ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಂಡ ಕಾಂಗ್ರೆಸ್: ಸಂವಿಧಾನ ಕುರಿತು ವಿಶೇಷ ಚರ್ಚೆ

ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಕಾಂಗ್ರೆಸ್ ವಿಧಾನಸಭೆಯಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿದೆ.

Published: 04th March 2020 01:14 PM  |   Last Updated: 04th March 2020 01:14 PM   |  A+A-


Karnataka assembly session: Opposition slams BJP over police firing against anti-caa protestors in Mangaluru

ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್‌ ಪ್ರತಿಧ್ವನಿ: ಗದ್ದಲ, ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ

Posted By : Srinivas Rao BV
Source : UNI

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಕಾಂಗ್ರೆಸ್ ವಿಧಾನಸಭೆಯಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿದೆ.

ಅವಹೇಳನಕಾರಿ ಹೇಳಿಕೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಬೇಕು ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಕಾಂಗ್ರೆಸ್ ಮನವಿ ಮಾಡಿದೆ. 

ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯತ್ನಾಳ್ ಹೇಳಿಕೆಯ ಬಗ್ಗೆ ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ದೂರು ನೀಡಿದ್ದೇವೆ. ಮಾತ್ರವಲ್ಲ ಈ ಬಗ್ಗೆ ಚರ್ಚೆ ನಡೆಸಲು ಸ್ಪೀಕರ್ ಅವರಿಗೆ ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಯತ್ನಾಳ ಅವರ ಹೇಳಿಕೆ ಯಾವ ರೀತಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಹೇಳಿಕೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸಂವಿಧಾನ ಪ್ರಕಾರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ರಾಜ್ಯಪಾಲರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿದರು.

ನಾಳೆ ಬಜೆಟ್‌ ಮಂಡನೆಯಾಗಲಿದೆ. ಹಲವು ಸಾರ್ವಜನಿಕ ಮಹತ್ವದ ಮಸೂದೆಗಳು ಮಂಡನೆಯಾಗಿವೆ. ಕ್ಷೇತ್ರಗಳಲ್ಲಿ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಚರ್ಚೆ ನಡೆಸಬೇಕಿದೆ. ಆದ್ದರಿಂದ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.

ಇದಕ್ಕೂ ಮೊದಲು ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದ್ದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿದ್ದನ್ನು ವಿರೋಧಿಸಿದ ಬಿಜೆಪಿ ಸದಸ್ಯರು, ಕೂಡಲೇ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಅವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ನೋಟಿಸ್ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ಅವಕಾಶ ನೀಡಲಿಲ್ಲ. ಆದರೆ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಸರಿಯಲ್ಲ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ಪೀಕರ್ ಸ್ಥಾನ ಕೂಡ ಒಂದು ಸಾಂವಿಧಾನಿಕ ಹುದ್ದೆಯಾಗಿದ್ದು, ಸಂವಿಧಾನದ ಒಂದು ಅಂಗದ ವಿರುದ್ಧ ಮತ್ತೊಂದು ಸಂಸ್ಥೆಗೆ ದೂರು ನೀಡುವುದು ಸರಿಯಲ್ಲ. ಸ್ಪೀಕರ್ ಅವರು ಸಂವಿಧಾನ ಬದ್ಧವಾಗಿ ಕೆಲಸ ಮಾಡಿದ್ದಾರೆ. ಅವರ ನೋಟಿಸ್‌ಗೆ ರೂಲಿಂಗ್ ನೀಡಿದ್ದು, ಸ್ಪೀಕರ್ ಅವರ ರೋಲಿಂಗ್ ಅಂತಿಮ, ಅದನ್ನು ಪ್ರಶ್ನಿಸಿ ಇನ್ನೊಂದು ಸಂವಿಧಾನ ಸಂಸ್ಥೆಗೆ ಹೋಗುವುದು ಸರಿಯಲ್ಲ. ಜನಪರ ಅಥವಾ ಜನರಿಗೆ ತೊಂದರೆಯಾಗುವಂತಹ ವಿಷಯವಾಗಿದ್ದರೆ ಸರ್ಕಾರ ಚರ್ಚೆಗೆ ಸಿದ್ಧವಾಗಿರುತ್ತಿತ್ತು. ಎಲ್ಲೋ ಹೊರಗಡೆ ಹೇಳಿರುವ ವಿಷಯವನ್ನು ಇಲ್ಲಿ ತಂದು ಕಲಾಪಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಬೇಕಿದ್ದರೆ ಹೇಳಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬಹುದು. ಆದರೆ ಸದನಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಸ್ಪೀಕರ್ ವಿರುದ್ಧ ಮಾಡಿರುವ ಆರೋಪಕ್ಕೆ ಕ್ಷಮೆಯಾಚಿಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಸಂವಿಧಾನ ಬಗ್ಗೆ ಚರ್ಚೆ ಸ್ವಾಗತಾರ್ಹ, ಆದರೆ ಈ ಸಂವಿಧಾನ ಹೇಗೆ ಅಸ್ತಿತ್ವಕ್ಕೆ ಬಂದಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಷ್ಟರದಲ್ಲಿ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿ ಕಾಂಗ್ರೆಸ್‌ ಧರಣಿ ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಹೇಳಿ ತಮ್ಮ ಆಸನಕ್ಕೆ ಮರಳಿದರು. ಆದ ಕಾಂಗ್ರೆಸ್‌ನ ಎಲ್ಲಾ ಸದಸ್ಯರು ಕೂಡ ತಮ್ಮ ತಮ್ಮ ಆಸನಗಳಿಗೆ ಮರಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಧರಣಿ ಹಿಂಪಡೆಯುತ್ತಿರುವುದು ಸ್ವಾಗತಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಪರಸ್ಪರ ಸಹಕಾರ ಇರಬೇಕು, ಆದ್ದರಿಂದ ಧರಣಿ ಹಿಂಪಡೆದಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಬಳಿಕ ಸ್ಪೀಕರ್ ಅವರು ಸಂವಿಧಾನ ಕುರಿತು ಚರ್ಚೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಅವಕಾಶ ನೀಡಿದರು.

Stay up to date on all the latest ರಾಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp