ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಕಾಮುಕನಿಗೆ 7 ವರ್ಷ ಕಠಿಣ ಶಿಕ್ಷೆ

ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿ ಕೈಕೊಟ್ಟಿದ್ದ ಕಾಮುಕನಿಗೆ ಮಂಗಳೂರು ಕೋರ್ಟ್ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿ ಕೈಕೊಟ್ಟಿದ್ದ ಕಾಮುಕನಿಗೆ ಮಂಗಳೂರು ಕೋರ್ಟ್ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

2018ರಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು ಜಿಲ್ಲೆಯ ನಾಗಗೊಂಡನಹಳ್ಳಿ ನಿವಾಸಿ ರಾಮ ಅಲಿಯಾಸ್ ದಾಸಪ್ಪ(34)ನೇ ಏಳು ವರ್ಷ ಕಠಿಣ ಶಿಕ್ಷೆ  ಹಾಗೂ 45 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಆತನಿಗೆ ಹುಟ್ಚಿದ ಮಗುವಿನ ಹೆಸರಿನಲ್ಲಿ 50 ಸಾವಿರ ರೂ. ಠೇವಣಿ ಮಾಡುವಂತೆ ಅಪರಾಧಿಗೆ ಆದೇಶಿಸಿದೆ.

ಸಂತ್ರಸ್ತ ಯುವತಿ ತನ್ನ ತಂದೆ ಮತ್ತು ತಾಯಿ ಜತೆ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವೇಳೆ ಪಕ್ಕದ ಮನೆಯ ಇನ್ನೊಂದು ಕೊಠಡಿಯಲ್ಲಿ ವಾಸಿಸುತ್ತಿದ್ದ ರಾಮ, 20  ವರ್ಷದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. 

ಯುವತಿ ತಂದೆ, ತಾಯಿ ಕೆಲಸಕ್ಕೆ ಹೋದಾಗ, ಯುವತಿ ಒಬ್ಬಂಟಿಯಾಗಿದ್ದಾಗ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದನು. ಯುವತಿ ಆರು ತಿಂಗಳ ಗರ್ಭಿಣಿಯಾದ ನಂತರ ಆಕೆಯ ಪೋಷಕರಿಗೆ ವಿಷಯ ಗೊತ್ತಾಗಿದೆ. ಬಳಿಕ ಪೋಷಕರು ಮದುವೆಯಾಗುವಂತೆ ರಾಮನಿಗೆ ಒತ್ತಾಯಿಸಿದ್ದಾರೆ. ಆದರೆ ತನಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿ ರಾಮ ಮದುವೆಗೆ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಪೋಷಕರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಡಿಎನ್ಎ ಪರೀಕ್ಷೆಯಲ್ಲಿ ಯುವತಿ ಜನ್ನ ನೀಡಿದ ಹೆಣ್ಣು ಮಗುವಿಗೆ ರಾಮ ಜೈವಿಕ ತಂದೆ ಎಂಬುದು ಸಾಬೀತಾಗಿದ್ದು, ಆ ಮಗುವಿನ ಹೆಸರಿನಲ್ಲಿ 50 ಸಾವಿರ ರೂ. ಫಿಕ್ಸೆಡ್ ಡಿಪಾಸಿಟ್ ಮಾಡುವಂತೆ ಕೋರ್ಟ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com