ಅಕ್ರಮ ಗಣಿಗಾರಿಕೆ: ಮಂಡ್ಯ ಜಿಪಂ ಸದಸ್ಯನಿಗೆ ೧೧ ಕೋಟಿ ರೂ. ದಂಡ ವಿಧಿಸಿದ ಗಣಿ ಇಲಾಖೆ

ಅನಧಿಕೃತ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡಿರುವ ಆರೋಪದ ಮೇಲೆ ಮಂಡ್ಯ ಜಿಲ್ಲಾಪಂಚಾಯಿತಿ ಸದಸ್ಯರೊಬ್ಬರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುಮಾರು ೧೧ ಕೋಟಿಗೂ ಹೆಚ್ಚುದಂಡ ವಿಧಿಸಿದೆ.!
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಅನಧಿಕೃತ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡಿರುವ ಆರೋಪದ ಮೇಲೆ ಮಂಡ್ಯ ಜಿಲ್ಲಾಪಂಚಾಯಿತಿ ಸದಸ್ಯರೊಬ್ಬರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುಮಾರು ೧೧ ಕೋಟಿಗೂ ಹೆಚ್ಚುದಂಡ ವಿಧಿಸಿದೆ.!    

ಮಂಡ್ಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಶೀಳನೆರೆ ಕ್ಷೇತ್ರದ ಸದಸ್ಯ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರು ಆಗಿರುವ ಕೆ ಎಂ ಎಫ್ ನಿರ್ದೇಶಕ ಎಚ್.ಟಿ ಮಂಜು ಅವರಿಗೆ ಅನಧಿಕೃತ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡಿದ ಆರೋಪದ ಮೇಲೆ ಮಂಡ್ಯವಿಭಾಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ರವರು. ೧೧ ಕೋಟಿ ಐದು ಲಕ್ಷದ ೪೬ ಸಾವಿರದ ೨೦೫ ರೂಪಾಯಿ ದಂಡವನ್ನು ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ. 

ಕೆಆರ್‌ಪೇಟೆ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮಗಣಿಗಾರಿಕೆ, ಕಲ್ಲು ಸಾಗಾಣಿಕೆ ಕುರಿತಂತೆ ಸಾರ್ವಜನಿಕರು ಮತ್ತು ಕೆ.ಆರ್.ರವೀಂದ್ರ ಅವರು ನೀಡಿದ್ದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಮಂಡ್ಯವಿಭಾಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತನಿಖಾ ತಂಡ, ದಾಳಿಯ ವೇಳೆ ಕೆ.ಆರ್.ಪೇಟೆ ತಾಲೂಕು ಬೊಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ ೪೬, ಹರಳಹಳ್ಳಿ ಗ್ರಾಮದ ಸರ್ವೆ ನಂಬರ್ ೨೨೨, ಶಿವಪುರ ಗ್ರಾಮದ ಸರ್ವೆ ನಂಬರ್ ೧೦, ಬೊಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ ೪೬ನ ಅರಣ್ಯಪ್ರದೇಶಗಳಲ್ಲಿ ಎಚ್.ಟಿ.ಮಂಜುನಾಥ್ ಅವರು ಅನಧಿಕೃತವಾಗಿ ನಡೆಸುತ್ತಿದ್ದ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಷ್ಟು ದೊಡ್ಡಮೊತ್ತದ ದಂಡವನ್ನು ವಿಧಿಸಿರುವುದರ ಜೊತೆಗೆ ಕಾರಣ ಕೇಳಿ ನೊಟೀಸ್ಸನ್ನೂ ಸಹ ಜಾರಿ ಮಾಡಲಾಗಿದೆ.

ಕೆ ಆರ್ ಪೇಟೆ ತಾಲೂಕು ಬೊಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ ೪೬, ಅರಣ್ಯಪ್ರದೇಶದಲ್ಲಿ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಸಾಗಾಣಿಕೆ ಮಾಡಿರುವುದಕ್ಕೆ ೨೦೧೯ ಜೂನ್. ೪ ರಂದು ೧೦ ಲಕ್ಷದ ೭ ಸಾವಿರದ ೫೦ ರೂಪಾಯಿ ದಂಡ,  ಹರಳಹಳ್ಳಿ ಗ್ರಾಮದ ಸರ್ವೆ ನಂಬರ್ ೨೨೨ರ ಪ್ರದೇಶದಲ್ಲಿ, ಅನಧಿಕೃತವಾಗಿ ಕಟ್ಟಡದ ಕಲ್ಲು ಸಂಗ್ರಹಿಸಿರುವ ಬಗ್ಗೆ ೨೦೧೯ರ ಆಗಸ್ಟ್ ೨೬ ರಂದು ೪೯ ಲಕ್ಷದ ೮೮ ಸಾವಿರದ ೪೦೦ ರೂಪಾಯಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ. 

ಶಿವಪುರ ಗ್ರಾಮದ ಸರ್ವೆ ನಂಬರ್ ೧೦ ರ ಸರ್ಕಾರಿ ಗೋಮಾಳ ದಲ್ಲಿ ಹಾಗೂ ಬೊಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ ೪೬ ಅರಣ್ಯಪ್ರದೇಶದಲ್ಲಿ, ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಬಗ್ಗೆ ೨೦೧೮-೧೯ ನೇ ಸಾಲಿನ ಲೆಕ್ಕಪರಿಶೋಧನೆಯ ರಾಜಧನ ಬಾಕಿ ದಿನಾಂಕ ೩೧.೩.೨೦೧೯ ರವರೆಗೆ, ಕಲ್ಲು ಗಣಿ ಗುತ್ತಿಗೆ ಸಂಖ್ಯೆ೧೦೬೧. ರಲ್ಲಿ ೧೦.೦೧೪. ರೂಪಾಯಿ, ಕಲ್ಲು ಗಣಿ ಗುತ್ತಿಗೆ ಸಂಖ್ಯೆ ೮೯೯ ರಲ್ಲಿ ೧.೬೪.೬೯೧ ರೂಪಾಯಿ, ಕಲ್ಲು ಗಣಿ ಗುತ್ತಿಗೆ ಸಂಖ್ಯೆ ೮೯೮ ರಲ್ಲಿ ೮.೭೮.೯೫೦ ರೂಪಾಯಿ, ರಾಜಧನ ಅಥವಾ ದಂಡ ಪಾವತಿಸದೇ ಇರುವ ಬಗ್ಗೆ ೨೦೧೯ ರ ನವಂಬರ್ ೧೪ .ರಂದು  ಎಚ್.ಟಿ.ಮಂಜು ಅವರಿಗೆ ಹಿಂಬರಹ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.

ಬೊಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ ೪೬ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ಹಾಗೂ ಗುತ್ತಿಗೆ ಹೊರಭಾಗದಲ್ಲಿ ಅತಿಕ್ರಮಣ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿರುವ ಬಗ್ಗೆ ಗುತ್ತಿಗೆ ಪ್ರದೇಶದಲ್ಲಿ ೧೦೪೭೫೬ ಮೆಟ್ರಿಕ್ ಟನ್ ಗಳಿಗೆ, ಮೂರು ಕೋಟಿ ೧೪ ಲಕ್ಷದ ೨೬ ಸಾವಿರದ ಎಂಟು ನೂರು ರೂಪಾಯಿ, ಮತ್ತು ಗುತ್ತಿಗೆಯ ಹೊರಭಾಗದಲ್ಲಿ ಅತಿಕ್ರಮಣ ಮಾಡಿರುವ ೨೧೫೪೦೨. ಮೆಟ್ರಿಕ್ ಟನ್ ಕಲ್ಲಿಗೆ ೬ ಕೋಟಿ ೪೬ ಲಕ್ಷದ ೨೦ ಸಾವಿರದ ಆರುನೂರು ರೂಪಾಯಿಗಳ ದಂಡವನ್ನು ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಶಿವಪುರ ಗ್ರಾಮದ ಸರ್ವೆ ನಂಬರ್ 10ರ ಗೋಮಾಳ ಪ್ರದೇಶದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸಿ ಹಾಗೂ ಗುತ್ತಿಗೆ ಹೊರ ಭಾಗದಲ್ಲಿ ಅತಿಕ್ರಮಣ ಮಾಡಿ ಕಲ್ಲುಗಣಿಗಾರಿಕೆ ನಡೆಸಿರುವುದಕ್ಕೆ ೬೪೯೭ ಮೆಟ್ರಿಕ್ ಟನ್ ಗಳಿಗೆ, ೧೯ ಲಕ್ಷದ ೪೯ ಸಾವಿರದ ನೂರು ರೂಪಾಯಿ, ಮತ್ತು ಗುತ್ತಿಗೆಯ ಹೊರಭಾಗದಲ್ಲಿ ಅತಿಕ್ರಮಣ ಮಾಡಿ ಸಾಗಿಸಿರುವ ೧೮೩೩೪ ಮೆಟ್ರಿಕ್ ಟನ್ ಗಳಿಗೆ ೫೫ ಲಕ್ಷದ ೨೦೦ ರೂಪಾಯಿಗಳ ದಂಡವನ್ನು ೨೦೨೦ರ ಜನವರಿ ೯ ರಂದು ನೋಟಿಸ್ ಜಾರಿ ಮಾಡಿದ್ದಾರೆ.

ಅಲ್ಲದೆ ಗಣಿ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಹೇಮಾವತಿ ನಾಲೆಯ ೨೦೦ ಮೀಟರ್ ವ್ಯಾಪ್ತಿಯೊಳಗೆ ಭಾರಿ ಸ್ಫೋಟಕಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸಿದ್ದು ಇದರಿಂದ ಹೇಮಾವತಿ ನಾಲೆಗೆ ಧಕ್ಕೆಯಾಗಿದ್ದು ಇದಕ್ಕೆ ಕ್ರಮಕೈಗೊಳ್ಳುವ ಸಂಬಂಧ ೨೦೨೦ ರ ಫೆ.೨೮ ರಂದು ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಎಚ್ ಟಿ. ಮಂಜು ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದುಕೊಂಡು, ಸರ್ಕಾರಿ ಜಾಗಗಳಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಬಗ್ಗೆ ಸಾಬೀತಾಗಿದ್ದು, ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಡ್ಯ ಜಿಲ್ಲೆ ಇವರು ವಿಧಿಸಿರುವ ದಂಡದ ಮೊತ್ತ, ೧೧ ಕೋಟಿ ೫ ಲಕ್ಷದ ೪೬ ಸಾವಿರದ ೨೦೫ ರೂಪಾಯಿಗಳನ್ನು, ಬಡ್ಡಿ ಸಮೇತ ವಸೂಲು ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿ ಸಿ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಹಾಗೂ ಅಪರ ಪೊಲೀಸ್ ಮಹಾನಿರ್ದೇಶಕರು ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ರವರಿಗೂ ಸಹ ಆರ್‌ಟಿಐ ಕಾರ್ಯಕರ್ತರ ರವೀಂದ್ರ ದೂರು ಸಲ್ಲಿಸಿದ್ದು,  ಎಚ್ ಟಿ  ಮಂಜುರವರ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜೆಡಿಎಸ್‌ ವಿರುದ್ದ ಬಂಡಾಯವೆದ್ದು ಬಿಜೆಪಿಯಿಂದ ಗೆದ್ದು ಇದೀಗ ಸಚಿವರಾಗಿರುವ ಕೆ.ಸಿ.ನಾರಾಯಣಗೌಡರ ವಿರುದ್ದ ಕಾರ್ಯಕರ್ತರಿಗೆ ಕಿರುಕುಳನೀಡಲಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಎಚ್.ಟಿ.ಮಂಜು ಅಕ್ರಮ ಕಲ್ಲುಗಣಿಗಾರಿಕೆ ನಡೆಸೇ ಇಲ್ಲಾ ಅಂತಾ ಸಮರ್ಥಿಸಿಕೊಂಡಿದ್ದರು. ಆದರೆ ಇದೀಗ ಗಣಿ ಮತ್ತು ಭೂಜ್ಞಾನ ಇಲಾಖೆಯೇ ಅಕ್ರಮಗಣಿಗಾರಿಕೆ ನಡೆಸಿರೋದಕ್ಕೆ ದಂಡ ವಿಧಿಸಿರುವುದು ಬಟಾ ಬಯಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಎಚ್.ಟಿ.ಮಂಜು ಅವರು ಅಕ್ರಮ ಕಲ್ಲು ಕ್ರಷರ್‌ಗಳಿಗೆ ದಂಡವಿಧಿಸಿ,ನೊಟೀಸ್ ನೀಡಿರುವುದು ನಿಜ,ಈಗಾಗಲೆ ದಂಡ ಕಟ್ಟೊದಕ್ಕೆ ಕಾಲಾವಕಾಶವನ್ನು ನೀಡಲಾಗಿದೆ, ಒಂದು ವೇಳೆ ನಿಗಧಿತ ಸಮಯದೊಳಗೆ ದಂಡ ಪಾವತಿಸದಿದ್ದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಪುಷ್ಪಲತಾ  ತಿಳಿಸಿದ್ದಾರೆ.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com