ಮೊಬೈಲ್ ಕದ್ದ ಎಂದು ವ್ಯಕ್ತಿಗೆ ಹೊಡೆದು ಕೊಲೆ!

ಬಾರ್ ನಲ್ಲಿ ಮೊಬೈಲ್ ಕದ್ದ ಎಂದು ಆರೋಪ ಹೊರಿಸಿ ವ್ಯಕ್ತಿಯೊಬ್ಬನನ್ನೂ ರೂಮ್'ಗೆ ಕರೆದೊಯ್ದು ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಾರ್ ನಲ್ಲಿ ಮೊಬೈಲ್ ಕದ್ದ ಎಂದು ಆರೋಪ ಹೊರಿಸಿ ವ್ಯಕ್ತಿಯೊಬ್ಬನನ್ನೂ ರೂಮ್'ಗೆ ಕರೆದೊಯ್ದು ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ನಾಗರಬಾವಿಯ ಜ್ಯೋತಿನಗರ ನಿವಾಸಿ ಪ್ರಸಾದ್ (40) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಘಟನೆ ಸಂಬಂಧ ಸುಭಾಷ್ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ 4-5 ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಸಾದ್ ಸಿಸ್ಕೋ ಕಂಪನಿಯಲ್ಲಿ ಚಾಲಕರಾಗಿದ್ದು, ಪತ್ರಿ ಹಾಗೂ ಪುತ್ರನ ಜೊತೆ ಜ್ಯೋತಿ ನಗರದಲ್ಲಿ ನೆಲೆಸಿದ್ದರು. ಮಾ.,11ರಂದು ಕಂಪನಿಗೆ ರಜೆ ಇದ್ದ ಕಾರಣ ಪ್ರಸಾದ್ ಪತ್ನಿ ಬಳಿ ರೂ.500 ಪಡೆದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಮದ್ಯ ಸೇವಿಸಲು ಬಾರ್'ಗೆ ತೆರಳಿದ್ದರು. 

ರಾತ್ರಿ 8.30ರ ಸುಮಾರಿಗೆ ಪ್ರಸಾದ್ ಅವರ ಪತ್ನಿಗೆ ಅಪರಿಚತ ಮೊಬೈಲ್ ನಿಂದ ಕರೆ ಮಾಡಿದ್ದ ವ್ಯಕ್ತಿ, ನಿಮ್ಮ ಪತಿ ನಮ್ಮ ಮೊಬೈಲ್ ಕದ್ದಿದ್ದು, ನಮ್ಮ ಬಳಿ ಇದ್ದಾರೆಂದು ಹೇಳಿದ್ದಾರೆ. ಬಳಿಕ ತಾವು ಇರುವ ಸ್ಥಳದ ವಿಳಾಸವನ್ನೂ ನೀಡಿದ್ದಾರೆ. ಅದರಂತೆ ಪ್ರಸಾದ್ ಅವರ ಪತ್ನಿ ನಾಗರಾಬಾವಿ ಸರ್ಕಲ್ ಬಳಿ ಇರುವ ಪಿಜ್ಜಾ ಹಟ್ ಹತ್ತಿರ ಹೋದಾಗ ವ್ಯಕ್ತಿಯೊಬ್ಬ ಬಹಂದು ಸುಕನ್ಯಾ ಅವರನ್ನು ಅವರ ಕೊಠಡಿ ಬಳಿ ಕರೆದೊಯ್ದಿದ್ದಾನೆ. 

ಕೊಠಡಿಯಲ್ಲಿ ಪ್ರಸಾದ್ ಹಾಗೂ 4-5 ಮಂದಿ ಅಪರಿಚತರಿದ್ದು, ಈ ವೇಳೆ ಸುಕನ್ಯಾ ಅವರು ಪತಿಗೆ ಮೊಬೈಲ್ ಕಳವು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ, ಪ್ರಸಾದ್ ಆಣೆ ಪ್ರಮಾಣ ಮಾಡಿ ಮೊಬೈಲ್ ಕದ್ದಿಲ್ಲ ಎಂದು ಹೇಳಿದ್ದಾರೆ .ಈ ವೇಳೆ ವ್ಯಕ್ತಿಯೊಬ್ಬ ಪ್ರಸಾದ್ ಅವರ ಕೆನ್ನೆಗೆ ಹೊಡೆಡಿದ್ದಾನೆ. ಬಳಿಕ ಸುಕನ್ಯಾ ಅವರು ತಡೆದು ಪತಿ ಕುಡಿದ ಮತ್ತಿನಲ್ಲಿದ್ದಾರೆ. ಬೆಳಿಗ್ಗೆ ಕರೆದುಕೊಂಡು ಬರುತ್ತೇನೆಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಆರೋಪಿಗಳು ಪ್ರಸಾದ್ ಅವರನ್ನು ತಮ್ಮ ಬಳಿಯೇ ಇರಿಸಿಕೊಂಡು ಸುಕನ್ಯಾ ಅವರನ್ನು ಮನೆಗೆ ಕಳುಹಿಸಿದ್ದಾರೆ. ರಾತ್ರಿ 10ಗಂಟೆ ಸುಮಾರಿಗೆ ಸುಕನ್ಯಾ ಅವರು ಪತಿ ಮೊಬೈಲ್'ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಬಳಿಗ 10.30ರ ಸುಮಾರಿಗೆ ಮತ್ತೆ ಸುಕನ್ಯಾ ಅವರಿಗೆ ಕರೆ ಮಾಡಿರುವ ಆರೋಪಿಗಳು ತೀವ್ರ ಮದ್ಯದ ನಶೆಯಲ್ಲಿರುವ ನಿಮ್ಮ ಪತಿ ಎದ್ದೇಳುತ್ತಿಲ್ಲ. ಬಂದು ಕರೆದುಕೊಂಡು ಹೋಗಿ ಎಂದು ಕರೆ ಸ್ಥಗಿತಗೊಳಿಸಿದ್ದಾರೆ. 

ಸ್ಥಳಕ್ಕೆ ತೆರಳಿದ್ದ ಸುಕನ್ಯಾ ಅವರು, ಪತಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪ್ರಸಾದ್ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಪ್ರಸಾದ್ ತಲೆಗೆ ಪೆಟ್ಟು ಬಿದ್ದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com