ರಾಜ್ಯದಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ, ಆದರೂ ಮುಂಜಾಗೃತಾ ಕ್ರಮ: ಸುಧಾಕರ್

ರಾಜ್ಯದಲ್ಲಿ ಇದುವರೆಗೆ ಕೊರೋನಾ ಸೋಂಕಿನ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಸೋಂಕಿನ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಆದರೆ ಮುಂಜಾಗೃತಾ......
ಸುಧಾಕರ್
ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಕೊರೋನಾ ಸೋಂಕಿನ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಸೋಂಕಿನ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಆದರೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸದಸ್ಯರು ಕೊರೋನಾ ಸೋಂಕಿನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಲ್ಲಾ ರಾಜ್ಯಗಳಿಗಿಂತ ಮೊದಲೇ ಅಂದರೆ ಜನವರಿ 20ರಿಂದಲೆ ನಾವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದು ವಿದೇಶದಿಂದ ಬರುವವರನ್ನು ತಪಾಸಣೆ ಮಾಡುತ್ತಿದ್ದೇವೆ. ಇದುವರೆಗೆ 87 ಸಾವಿರ ಜನರ ತಪಾಸಣೆ ಮಾಡಲಾಗಿದೆ. ರಾಜ್ಯದಲ್ಲಿ ಇದುವರೆಗೆ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇದು ನಾವು ತೆಗೆದುಕೊಂಡ ಮುಂಜಾಗೃತಾ ಕ್ರಮದ ಫಲವಾಗಿದೆ ಎಂದರು.

ಈ ಹಿಂದೆ ಕಂಡು ಬಂದ ಸಾರ್ಸ್ ಸೋಂಕು ಅತ್ಯಂತ ಭೀಕರವಾಗಿತ್ತು. ಸಾರ್ಸ್‌ನಲ್ಲಿ ಸಾವಿನ ಪ್ರಮಾಣ ಶೇಕಡಾ 10ರಷ್ಟಿತ್ತು. ಅಂದರೆ 100 ಜನರಲ್ಲಿ ಸೋಂಕು ಕಂಡುಬಂದರೆ ಅವರಲ್ಲಿ 10 ಮಂದಿ ಸಾವನ್ನಪ್ಪುತ್ತಿದ್ದರು. ಆದರೆ ಕೊರೋನಾದಲ್ಲಿ ಸಾವಿನ ಅನುಪಾತ 3.4ರಿಂದ 3.6ರಷ್ಟಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಕಟಿಸಿದೆ ಎಂದು ವಿವರಿಸಿದರು.

ಎಲ್ಲರೂ ಮಾಸ್ಕ್‌ (ಮುಖಗವಸು) ಧರಿಸುವ ಅಗತ್ಯವಿಲ್ಲ.  ಈಗಾಗಲೇ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಸರ್ಕಾರ ಈ ಸೋಂಕನ್ನು ಗಂಭೀರವಾಗಿ ಪರಿಗಣಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೆಲವು ಮಾರ್ಗಸೂಚಿಗಳನ್ನು ಕೂಡ ಬಿಡಗುಡೆ ಮಾಡಿದೆ ಎಂದು ಸುಧಾಕರ್ ವಿವರಿಸಿದರು.

ಮೊದಲು ಚೈನಾದಲ್ಲಿ ಈ ಸೋಂಕು ಕಂಡು ಬಂದಿದ್ದು, ಇದೀಗ 87 ದೇಶಗಳಿಗೆ ಹರಡಿದೆ.  ದೇಶದಲ್ಲಿ 30ಕ್ಕೂ ಅಧಿಕ ಪ್ರಕರಣಗಳು ಪಾಸಿಟಿವ್‌ ಆಗಿವೆ. ಕರ್ನಾಟಕದಲ್ಲಿ ಒಂದು ಕೂಡ ದಾಖಲಾಗಿಲ್ಲ ಎಂದು ತಿಳಿಸಿದ ಅವರು, ತೀವ್ರ ಜ್ವರ, ಕೆಮ್ಮು, ನೆಗಡಿ ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಸೋಂಕು ಇದ್ದವರು ಮಾತ್ರ ಮಾಸ್ಕ್ ಧರಿಸಬೇಕು. ಸಾಮಾನ್ಯರು ಧರಿಸುವ ಅಗತ್ಯವಿಲ್ಲ. ಬಾಯಿಯ ಹನಿಯಿಂದ ಈ ಸೋಂಕು ಹರಡುತ್ತದೆ. ಕೈ ಕುಲುವುದರಿಂದ ಕೈಯಲ್ಲಿರುವ ಬೆವರಿನ ಮೂಲಕವೂ ಹರಡಬಹುದು. ಆದ್ದರಿಂದ ಭಾರತೀಯ ಸಂಪ್ರದಾಯವಾದ ನಮಸ್ತೆ ಮಾಡುವುದು ಉತ್ತಮ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಮ್ಮನ್ನು ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಕರೆದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಸೋಂಕನ್ನು ತಡೆಗಟ್ಟಲು ಬೇಕಾದ ಎಲ್ಲಾ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದಕ್ಕೆ ಅನುದಾನದ ಕೊರತೆ ಇಲ್ಲ. ಎಷ್ಟು ಬೇಕಾದರೂ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ನಾವು ಕೂಡ ಅಗತ್ಯ ಕ್ರಮಕೈಗೊಂಡಿದ್ದೇವೆ ಎಂದು ಸುಧಾಕರ್ ತಿಳಿಸಿದರು.

ಗ್ರಾಮಾಂತರ ಭಾಗದಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ಜನ್‌ಗಳು, ಪ್ರಾಥಮಿಕ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರು ಕೂಡ ಇರುತ್ತಾರೆ ಎಂದ ಅವರು, ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗೃತೆ ಅತ್ಯವಶ್ಯಕ ಎಂದರು.

ಎನ್‌-95 ಮಾಸ್ಕ್‌ ಅನ್ನು ಸೋಂಕು ಇದ್ದವರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಬೇಕು. ಮಾಸ್ಕ್‌ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಆರು ತಿಂಗಳಿಗೆ ಬೇಕಾಗುವಷ್ಟು ಶೇಖರಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಸೋಂಕು ಇರುವ ವ್ಯಕ್ತಿಯ ರಕ್ತ ಪರೀಕ್ಷೆಯನ್ನು ಎಲ್ಲಾ ಪ್ರಯೋಗಾಲಯಗಳಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ಎನ್‌ಎಬಿಎಲ್‌ ಅಕ್ರಿಡಿಯೇಷನ್ ಅಗತ್ಯವಿದೆ. ಇಂತಹ ಸೌಲಭ್ಯ ನಿಮ್ಹಾನ್ಸ್‌, ವಿಕ್ಟೋರಿಯಾ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಮಾತ್ರ ಇದೆ. ಮುಂದಿನ ದಿನಗಳಲ್ಲಿ ಹಾಸನ, ಮೈಸೂರು, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ ಸೇರಿ ರಾಜ್ಯದ 10-15 ಸ್ಥಳಗಳಲ್ಲಿ ಇಂತಹ ಪ್ರಯೋಗಾಲಯ ತೆರೆಯಲು ಕ್ರಮಕೈಗೊಳ್ಳಲಾಗಿದೆ. ಮುಂಜಾಗೃತಾ ಕ್ರಮವಾಗಿ ಇಂದಿನಿಂದ ಪ್ರೀ ನರ್ಸರಿ, ನರ್ಸರಿ ಶಾಲೆಗಳ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಮತ್ತು ಹಿರಿಯ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆ ಇರುವುದರಿಂದ ಅವರು ಜಾಗೃತೆ ವಹಿಸುವುದು ಅಗತ್ಯ ಎಂದು ಸ್ವತಃ ವೈದ್ಯರೂ ಆಗಿರುವ ಸಚಿವರು ತಿಳಿಸಿದರು.

ರಾಜ್ಯದಲ್ಲಿ ಮುಂಜಾಗೃತಾ ಕ್ರಮವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ 3000ಕ್ಕೂ ಹೆಚ್ಚು ಬೆಡ್‌ಗಳನ್ನು ಪ್ರತ್ಯೇಕಗೊಳಿಸಿಡಲಾಗಿದೆ. ಸೇನೆಯ ಕಮಾಂಡ್ ಆಸ್ಪತ್ರೆಗಳು ಹಾಗೂ ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಶಂಕಿತ ಸೋಂಕಿತನ ಮೇಲೆ 14 ದಿನಗಳ ಕಾಲ ನಿಗಾ ಇಡಬೇಕು. ಆದರೂ ನಾವು ಅದನ್ನು ವಿಸ್ತರಿಸಿ 28 ದಿನಗಳ ಕಾಲ ನಿಗಾ ಇಡುತ್ತಿದ್ದೇವೆ. ಪ್ರತಿದಿನ ಸಂಜೆ ಸ್ವತಃ ತಾವೇ ಸೋಂಕಿನ ಕುರಿತ ಮಾಧ್ಯಮಗಳಿಗೆ ಪ್ರತ್ಯೇಕ ಬುಲೆಟಿನ್‌ ಬಿಡುಗಡೆ ಮಾಡುತ್ತಿದ್ದೇನೆ. ಕೋರೋನಾ ಸೋಂಕಿನ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.

ಇದಕ್ಕೂ ಮೊದಲು ಬಿಜೆಪಿಯ ಭರತ್ ಶೆಟ್ಟಿ ಸೇರಿದಂತೆ ಹವು ಸದಸ್ಯರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಸೋಂಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com