ಬಂಡಿಪುರ: ಮೋಜಿಗಾಗಿ ಆನೆಗೆ ಅರಣ್ಯ ಸಿಬ್ಬಂದಿಯಿಂದ ಗುಂಡು; ಭಾರೀ ಆಕ್ರೋಶ

ಕಾಡಿನೊಳಗೆ ತೆರಳುತ್ತಿದ್ದ ಸಲಗದತ್ತ ಅರಣ್ಯ ಸಿಬ್ಬಂದಿಯೇ ಅಪ್ರಚೋದಿತವಾಗಿ ಗುಂಡು ಹಾರಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಡಿನೊಳಗೆ ತೆರಳುತ್ತಿದ್ದ ಸಲಗದತ್ತ ಅರಣ್ಯ ಸಿಬ್ಬಂದಿಯೇ ಅಪ್ರಚೋದಿತವಾಗಿ ಗುಂಡು ಹಾರಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಣಾ ಕ್ಷೇತ್ರದ ವ್ಯಾಪ್ತಿಯ ಅರಣ್ಯದಲ್ಲಿ 2020ರ ಮಾರ್ಚ್ 7 ರಂದು ಈ ದುರ್ಘಟನೆ ನಡೆದಿದೆ. ಕಾಡಾನೆಗಳು ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಗಳನ್ನು ಪ್ರವೇಶಿಸಿದಂತೆ ತಡೆಯಲು ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ಹಾಕಲಾಗಿದೆ. ಈ ಬೇಲಿಯೊಳಗೆ ಸಲಗ ಇದ್ದರೂ ಬೇಲಿಯ ಹೊರಗೆ ಪಹರೆಯಲ್ಲಿದ್ದ ಅರಣ್ಯ ಸಿಬ್ಬಂದಿ ಕೇಕೆ ಹಾಕಿ ಬೆದರಿಸುತ್ತಾ ನೇರವಾಗಿ ಅದರತ್ತ ಗುಂಡು ಹಾರಿಸಿದ್ದಾರೆ. ಈ ವೇಳೆ ತೀವ್ರ ಗಾಬರಿ – ಆತಂಕಗೊಂಡ ಸಲಗ ಅರಣ್ಯದೊಳಗೆ ಓಡಿ ಮರೆಯಾಗಿದೆ.

ಅದು ಮರೆಯಾಗುತ್ತಿದ್ದರೂ ಅದನ್ನು ಹಿಂಬಾಲಿಸುವ ರೀತಿಯಲ್ಲಿ ಬಂದೂಕು ಗುರಿ ಮಾಡಿ ಅರಣ್ಯ ಸಿಬ್ಬಂದಿ ವಾಹನ ವಾಹನ ಚಲಾಯಿಸಿದ್ದಾರೆ. ಇದೆಲ್ಲವೂ ಪಹರೆಯಲ್ಲಿದ್ದ ಅರಣ್ಯ ಸಿಬ್ಬಂದಿಯೋರ್ವ ಚಿತ್ರೀಕರಿಸಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಶೇರ್ ಮಾಡಲಾಗಿದೆ. ಈ ನಂತರ ವನ್ಯಪ್ರಾಣಿಪ್ರಿಯ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಗೂ ಹ್ಯಾಶ್ ಟ್ಯಾಗ್ ಜೊತೆಗೆ ಟ್ವೀಟ್ ಮಾಡಿ ಖಂಡಿಸಿದ್ದಾರೆ.

ಈ ನಂತರ ಬಂಡೀಪುರ ಹುಲಿ ಸಂರಕ್ಷಣಾ ಕ್ಷೇತ್ರದ ನಿರ್ದೇಶಕ ಟಿ. ಬಾಲಚಂದ್ರ ಪ್ರತಿಕ್ರಿಯಿಸಿದ್ದಾರೆ. “ಅರಣ್ಯ ಇಲಾಖೆಯ ಹಂಗಾಮಿ ನೌಕರ ರಹೀಮ್ ಆನೆಯತ್ತ ಅಕ್ರಮವಾಗಿ ಗುಂಡು ಹಾರಿಸಿದ್ದು ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಇಲಾಖೆಯ ಖಾಯಂ ನೌಕರ ಉಮೇಶ್ ವಿರುದ್ಧ ಆಂತರಿಕ ತನಿಖೆ ನಡೆಸಲಾಗುತ್ತಿದ್ದು ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ವನ್ಯಜೀವಿ ಛಾಯಾಗ್ರಾಹಕ ಶಿವಾನಂದ ಮೆರನಾಳ್, ಅಧ್ಯಯನಕಾರ ವಿಜಯ್ ನಿಶಾಂತ್ ಈ ದುರ್ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ವನ್ಯಮೃಗಗಳ ಸಂರಕ್ಷಣೆ ಮಾಡಬೇಕಾದವರೆ ಹೀಗೆ ಮಾಡಿದರೆ ಅವುಗಳನ್ನು ರಕ್ಷಿಸುವವರು ಯಾರು ? ಎಂದು ಪ್ರಶ್ನೆ ಮಾಡಿದ್ದಾರೆ.

ಆನೆಯನ್ನು ಬೆದರಿಸಿ ಕಾಡಿನೊಳಗೆ ಅಟ್ಟುವುದಾಗಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ನೇರವಾಗಿ ಸಲಗದತ್ತ ಫೈರ್ ಮಾಡಲಾಗಿದೆ ಎಂದು ರುದ್ರಪ್ರತಾಪ್ ಸಿಂಗ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ನೆಟ್ಟಿಗರು ಆನೆಯ ತಲೆಗೆ ಗುಂಡಿನ ಚರೆಗಳು ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಮಹಾಲಕ್ಷ್ಮಿ ಪಾರ್ಥಸಾರಥಿ ಎಂಬುವರು ತಮ್ಮ ಸಿಟ್ಟು ಹೊರ ಹಾಕಿದ್ದರೆ ಅಭಿಷೇಕ್ ಎಂ ಎಂಬುವರು ಇವರು ರಕ್ಷಕರು –ರಾಕ್ಷಸರೋ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕುರಿತಂತೆ ಜನರ ಆಕ್ರೋಶ ಹೆಚ್ಚುತ್ತಿದ್ದು, ಆನೆಗೆ ಗುಂಡು ತಗುಲಿದೆಯೇ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com