ಕೊರೋನಾ ಎಫೆಕ್ಟ್; ಮಂಡ್ಯ ಬಹುತೇಕ ಸ್ಥಬ್ದ.!

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮಂಡ್ಯದಲ್ಲಿ ಇಂದು  ಎಲ್ಲಾ ಚಿತ್ರಮಂದಿರಗಳು ಹಾಗೂ ಶಾಲಾ ಕಾಲೇಜುಗಳು ಬಂದ್ ಆಗಿದ್ದವು
ಮಂಡ್ಯ
ಮಂಡ್ಯ

ಮಂಡ್ಯ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮಂಡ್ಯದಲ್ಲಿ ಇಂದು  ಎಲ್ಲಾ ಚಿತ್ರಮಂದಿರಗಳು ಹಾಗೂ ಶಾಲಾ ಕಾಲೇಜುಗಳು ಬಂದ್ ಆಗಿದ್ದವು

ಸದಾ ಜನಜಂಗುಳಿಯಿಂದ  ತುಂಬಿರುತ್ತಿದ್ದ ಚಿತ್ರಮಂದಿರಗಳು ಬಂದ್ ಆದರೆ ಕಲ್ಯಾಣಮಂಟಪಗಳಲ್ಲೂ ಸಹ ಜನರಿಲ್ಲದೆ ಬಣಗುಡುತ್ತಿದ್ದವು,ಆದರೆ ದೊಡ್ಡ ದೊಡ್ಡ ಮಾಲ್‌ಗಳ ಮಾತ್ರ ಸರ್ಕಾರದ ಆದೇಶವನ್ನು ಲೆಕ್ಕಿಸದೆ ಎಂದಿನಂತೆ  ಕಾರ್ಯನಿರ್ವಹಿಸುತ್ತಿದ್ದುದು ಕಂಡು ಬಂತು.

ಕೋರೋನ ನಿಯಂತ್ರಣಕ್ಕೆ ಸರ್ಕಾರ ಕಾರ್ಯಕ್ರಮ ನಿಷೇಧಿಸಿದ್ದರಿಂದ ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ರದ್ದು ಕುರಿತ ತಿಳುವಳಿಕೆ ಬರಹ ಹಾಕಲಾಗಿತ್ತು. ಸಾರಿಗೆ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೋರೋನಾ ವೈರಸ್ ನಿಯಂತ್ರಣಕ್ಕಾಗಿ ಮುಖಕ್ಕೆ ಮಾಸ್ಕ್ ಧರಿಸಿ ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು. 

ಅಲ್ಲದೆ ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ತರಗತಿಯ ಕೊಠಡಿಯಲ್ಲಿ ಬಿಕೋ ಎನ್ನುತ್ತಿದ್ದುದು ಕಂಡು ಬಂತು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಬಗ್ಗೆ ಮಾಹಿತಿ ಪತ್ರ ಪ್ರಕಟಿಸಲಾಗಿತ್ತು. ರಜೆ ಘೋಷಣೆ ಬಗ್ಗೆ ಮಾಹಿತಿ ಪತ್ರ ಪ್ರಕಟಿಸಿರುವುದನ್ನು ವಿದ್ಯಾರ್ಥಿಗಳು ವೀಕ್ಷಿಸಿ ವಾಪಸ್ಸಾಗುತ್ತಿದ್ದರು.

ಕೋರೋನಾ ವೈರಸ್ ನಿಯಂತ್ರಣಕ್ಕಾಗಿ ರಜೆ ಘೋಷಣೆ ಹಿನ್ನಲೆಯಲ್ಲಿ ಮಂಡ್ಯ ನಗರದ ಪ್ರಮುಖ ರಸ್ತೆಗಳಾದ ವಿವಿರಸ್ತೆ, ಪೇಟೆಬೀದಿ, ಆರ್‌ಪಿರಸ್ತೆ, ನೂರಡಿ ರಸ್ತೆ, ಗುತ್ತಲು ರಸ್ತೆಗಳಲ್ಲಿ ಜನಸಂದಣಿ ತೀರ ವಿರಳವಾಗಿತ್ತು.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಳವಳ್ಳಿ ತಾಲ್ಲೂಕಿನ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ನಡೆಯಬೇಕಾದ ಬ್ರಹ್ಮ ರಥೋತ್ಸವವನ್ನು ರದ್ದುಪಡಿಸಲಾಗಿತ್ತು. ಜನಜಾತ್ರೆಯಿಂದ ತುಂಬಿರುತ್ತಿದ್ದ ಮತ್ತಿತಾಳೇಶ್ವರನ ಸನ್ನಿದಿಯಲ್ಲಿ ಭಕ್ತಾದಿಗಳಿಲ್ಲದೆ ಬೀಕೋ ಎನ್ನುತ್ತಿದ್ದುದು ಕಂಡು ಬಂತು.ಅಲ್ಲದೆ ಕುರಿ ಮಾರಾಟದ ಪ್ರಮುಖ ಸಂತೆಯಾದ ಕಿರುಗಾವಲು ಸಂತೆಯೂ ರದ್ದಾದ್ದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ.
ಬೀಗರೂಟ ರದ್ದು

ಕೊರೊನಾ ವೈರಸ್ ತಡೆಗೆ ಮುಂಜಾಗೃತಾಕ್ರಮವಾಗಿ  ರಾಜ್ಯ ಸರ್ಕಾರ ಮದುವೆ, ಔತಣ ಕೂಟ ಮುಂತಾದ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ರದ್ದು ಮಾಡಬೇಕು ಎಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆಯಬೇಕಿದ್ದ ಬೀಗರ ಊಟವನ್ನು ಕ್ಯಾನ್ಸಲ್ ಮಾಡಲಾಗಿತ್ತು

 ನಾಳೆ ಮಂಡ್ಯದ ಗ್ರೀನ್ ಪ್ಯಾಲೇಸ್ ನಲ್ಲಿ  ಬೀಗರೂಟ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಶುಕ್ರವಾರ ಸುಪ್ರೀತ್ ಹಾಗೂ ಶ್ರೀಲಕ್ಷ್ಮೀ ಅವರ ವಿವಾಹವನ್ನು ಅವರ ಪೋಷಕರು ಧರ್ಮಸ್ಥಳದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ಮಾಡಿದ್ದರು. ಆದರೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಾಳೆ ನಿಗದಿಯಾಗಿದ್ದ ಬೀಗರ ಊಟವನ್ನು ಮೂಂದೂಡಿಕೆ ಮಾಡಲಾಗಿದೆ ಎಂದು ವರ ಸುಪ್ರೀತ್ ತಂದೆ ಮಾಧು ತಿಳಿಸಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿಗಳು ಮನೆಗೆ

ನಗರದ ಸರ್ಕಾರಿ ಮಹಿಳಾ ಹಾಸ್ಟೆಲ್ ಸೇರಿದಂತೆ ಇತರೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು.೧೫ ದಿನಗಳ ಕಾಲ ರಜೆ ನೀಡಲಾಗಿದ್ದು ವಿದ್ಯಾರ್ಥಿಗಳು ತಮ್ಮ ಲಗ್ಗೇಜ್  ಹೊತ್ತು ಮನೆಯತ್ತ ತೆರಳಿದರು.

ಅಕ್ರಮ ಮಾಂಸ,ಕೋಳಿ ಅಂಗಡಿಗಳ ಬಂದ್

ಕೃಷ್ಣರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ  ಮಾಂಸದ ಅಂಗಡಿಗಳು ಹಾಗೂ ಕೋಳಿ ಅಂಗಡಿಗಳನ್ನು ಬಂದ್ ಮಾಡಿಸಿ ತಾಲೂಕು ಆಡಳಿತವು ಆದೇಶ ಹೊರಡಿಸಿದ್ದರೂ ಪಟ್ಟಣದ ಹೊರವಲಯದ ಮೈಸೂರು ರಸ್ತೆಯಲ್ಲಿರುವ  ಅಮೀನ್ ಮಟನ್ ಸ್ಟಾಲ್ ನಲ್ಲಿ ಅಕ್ರಮವಾಗಿ ನಾಲ್ಕೈದು ಕುರಿಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂಧಿಗಳು ದಾಳಿ ನಡೆಸಿ ಅಂಗಡಿಯ ಮಾಲೀಕ ಸೈಯ್ಯದ್ ಸಾಧಿಕ್ ವಿರುದ್ಧ ದೂರು ದಾಖಲಿಸಿದ್ದಾರೆ.

ಒಟ್ಟಾರೆ ಕೊರೊನಾ ವೈರಸ್ ತಡೆಗೆ ಮುಂಜಾಗೃತಾಕ್ರಮವಾಗಿ  ರಾಜ್ಯ ಸರ್ಕಾರ ಹೊರಡಿಸಿದ್ದ  ಆದೇಶದ ಪ್ರಕಾರ ಮೊದಲದಿನವೇ ಮಂಡ್ಯ ಬಹತೇಕ ಸ್ತಬ್ದವಾಗಿತ್ತು.

ವರದಿ: ನಾಗಯ್ಯ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com