ವಿದೇಶಕ್ಕೆ ಹೋಗಿ ಬಂದ ವ್ಯಕ್ತಿಗೆ ''ಕೊರೋನಾ'' ವದಂತಿಗೆ ಬೆಚ್ಚಿಬಿದ್ದ ನಾಗಮಂಗಲ ತಾಲ್ಲೂಕು ಜನತೆ!

ವಿದೇಶಕ್ಕೆ ಹೋಗಿ ಬಂದ ವ್ಯಕ್ತಿಯೋರ್ವನಿಗೆ ಕೊರೋನಾ ವೈರಸ್ ಇದೆ ಎಂಬ ಸುಳ್ಳು ವದಂತಿ ನಾಗಮಂಗಲ ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಇಂದು ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ವಿದೇಶಕ್ಕೆ ಹೋಗಿ ಬಂದ ವ್ಯಕ್ತಿಯೋರ್ವನಿಗೆ ಕೊರೋನಾ ವೈರಸ್ ಇದೆ ಎಂಬ ಸುಳ್ಳು ವದಂತಿ ನಾಗಮಂಗಲ ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಇಂದು ನಡೆದಿದೆ

ದಕ್ಷಿಣ ಆಫ್ರಿಕಾಕ್ಕೆ ಹೋಗಿ ಬಂದ ವ್ಯಕ್ತಿಗೆ ಕೊರೊನಾ ಸೋಂಕಿದೆ ಎಂಬ ಗಾಳಿ ಸುದ್ದಿ ಹಿನ್ನಲೆಯಲ್ಲಿ ನಾಗಮಂಗಲ ತಾಲ್ಲೂಕಿನ  ಶಿಕಾರಿಪುರ ಗ್ರಾಮದಲ್ಲಿಂದು ಗ್ರಾಮಸ್ಥರೆಲ್ಲರನ್ನು  ತಪಾಸಣೆಗೆ ಒಳಪಡಿಸಿದ್ದು ಇಡೀ ನಾಗಮಂಗಲ ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.

ಏನಿದು ವದಂತಿ
ವ್ಯಾಪಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ವ್ಯಕ್ತಿ,  ಕಳೆದ ಫೆಬ್ರವರಿ ೨೨ರಂದು  ಗ್ರಾಮಕ್ಕೆ ವಾಪಸ್ಸಾಗಿದ್ದನು. ಹೀಗಾಗಿ ಆತನಿಗೆ ಶಂಕಿತ ಕೋವಿಡ್ ೧೯ ಇರಬಹುದು ಎಂಬ ಆತಂಕ ಗ್ರಾಮದಲ್ಲಿ ಸೃಷ್ಟಿಯಾಗಿತ್ತು

ಇದು ವೈದ್ಯರ ಕಿವಿಗೂ ಬಿದ್ದಿತ್ತು, ಈ ಹಿನ್ನಲೆಯಲ್ಲಿ ನಾಗಮಂಗಲ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ದಕ್ಷಿಣ ಆಪ್ರಿಕಾದಿಂದ ಮತ್ತೆ  ೪ ಜನ ಬರುತ್ತಿದ್ದಾರೆ,  ಈಗ ಅವರು ಬಾಂಬೆಯಲ್ಲಿದ್ದಾರೆ ಎಂದು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಶಿಕಾರಿಪುರದ ಗ್ರಾಮಸ್ಥರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಗೆ ಮನೆಯಲ್ಲಿಯೇ ಇರಲು ಸೂಚನೆ ನೀಡಲಾಗಿದೆ.

 ಸದ್ಯಕ್ಕೆ ಆತನಿಗೆ ಯಾವುದೇ ಸೊಂಕು ಲಕ್ಷಣಗಳು ಕಂಡು ಬಂದಿಲ್ಲ,ಆದರು ಆತನಿಗೆ ಅಂಗಡಿ, ಸಾರ್ವಜನಿಕ ಸ್ಥಳಗಳಿಗೆ ಹೋಗದಂತೆ ಸೂಚಿಸಲಾಗಿದೆ. ಪ್ರತಿ ದಿನ ಮನೆಗೆ ಭೇಟಿ ಮಾಡಿ ಪರೀಕ್ಷೆ ನಡೆಸಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

 ಗ್ರಾಮದ ಪ್ರತಿಯೊಬ್ಬರಲ್ಲೂ ಸಹ ಕೊರೋನಾ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಟ್ಟಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಧನಂಜಯ ತಿಳಿಸಿದ್ದಾರೆ.

ವರದಿ: ನಾಗಯ್ಯ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com