನೀಡಿದ್ದು ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com