ಮಂಡ್ಯದ ಮೈ‌ ಶುಗರ್ ಪಿಪಿಪಿ ಮಾದರಿ ಲೀಸ್ ಗೆ: ಶಿವರಾಮ್ ಹೆಬ್ಬಾರ್...!

ಪಾಂಡವಪುರ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆ ರೀತಿಯಲ್ಲಿಯೇ ಮಂಡ್ಯದ ಮೈ‌ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪಿಪಿಪಿ ಮಾದರಿಯಲ್ಲಿ 40 ವರ್ಷದ ಗುತ್ತಿಗೆಗೆ ನೀಡುತ್ತಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಾಂಡವಪುರ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆ ರೀತಿಯಲ್ಲಿಯೇ ಮಂಡ್ಯದ ಮೈ‌ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪಿಪಿಪಿ ಮಾದರಿಯಲ್ಲಿ 40 ವರ್ಷದ ಗುತ್ತಿಗೆಗೆ ನೀಡುತ್ತಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಸದಸ್ಯ‌ ಶ್ರೀಕಂಠೇಡೇಗೌಡ, ಕ್ಷಿಪ್ರ ಕಾರ್ಯಾಚರಣೆ ಮೂಲಕ ಪರಿಹಾರ ಕಾರ್ಯಾಚರಣೆ ನೀಡಲಾಗಿದೆ ಎಂದು ರಾಜ್ಯಪಾಲರ‌ ಭಾಷಣದಲ್ಲಿ ಹೇಳಲಾಗಿದೆ. ಆದರೆ ಇದರಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದ್ದು, ಇದನ್ನು ಸಚಿವರೂ ಒಪ್ಪಿಕೊಂಡಿದ್ದಾರೆ ಯಾವ ಅಧಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಪಾಸ್ ವರ್ಡ್ ಖಾಸಗಿಯವರಿಗೆ ನೀಡಿದ್ದರಿಂದ ಪರಿಹಾರದ ಹಣ ಬೇರೆಯವರ ಖಾತೆಗೆ ಹೋಗಿದೆ, ಮನೆ ಕಟ್ಟುವ ಹಣವೂ ಹಾಗೆಯೇ ಆಗಿದೆ ಎಂದು ವಸತಿ ಸಚವ ಸೋಮಣ್ಣ ಹೇಳಿದ್ದಾರೆ. 

ಇನ್ನು ಶಾಲೆಗಳ ಸ್ಥಿತಿ ದೇಗುಲವೇ ವಾಸ, ಬಯಲಲ್ಲೇ ಸ್ನಾನ ಮಾಡುವ ಸ್ಥಿತಿ ಇದೆ, ಬೆಳಗಾವಿಯಲ್ಲಿ ಶೌಚಕ್ಕೆ‌ ಕತ್ತಲಾಗುವುದನ್ನು ಕಾಯಬೇಕಾದ ಪರಿಸ್ಥಿತಿ ಇದ್ದು, ಆರು ತಿಂಗಳಾದರೂ ಸರ್ಕಾರದ ಪರಿಹಾರ ಸಿಗದೆ ಬೆಳಗಾವಿ ಜನ ಕಾಯುತ್ತಿದ್ದಾರೆ. ಅಂಕೋಲದ‌ ಡೊಂಗ್ರಿ ಗ್ರಾಮದ ತೂಗು ಸೇತುವೆ ಹಾಳಾಗಿದೆ ಆದರೆ ದುರಸ್ತಿ ಮಾಡಿಲ್ಲ, ಇವತ್ತೂ ಜನ ದೋಣಿಗಳಲ್ಲಿ ಸಂಚಾರ ಮಾಡಬೇಕಿದೆ ಮಕ್ಕಳು‌ ಶಾಲೆಗೆ ಹೋಗಲು ಆಗುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು.

ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ ಸರ್ಕಾರದಿಂದಲೇ ಹೊಸದಾಗಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪನೆ ಮಾಡಬೇಕು, ಪಾಂಡವಪುರ ಮತ್ತು ,ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಲು ಕೊಡಲು ವಿರೋಧ ಇಲ್ಲ,ಆದರೆ ಮೈ ಶುಗರ್ ಗೆ ರೈತರ ವಿರೋಧ ಇದೆ, ಸರ್ಕಾರಿ ಕಾರ್ಖಾನೆಯಲ್ಲಿ ರೈತರ ಷೇರು ಇದ್ದು, ಹಾಗಾಗಿ ಹೊಸ ಕಾರ್ಖಾನೆ ಸ್ಥಾಪಿಸಲು ಮುಂದಾಗುವ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಮಾಡಬೇಕು ಅದರ ಬದಲು ಖಾಸಗೀಕರಣ ಸಲ್ಲದು ಎಂದರು.

ಆದರೆ ಇದನ್ನು ತಳ್ಳಿಹಾಕಿದ ಸಚಿವ ಶಿವರಾಮ್ ಹೆಬ್ಬಾರ್, ಈಗಾಗಲೇ 176 ಸಿಬ್ಬಂದಿ ವಿಆರ್‌ಎಸ್ ಪಡೆದಿದ್ದಾರೆ. 70 ಜನ ಮಾತ್ರ ಬಾಕಿ ಇದ್ದಾರೆ. ಸಿಬ್ಬಂದಿ ಇಲ್ಲ, ಹಣ ನೀಡಿ‌ ಪುನರ್‌ ಜೀವನ ಮಾಡಲು‌ ಸಾಧ್ಯವಾಗಿಲ್ಲ. ಹಾಗಾಗಿ ರೈತರ ನೆರವಿಗಾಗಿಯೇ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಮಂಡ್ಯದ ಮೈ‌ಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com