ನವಿ ಬೆಂಗಳೂರು ನಿರ್ಮಾಣ ಕುರಿತು ಸಮಾಲೋಚನೆ- ಜಗದೀಶ್ ಶೆಟ್ಟರ್ 

ಬೆಂಗಳೂರಿನಿಂದ 40 ಕಿ.ಮೀ.ದೂರದಲ್ಲಿ ನವಿ ಬೆಂಗಳೂರು ಸ್ಥಾಪಿಸುವ ಅಗತ್ಯವಿದೆ. ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಬೆಂಗಳೂರಿನಿಂದ 40 ಕಿ.ಮೀ.ದೂರದಲ್ಲಿ ನವಿ ಬೆಂಗಳೂರು ಸ್ಥಾಪಿಸುವ ಅಗತ್ಯವಿದೆ. ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ

ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ,  ಈ ವಿಷಯ ತಿಳಿಸಿದ ಶೆಟ್ಟರ್, ಮುಂಬೈ ಬೆಳೆದಂತೆ ಅದನ್ನು ನಿಯಂತ್ರಿಸಲು ನವಿ ಮುಂಬೈಯನ್ನು ಸ್ಥಾಪಿಸಲಾಯಿತು. ಅದೇ ರೀತಿಯಲ್ಲಿ ಬೆಂಗಳೂರಿನಿಂದ 40 ಕಿ.ಮೀ.ದೂರದಲ್ಲಿ ನವಿ ಬೆಂಗಳೂರು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.

ಬೆಂಗಳೂರು ಕೇಂದ್ರಿತ ಕೈಗಾರಿಕೆಗಳನ್ನು 2ನೇ ಮತ್ತು ಮೂರನೇ ಹಂತಗಳ ನಗರಗಳಿಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ. ಇದೇ ಉದ್ದೇಶದಿಂದ ಫೆಬ್ರವರಿ 14ರಂದು ಹುಬ್ಬಳ್ಳಿಯಲ್ಲಿ  ಇನ್ವೆನ್ಟ್‌ ಹುಬ್ಬಳ್ಳಿ ಸಮಾವೇಶ ನಡೆಸಲಾಯಿತು. ಇದು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, 73 ಸಾವಿರ ಕೋಟಿ ರೂ. ಹೂಡಿಕೆ ಘೋಷಣೆಯಾಗಿದೆ. ಇಂತಹ ಸಮ್ಮೇಳನಗಳನ್ನು ಇತರ ನಗರಗಳಲ್ಲೂ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. 

ಮೈಸೂರು, ಮಂಗಳೂರು, ಕಲಬುರಗಿ, ಬಿಜಾಪುರ, ಬೆಳಗಾವಿ ಮುಂತಾದ ಕಡೆಗಳಲ್ಲಿಯೂ ಇದೇ ರೀತಿಯ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. 2019-24ರ ಕೈಗಾರಿಕಾ ನೀತಿಯ ಕರಡು ಸಿದ್ಧಗೊಂಡಿದ್ದು, ಈ ನೀತಿಯಲ್ಲಿ 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಶೇಕಡಾ 80ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡುವಂತೆ ಮಾಡಲು ಇನ್ನಷ್ಟು ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಿಸಿದ್ದು, ಈ ಬಗ್ಗೆ ಇನ್ನೊಮ್ಮೆ ಪರಿಶೀಲಿಸಲು ಮಂಡಳಿಯನ್ನು ಕೋರಲಾಗಿದೆ. ಮುಖ್ಯಮಂತ್ರಿಯವರು ಕೂಡ ಈ ಬಗ್ಗೆ ಪರಿಶೀಲಿಸಲು ಸೂಚಿಸಿದ್ದಾರೆ 
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿಯಾದರೆ ಇಡೀ ಕಾರವಾರ ಜಿಲ್ಲೆ ಮತ್ತು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಾಗಲಿದೆ ಎಂದರು

ಕಾರವಾರ ಮತ್ತು ಬೇಲಿಕೇರಿ ಬಂದರು ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಕಾರವಾರ ಬಂದರು ಅಭಿವೃದ್ಧಿ ಪ್ರಗತಿಯಲ್ಲಿದೆ. ದಾವೋಸ್‌ಗೆ ಭೇಟಿ ನೀಡಿದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೂಡ ಪಾಲ್ಗೊಂಡಿದ್ದರು. ಅಲ್ಲಿ ಈ ಎರಡು ಬಂದರುಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆ. ಬೇಲಿಕೇರಿ ಬಂದರು ಅಭಿವೃದ್ಧಿಗೆ ಡಿಪಿಆರ್ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com