ಕಾಫಿ ಡೆ ಮಾದರಿಯಲ್ಲಿ ನಂದಿನಿ ಕೆಫೆ ತೆರೆಯಲು ಕೆ.ಎಂ.ಎಫ್ ಚಿಂತನೆ
ಕಾಫಿ ಡೆ ಮಾದರಿಯಲ್ಲಿ ನಂದಿನಿ ಕೆಫೆ ತೆರೆಯಲು ಕೆ.ಎಂ.ಎಫ್ ಚಿಂತನೆ

ಕಾಫಿ ಡೆ ಮಾದರಿಯಲ್ಲಿ ನಂದಿನಿ ಕೆಫೆ ತೆರೆಯಲು ಕೆ.ಎಂ.ಎಫ್ ಚಿಂತನೆ

ಹಾಲು ಹಾಗೂ ಅದರ ಉತ್ಪನ್ನಗಳಿಂದ ತನ್ನದೇ ಆದ ಬ್ರ್ಯಾಂಡ್ ಮೌಲ್ಯ ಹೊಂದಿರುವ ಕೆಎಂಎಫ್ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಿ, ಅಮುಲ್ ನಂತೆ ದೇಶಾದ್ಯಂತ ಬ್ರ್ಯಾಂಡ್ ಸೃಷ್ಟಿಸಲು ಮುಂದಾಗಿದೆ. ಜಗತ್ತಿನಾದ್ಯಂತ ಇರುವ ಕಾಫಿ ಡೆ ಮಾದರಿಯಲ್ಲಿ ನಂದಿನ ಔಟ್‍ಲೆಟ್ ಗಳನ್ನು ತೆರೆಯಲು ತೀರ್ಮಾನಿಸಿದೆ. 

ಬೆಂಗಳೂರು: ಹಾಲು ಹಾಗೂ ಅದರ ಉತ್ಪನ್ನಗಳಿಂದ ತನ್ನದೇ ಆದ ಬ್ರ್ಯಾಂಡ್ ಮೌಲ್ಯ ಹೊಂದಿರುವ ಕೆಎಂಎಫ್ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಿ, ಅಮುಲ್ ನಂತೆ ದೇಶಾದ್ಯಂತ ಬ್ರ್ಯಾಂಡ್ ಸೃಷ್ಟಿಸಲು ಮುಂದಾಗಿದೆ. ಜಗತ್ತಿನಾದ್ಯಂತ ಇರುವ ಕಾಫಿ ಡೆ ಮಾದರಿಯಲ್ಲಿ ನಂದಿನ ಔಟ್‍ಲೆಟ್ ಗಳನ್ನು ತೆರೆಯಲು ತೀರ್ಮಾನಿಸಿದೆ.

ಈ ಕುರಿತಂತೆ ಕೆಎಂಎಫ್ ಆಡಳಿತ ಮಂಡಳಿ ಈಗಾಗಲೇ ಯೋಜನೆಯ ರೂಪು ರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದು, ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ರಾಜ್ಯಾದ್ಯಂತ ಕೆಎಂಎಫ್ ಮಾದರಿಯ ನಂದಿನಿ ಔಟ್‍ಲೆಟ್ ತೆರೆಯಲು ಕಾರ್ಯಪ್ರವೃತ್ತವಾಗಿದೆ.

ಕೆಎಂಎಫ್ ಉತ್ಪನ್ನಗಳಿಗೆ ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ, ನಂದಿನ ಹಾಲು ಸೇರಿದಂತೆ ಕೆಎಂಎಫ್‍ನ ಸುಮಾರು ನೂರು ಉತ್ಪನ್ನಗಳನ್ನು ಹೆಚ್ಚಾಗಿ ಮಧ್ಯಮ ವರ್ಗದ ಜನರು ಉಪಯೋಗಿಸುತ್ತಿದ್ದು, ಶ್ರೀಮಂತ ವರ್ಗದ ಜನರಿಗೆ ನಂದಿನಿ ಉತ್ಪನ್ನಗಳ ಬಗ್ಗೆ ಒಂದು ರೀತಿಯ ಕೀಳರಿಮೆ ಇದೆ ಎಂಬ ಅಂಶವನ್ನು ಕೆಎಂಎಫ್ ಆಡಳಿತ ಮಂಡಳಿ ಪತ್ತೆ ಹಚ್ಚಿದೆ.

ನೇರವಾಗಿ ರೈತರಿಂದಲೇ ಹಾಲು ಸಂಗ್ರಹಿಸಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರೂ, ನಂದಿನಿ ಉತ್ಪನ್ನಗಳ ಬಗ್ಗೆ ಶ್ರೀಮಂತ ವರ್ಗವನ್ನು ಸೆಳೆಯಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಕೆಎಂಎಫ್ ಮೂಲಕ ಸ್ಥಾಪನೆಯಾಗಿರುವ ನಂದಿನಿ ಔಟ್‍ಲೆಟ್‍ಗಳ ಗುಣಮಟ್ಟ ಕಡಿಮೆ ಇದ್ದು, ಆಕರ್ಷಣೆ ಇಲ್ಲದಿರುವುದು ಪ್ರಮುಖ ಕಾರಣ ಎನ್ನಲಾಗಿದೆ.

ನಂದಿನಿ ಕೆಫೆ: ಸಾಮಾನ್ಯ ವರ್ಗದಿಂದ ಹಿಡಿದು ಎಲ್ಲ ವರ್ಗದವರಿಗೂ ಕೆಎಂಎಫ್ ಉತ್ಪನ್ನಗಳು ಲಭ್ಯವಾಗುವಂತೆ ಕಾಫಿ ಡೆ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 'ನಂದಿನಿ ಕೆಫೆ` ತೆರೆಯಲು ನಿರ್ಧರಿಸಲಾಗಿದೆ.

ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರಿನ ಜಯ ನಗರದಲ್ಲಿ ನಂದಿನಿ ಕೆಫೆ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ಕನಿಷ್ಠ 25 ರಿಂದ 30 ನಂದಿನಿ ಕೆಫೆಗಳನ್ನು ತೆರೆಯಲು ಕೆಎಂಎಫ್ ನಿರ್ಧರಿಸಿದೆ. ಇದರೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಔಟ್ ಲೆಟ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಈಗ ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಕೆಎಂಎಫ್ ನಂದಿನಿ ಹಾಲು ಮಾರಾಟ ಕೇಂದ್ರಗಳಿವೆ. ಮುಂದಿನ ಐದು ವರ್ಷದಲ್ಲಿ ಎಲ್ಲ ಕೇಂದ್ರಗಳನ್ನು ಕಾಫಿ ಡೆ ಮಾದರಿಯಲ್ಲಿ ಅಭಿವೃದ್ಧಿ ಪಡೆಸಿ, ನಂದಿನಿ ಉತ್ಪನ್ನ ಮಾರಾಟ ಮಾಡುವ ಸಿಬ್ಬಂದಿಗೂ ಆಕರ್ಷಣೀಯ ಯುನಿಫಾರ್ಮ್, ಕಾಫಿ ಡೆ ಮಾದರಿಯಲ್ಲಿ ಅಲ್ಲಿಗೆ ಬರುವ ಜನರಿಗೆ ಕುಳಿತು ಕೊಳ್ಳಲು ವ್ಯವಸ್ಥೆ, ವೈಫೈ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ವಿಮಾನ ನಿಲ್ದಾಣಗಳು, ಮಾಲ್‍ಗಳಲ್ಲಿ ನಂದಿನ ಕೆಫೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಉತ್ಪಾದನೆ ಹೆಚ್ಚಳ ಗುರಿ: ರಾಜ್ಯದಲ್ಲಿ ಸದ್ಯ ಪ್ರತಿ ದಿನ 70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಉತ್ಪನ್ನಗಳಿಂದ ಪ್ರತಿ ವರ್ಷ ಸುಮಾರು 15 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ಆದರೆ, ಉತ್ತಮ ಗುಣಮಟ್ಟ ಹಾಗೂ ಆರೋಗ್ಯಯುತ ಉತ್ಪನ್ನಗಳನ್ನು ತಯಾರಿಸಿದರೂ, ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗದ ಕಾರಣ ನಂದಿನಿ ಉತ್ಪನ್ನಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮುಲ್ ರೀತಿ ಬ್ರ್ಯಾಂಡ್ ಸೃಷ್ಠಿಸಲು ಸಾಧ್ಯವಾಗಿಲ್ಲ.

ಹೀಗಾಗಿ ಹೊಸ ಮಾದರಿಯಲ್ಲಿ ಬ್ರ್ಯಾಂಡ್ ಸೃಷ್ಠಿಸಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಕೆಎಂಎಫ್ ಆಡಳಿತ ಮಂಡಳಿ ನಿರ್ಧರಿಸಿದ್ದು, ಆ ಮೂಲಕ ಮುಂದಿನ ಐದು ವರ್ಷದಲ್ಲಿ ಮಂಡಳಿಯ ವಾರ್ಷಿಕ ವಹಿವಾಟು ಸುಮಾರು 35 ಸಾವಿರ ಕೋಟಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬರಲಿದೆ ನಂದಿನಿ ಚಾಕೊಲೇಟ್:
ಕೆಎಂಎಫ್ ಹಾಲು, ಮೊಸರು, ಬೆಣ್ಣೆ, ಬಿಸ್ಕೇಟ್, ಕೇಕ್ ಸೇರಿದಂತೆ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುವ ಹಾಗೂ ಮಕ್ಕಳು ಮತ್ತು ಹೆಣ್ಣುಮಕ್ಕಳನ್ನು ಆಕರ್ಷಿಸುವ ಚಾಕೋಲೇಟ್ ತಯಾರಿಸಲು ಮುಂದಾಗಿದೆ.

ಖಾಸಗಿ ಕಂಪನಿಗಳು ಉತ್ಪಾದಿಸುವ ಕಿಟ್‍ಕ್ಯಾಟ್, ಕ್ಯಾಡಬರೀಸ್, ಡೈರಿಮಿಲ್ಕ್ ನಂತೆ ನಂದಿನಿ ಚಾಕೊಲೇಟ್ ಉತ್ಪಾದಿಸಲು ಕೆಎಂಎಫ್ ನಿರ್ಧರಿಸಿದ್ದು, ಈ ಬಗ್ಗೆ ಈಗಾಗಲೇ ಟೆಂಡರ್ ಕರೆದಿದೆ. ಶೀಘ್ರವೇ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡ್ ನೇಮ್‍ನಲ್ಲಿ ಚಾಕೊಲೇಟ್ ಬಿಡುಗಡೆ ಮಾಡಲು ನಿರ್ಧರಿಸಿದೆ.

ಕೆಎಂಎಫ್ ಉತ್ಪನ್ನಗಳಿಗೆ ರಾಷ್ಟ್ರ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಲು ಕಾಫಿ ಡೆ ಮಾದರಿಯಲ್ಲಿ ಔಟ್‍ಲೆಟ್‍ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ನಂದಿನಿಗೆ ರಾಷ್ಟ್ರ ಮಟ್ಟದಲ್ಲಿ ಬ್ರ್ಯಾಂಡ್ ಸೃಷ್ಟಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಒಂದು ವರ್ಷದಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಹೊಸ ಮಾದರಿ ನಂದಿನಿ ಕೆಫೆಗಳನ್ನು ತೆರೆಯಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com