ಕೃಷ್ಣಾ ನ್ಯಾಯಾಧೀಕರಣ ಮಧ್ಯಂತರ ಅಧಿಸೂಚನೆಗಾಗಿ ಬೇಕಿದೆ ಸಾಂಘಿಕ ಹೋರಾಟ!

ಮಹಾದಾಯಿ ನದಿ ನೀರಿಗಾಗಿ ಜನಸಮುದಾಯದಲ್ಲಿ ಹುಟ್ಟಿಕೊಂಡ ಕಿಚ್ಚು ಕೃಷ್ಣಾನದಿ ನೀರಿಗಾಗಿನ ಹೋರಾಟದಲ್ಲಿ ಕಾಣಿಸುತ್ತಿಲ್ಲ. ಪರಿಣಾಮವಾಗಿಯೇ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಮಂಡಳಿ ವರದಿಯ ಅಧಿಸೂಚನೆ ಕೇಂದ್ರದಿಂದ ಹೊರ ಬೀಳುತ್ತಿಲ್ಲ.
ಕೃಷ್ಣಾ ನದಿ
ಕೃಷ್ಣಾ ನದಿ

ಬಾಗಲಕೋಟೆ: ಮಹಾದಾಯಿ ನದಿ ನೀರಿಗಾಗಿ ಜನಸಮುದಾಯದಲ್ಲಿ ಹುಟ್ಟಿಕೊಂಡ ಕಿಚ್ಚು ಕೃಷ್ಣಾನದಿ ನೀರಿಗಾಗಿನ ಹೋರಾಟದಲ್ಲಿ ಕಾಣಿಸುತ್ತಿಲ್ಲ. ಪರಿಣಾಮವಾಗಿಯೇ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಮಂಡಳಿ ವರದಿಯ ಅಧಿಸೂಚನೆ ಕೇಂದ್ರದಿಂದ ಹೊರ ಬೀಳುತ್ತಿಲ್ಲ.

ಮಹಾದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ಜೋಡಿಸಬೇಕು. ಆ ಮೂಲಕ ಬೆಳಗಾವಿ ವಿಭಾಗದ ನಾಲ್ಕು ಜಿಲ್ಲೆಗಳ ಜನತೆಯ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿತೋ ಅಂತಹ ಹೋರಾಟದ ಎಳ್ಳಷ್ಟೂ ಕಿಚ್ಚು ಕೃಷ್ಣಾ ನದಿ ವ್ಯಾಪ್ತಿ ಪ್ರದೇಶದಲ್ಲಿ ಸದ್ಯಕ್ಕೆ ಕಾಣಿಸುತ್ತಿಲ್ಲ.
 
ಕೃಷ್ಣಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ಜನಪ್ರತಿನಿಧಿಗಳೂ ಕೂಡಾ ಕೃಷ್ಣಾ ನ್ಯಾಯಾಧಿಕರಣ ವರದಿಯ ಅಧಿಸೂಚನೆಯನ್ನು ಹೋರಡಿಸುವಂತೆ ತೀವ್ರ ಒತ್ತಡ ಹಾಕುತ್ತಿಲ್ಲ. ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಮಹಾದಾಯಿ ನ್ಯಾಯಾಧಿಕರಣದ ಅಧಿಸೂಚನೆಗಾಗಿ ಆ ಭಾಗದಲ್ಲಿನ ಸಮುದಾಯ ಮತ್ತು ಜನಪ್ರತಿನಿಧಿಗಳಿಂದ ಕೇಂದ್ರದ ಮೇಲೆ ಸತತವಾಗಿ ಹೋರಾಟದ ಮೂಲಕ ತೀವ್ರ ಒತ್ತಡ ಹಾಕಲಾಯಿತು. ನ್ಯಾಯಾಲದ ಮೆಟ್ಟಿಲನ್ನೂ ಹೋರಾಟಗಾರರು ಹತ್ತಿದರು. ಕೊನೆಗೆ ಉಚ್ಚ ನ್ಯಾಯಾಲಯವೇ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸುವಂತೆ ಸೂಚಿಸಿತು. ನ್ಯಾಯಾಲಯದ ಸೂಚನೆಗೆ ಮಣಿದ ಕೇಂದ್ರ ಸರ್ಕಾರ ಯಾವುದೇ ವಿಳಂಬ ಮಾಡದೇ ಮಹಾದಾಯಿ ನ್ಯಾಯಾಧಿಕರಣ ವರದಿಯ ಅಧಿಸೂಚನೆ ಹೊರಡಿಸಿತು ಎನ್ನುವುದು ಗಮನಾರ್ಹ. 

ಕೃಷ್ಣಾ ನದಿ ನೀರಿಗಾಗಿ ಸಾಕಷ್ಟು ಸಂಘಟನೆಗಳು ಹುಟ್ಟಿಕೊಂಡಿವೆಯಾದರೂ ಆಲಮಟ್ಟಿ ಜಲಾಶಯ ಎತ್ತರವನ್ನು ಹೆಚ್ಚಿಸಬೇಕು. ಆ ಮೂಲಕ ಈ ಭಾಗವನ್ನು ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವ ಕೂಗು ಆಗಾಗ್ಗೆ ಕೇಳಿ ಬರುತ್ತಿದೆಯಾದರೂ ಮಹಾದಾಯಿ ನೀರಿಗಾಗಿ ನಡೆಯುತ್ತಿರುವ ಹೋರಾಟದಂತೆ ಈ ಭಾಗದ ಜನಸಮುದಾಯದಲ್ಲಿ ಪರಿಣಾಮಕಾರಿಯಾದ ಹೋರಾಟದ ತೀವ್ರತೆ ಕಾಣಿಸುತ್ತಿಲ್ಲ.

ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ ಸಮಿತಿ ಕೇಂದ್ರಕ್ಕೆ ಸಲ್ಲಿಸಿ ಹತ್ತು ವರ್ಷಗಳು ಸಂದಿವೆ. ಮಧ್ಯಂತರ ಅಧಿಸೂಚನೆಯನ್ನಾದರೂ ಹೊರಡಿಸುವಂತೆ ರಾಜ್ಯದಿಂದ ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಆಗುತ್ತಿಲ್ಲ. ಪರಿಣಾಮವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ವಿಳಂಬವಾಗಿವೆ. ಅಷ್ಟೆ ಅಲ್ಲ ಪ್ರತಿವರ್ಷ ಯೋಜನಾ ವೆಚ್ಚ ಕೂಡ ಹೆಚ್ಚುತ್ತಲೇ ಇದೆ. ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯ ಮಂಡಳಿ ವರದಿ ಹಿನ್ನೆಲೆಯಲ್ಲಿ ನೀರು ಹಂಚಿಕೆ ಕುರಿತಾದ ಮಧ್ಯಂತರ ಅಧಿಸೂಚನೆ ಹೊರಡಿಸುವವರೆಗೂ ಯುಕೆಪಿ ಯೋಜನೆಗಳಿಗೆ ಚುರುಕು ಸಿಗುವುದು ಕಷ್ಟ. ನ್ಯಾಯಾಧಿಕರಣದ ಅಧಿಸೂಚನೆಗಾಗಿ ಮಹಾದಾಯಿ ನೀರಿಗಾಗಿ ನಡೆದಂತೆ ಸಾಂಘಿಕ ಹಾಗೂ ಗಟ್ಟಿ ಹೋರಾಟದ ಅಗತ್ಯವಿದೆ. ಹೋರಾಟಗಾರರಿಗೆ ಸೂಕ್ತ ಸ್ಪಂದನೆ ಸಿಕ್ಕುತ್ತಿಲ್ಲ ಎನ್ನವುದು ಗಮನಿಸಬೇಕಾಗಿರುವ ಅಂಶವಾಗಿದೆ.

ಕೃಷ್ಣೆಯ ಹೆಸರಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಲೇ ಇರುವ ರಾಜಕಾರಣಿಗಳು  ಕೃಷ್ಣೆಯ ಮಕ್ಕಳ ಅರ್ಧ ಶತಮಾನದ ಆಶಯಕ್ಕೆ ಸ್ಪಂದಿಸಿ ರಾಜಕೀಯ ಇಚ್ಛಾಶಕ್ತಿ ಮೆರೆಯುವ ಕೆಲಸ ಮಾಡಬೇಕಿದೆ. ರಾಜಕೀಯ ಇಚ್ಛಾಶಕ್ತಿ ಮೆರೆಯದ ಹೊರತು ಅಧಿಸೂಚನೆ ಹೊರ ಬೀಳುವುದು ಕಷ್ಟ.

ಒಮ್ಮೆ ಕೇಂದ್ರದಿಂದ ಅಧಿಸೂಚನೆ ಹೊರಬಿದ್ದ ಬಳಿಕ ರಾಜ್ಯ ಸರ್ಕಾರ ತಂತಾನೇ ಯುಕೆಪಿ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಮುಂದಾಗುತ್ತದೆ. ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡುತ್ತದೆ. ಅಲ್ಲಿಯವರೆಗೂ ರಾಜ್ಯ ಸರ್ಕಾರದ ನಿರ್ಲಕ್ಷö್ಯ ಮುಂದುವರಿಯಲಿದೆ. ಮಹಾದಾಯಿ ನ್ಯಾಯಾಧಿಕರಣದ ಕುರಿತು ಮಧ್ಯಂತರ ಆದೇಶ ಹೊರ ಬೀಳುತ್ತಲೇ ರಾಜ್ಯ ಸರ್ಕಾರ ಗುರುವಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ  ಕಳಸಾ -ಬಂಡೂರಿ ನಾಲಾ ಯೋಜನೆಗಾಗಿ ೫೦೦ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇ ಪ್ರತ್ಯಕ್ಷ ಸಾಕ್ಷಿ. ೫೦೦ ಕೋಟಿ ರೂ. ದೊಡ್ಡ ಮೊತ್ತವೆನಲ್ಲವಾದರೂ ಮೊದಲ ಹಂತವಾಗಿ ಇಷ್ಟೊಂದು ಹಣ ಮೀಸಲು ಇಟ್ಟಿರುವುದಕ್ಕೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ.

ಕೃಷ್ಣಾ ನ್ಯಾಯಾಧಿಕರಣದ ಮಧ್ಯಂತರ ಅಧಿಸೂಚನೆ ಹೊರ ಬಿದ್ದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಮಹಾರಾಷ್ಟç ಸರ್ಕಾರಕ್ಕೆ ಕುಡಿವ ನೀರಿನ ಭಿಕ್ಷೆ ಕೇಳುವುದು ಶಾಶ್ವತವಾಗಿ ತಪ್ಪಲಿದೆ. ಹಂಚಿಕೆ ನೀರಿನ್ನು ಬಳಕೆ ಮಾಡಿಕೊಳ್ಳುವುದಕ್ಕಾದರೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ವಿಳಂಬವಿಲ್ಲದೆ ಅನುಷ್ಠಾನಗೊಳ್ಳಲಿವೆ. ಇನ್ನಾದರೂ ಕೃಷ್ಣಾ ನ್ಯಾಯಾಧಿಕರಣ ವರದಿಯ ಅಧಿಸೂಚನೆ ಹೊರಡಿಸುವಂತೆ ಯುಕೆಪಿ ಯೋಜನಾ ವ್ಯಾಪ್ತಿಯ ಪ್ರದೇಶದಲ್ಲಿ ರಾಜಕೀಯ ರಹಿತವಾದ ಒಗ್ಗಟ್ಟಿನ ಹೋರಾಟ ಆರಂಭಗೊಳ್ಳುವುದೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

ಹೊಸ ಭರವಸೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆಗೆ 21308 ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದರಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಯುಕೆಪಿ ಯೋಜನೆಗಾಗಿಯೇ ಬಳಕೆ ಮಾಡಲಿದ್ದಾರೆ ಎನ್ನುವ ಹೊರ ಭರವಸೆಯನ್ನು ಡಿಸಿಎಂ ಕಾರಜೋಳ ವ್ಯಕ್ತ ಪಡಿಸಿದ್ದಾರೆ. ಜಲಸಂಪನ್ಮೂಲ ಇಲಾಖೆಗೆ ಮೀಸಲಿಟ್ಟ ಹಣದಲ್ಲಾದರೂ 10 ಸಾವಿರ ಕೋಟಿಯನ್ನು ಯುಕೆಪಿಗೆ ಖರ್ಚು ಮಾಡಲಾಗುವುದು ಎನ್ನುವುದನ್ನು ಸಿಎಂ ಅವರಿಂದಲೇ ಸ್ಪಷ್ಟ ಪಡಿಸುವ ಕೆಲಸವನ್ನು ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕಿದೆ. ಅಂದಾಗ ಮಾತ್ರ ಅಷ್ಟರ ಮಟ್ಟಿಗೆ ಜನರು ನಿಟ್ಟುಸಿರುವ ಬಿಡಲು ಸಾಧ್ಯವಾಗಲಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com