ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಡಿಕೆಶಿ, ಸಿದ್ದರಾಮಯ್ಯ

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಘಟನೆ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯಿತು.
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಡಿಕೆಶಿ, ಸಿದ್ದರಾಮಯ್ಯ
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಡಿಕೆಶಿ, ಸಿದ್ದರಾಮಯ್ಯ

ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಘಟನೆ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯಿತು.

ಕೆಪಿಸಿಸಿ ಅಧ್ಯಕ್ಷ, ಪ್ರತಿಪಕ್ಷ ನಾಯಕರ ಮುಂದುವರಿಕೆ ಆದೇಶ ಏಐಸಿಸಿಯಿಂದ ಹೊರಬೀಳುತ್ತಿದ್ದಂತೆ ವಿಧಾನಸೌಧದ ಮೊಗಸಾಲೆಯಲ್ಲೇ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೂವು ನೀಡಿ ಶುಭ ಕೋರಿದರು.

ಇದಕ್ಕೆ ಪ್ರತಿಯಾಗಿ ನಾನು ಈಗಾಗಲೇ ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಈ ಹುದ್ದೆಯನ್ನು ಮುಂದುವರೆಸಿದ್ದಾರೆ ಅಷ್ಟೆ, ನಾನೇ ನಿನಗೆ ಶುಭಾಶಯ ಹೇಳಬೇಕಯ್ಯ ಎನ್ನುತ್ತಾ ಅಭಿನಂದಿಸಿದರು. ನಂತರ ಪರಸ್ಪರ ಶುಭ ಕೋರಿ ಇಬ್ಬರೂ ಸದನದ ಒಳಗೆ ಪ್ರವೇಶಿಸಿದರು.

ಸದನ ಮುಂದೂಡಿಕೆಯಾದ ನಂತರ ಮೊಗಸಾಲೆಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ರಮೇಶ್ ಕುಮಾರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ಹಿರಿಯ ನಾಯಕರು ಡಿ.ಕೆ ಶಿವಕುಮಾರ್ ಗೆ ಶುಭ ಕೋರಿ ಕಿವಿ ಮಾತು ಹೇಳಿದರು. 

ನಂತರ ಹಿರಿಯ ನಾಯಕರನ್ನೊಳಗೊಂಡಂತೆ ಮೊಗಸಾಲೆಯಲ್ಲೇ ಸಣ್ಣ ಸಭೆ ನಡೆಸಲಾಯಿತು. ಅಲ್ಲಿಗೆ ಬರುತ್ತಿದ್ದ ನಾಯಕರು, ಶಾಸಕರು, ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದರು. ವಿಧಾನ ಪರಿಷತ್ ಪ್ರತಿ ಪಕ್ಷದ ನೂತನ ವಿಪ್ ನಾರಾಯಣಸ್ವಾಮಿ ಕೂಡ ಆಗಮಿಸಿ ಶಿವಕುಮಾರ್ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು, ಸಿದ್ದರಾಮಯ್ಯ ಅವರಿಗೂ ಹೂಗುಚ್ಛ ನೀಡಿ ಶುಭ ಕೋರಿದರು.

ಗಮನ ಸೆಳದ ರೇಣುಕಾಚಾರ್ಯ: ಇನ್ನು ವಿರೋಧ ಪಕ್ಷದ ಮೊಗಸಾಲೆಯಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಡಿ.ಕೆ ಶಿವಕುಮಾರ್ ಅವರಿಗೆ ಶುಭ ಕೋರಿದರು. ಹೊನ್ನಾಳಿಯ ಹಿರೇಮಲ್ಮಠಕ್ಕೆ ಬಂದಾಗಲೇ ನಿಮಗೆ ಶುಭ ಸುದ್ದಿ ಬರಲಿದೆ ಎಂದು ಹೇಳಿದ್ದೆ ಅದು ನಿಜವಾಗಿದೆ ಇಂದು ನಿಮಗೆ ಶುಭ ಸುದ್ದಿ ಬಂದಿದೆ ಎನ್ನುತ್ತಾ ಶುಭ ಕೋರಿದರು.

ಎಂಬಿ ಪಾಟೀಲ್ ಮೌನ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಆಗಿದ್ದ ಮಾಜಿ ಸಚಿವ ಎಂಬಿ ಪಾಟೀಲ್ ಮೊಗಸಾಲೆಯಲ್ಲಿ ಮೌನವಾಗಿ ಕುಳಿತಿದ್ದರು. ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಕೋರಿದ್ದು ಬಿಟ್ಟರೆ ಅಲ್ಲಿ ಕಾಂಗ್ರೆಸ್ ಮುಖಂಡರು ನಡೆಸುತ್ತಿದ್ದ ಮಾತುಕತೆ ಯಿಂದ ಅವರು ದೂರ ಉಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com