ಕೊರೋನಾ ವೈರಸ್ ನಿಯಂತ್ರಣ ಕ್ರಮಗಳು ಬಿಗಿ: ಮೂರು ವಿಭಾಗಗಳಾಗಿ ವಿಂಗಡಿಸಿ ಚಿಕಿತ್ಸೆ- ಸುಧಾಕರ್ 

ಕೊರೋನಾ  ವೈರಸ್ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದು, ಕೋರಾನಾ ಶಂಕಿತರನ್ನು ಇಂದಿನಿಂದ ಎ,ಬಿ,ಸಿ ಎಂದು ವಿಭಜಿಸಿ ನಿಗಾ ವಹಿಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ
ಸಚಿವ ಕೆ. ಸುಧಾಕರ್
ಸಚಿವ ಕೆ. ಸುಧಾಕರ್

ಬೆಂಗಳೂರು: ಕೊರೋನಾ  ವೈರಸ್ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದು, ಕೊರೋನಾ ಶಂಕಿತರನ್ನು ಇಂದಿನಿಂದ ಎ,ಬಿ,ಸಿ ಎಂದು ವಿಭಜಿಸಿ ನಿಗಾ ವಹಿಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಆರು ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಐದು ಮಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಇವರ ಆರೋಗ್ಯ ಸ್ಥಿರವಾಗಿದೆ  ಎಂದರು

ಇದೀಗ ಎ ವರ್ಗದಲ್ಲಿ ಸೋಂಕು ಕುರಿತ ಶಂಕೆ ಕಂಡು ಬಂದರೆ ಅಂತಹವರಿಗೆ ವಿಶೇಷ ಚಿಕಿತ್ಸೆ ಕಲ್ಪಿಸಲಾಗುವುದು. ಬಿ ವಲಯ ಅಂದರೆ  ಮಧುಮೇಹ, ಅಸ್ತಮಾ ಇರುವ ವೃದ್ಧರಿಗೆ ಇವರು ಮನೆಗಳಲ್ಲಿಯೇ ತೀವ್ರ ನಿಗಾ ಇಟ್ಟು ಚಿಕಿತ್ಸೆ ದೊರಕಿಸಿಕೊಡಲಾಗುವುದು. ಸಿ ವಿಭಾಗದಲ್ಲಿ ರೋಗದ ಲಕ್ಷಣಗಳಿಲ್ಲದ, ಯಾವುದೇ ದೇಶದಿಂದ ಬಂದಿದ್ದರೂ ಸಹ ಅಂತಹವರ ತಪಾಸಣೆ ಮಾಡುವುದು ಕಡ್ಡಾಯವಾಗಿದೆ. ಈ ವಲಯದಲ್ಲೂ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುವುದು ಎಂದರು

ಕೊರೋನಾ ಶಂಕೆ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡುತ್ತಿರುವವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಇಂದು 11 ಜನರನ್ನು ನಿಗಾದಲ್ಲಿಟ್ಟಿದ್ದು, ಒಟ್ಟಾರೆ ಆರುಮಂದಿಗೆ ಮಾತ್ರ ಸೋಂಕು ವ್ಯಾಪ್ತಿಸಿರುವುದಾಗಿ ವೈದ್ಯಕೀಯ ವರದಿಗಳು ದೃಢಪಡಿಸಿವೆ. ಇದನ್ನು  ಹೊರತುಪಡಿಸಿ  ಬೇರೆ ಪಾಸೀಟೀವ್ ಪ್ರಕರಣ ವರದಿಯಾಗಿಲ್ಲ ಎಂದರು

ರಾಜ್ಯದಲ್ಲಿ ೧,೦೯,೧೩೧  ಜನರ ಮೇಲೆ ನಿಗಾ ಇಟ್ಟಿದ್ದು, ೭೩೧ ಜನರನ್ನು ಪರೀಕ್ಷೆಗೊಳಪಡಿಸಿದ್ದೇವೆ. ಇಂದು ಒಂದೇ ದಿನದಲ್ಲಿ ೯೧ ಜನರ ಟೆಸ್ಟ್ ಮಾಡಿಸಿದ್ದೇವೆ ೫೯೧ ಪರೀಕ್ಷೆಗಳಲ್ಲಿ ನೆಗೆಟೀವ್ ಬಂದಿದೆ ಎಂದು ಸಚಿವ ಡಾ. ಸುಧಾಕರ್ ಹೇಳಿದರು

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ರಾಜ್ಯಕ್ಕೆ ಆಗಮಿಸುವ ಎಲ್ಲಾ ಅನಿವಾಸಿ ಭಾರತೀಯರು ಹಾಗೂ ವಿದೇಶಿಯರನ್ನು ಅವರಿಗೆ ರೋಗಲಕ್ಷಣ ಇಲ್ಲದಿದ್ದರೂ ಸಹ ಮನೆಯಲ್ಲೆ ೧೪ ದಿನಗಳ ಕಾಲ ಪ್ರತ್ಯೇಕವಾಗಿರಿಸಬೇಕೆಂದು ಸೂಚಿಸಲಾಗಿದೆ.

ಐಟಿ, ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ವಿದೇಶದಿಂದ ಬಂದು ರೋಗ ಲಕ್ಷಣಗಳಿರುವ ವ್ಯಕ್ತಿಗಳು ಇದ್ದಲ್ಲಿ ತಡ ಮಾಡದೇ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ದೂರವಾಣಿ, ಫ್ಯಾಕ್ಸ್, ವಾಟ್ಸಾಪ್ ಅಥವಾ ೧೦೪ ಸಹಾಯವಾಣಿಯ ಮೂಲಕ ಮಾಹಿತಿ ನೀಡಬೇಕು ಎಂದು ಎಲ್ಲಾ ಜಿಲ್ಲೆಗಳಲ್ಲಿ ಸೂಚನೆ ನೀಡಲಾಗಿದೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ವ್ಯಾಪ್ತಿಗೆ ಬರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ಮಾರ್ಚ್ ೨೩ರ ಬೆಳಗ್ಗೆ ೮ ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು ಸೇರಿದಂತೆ ೮೦ ಕಡೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.

ವಿದೇಶದಿಂದ ದಾವಣಗೆರೆಗೆ ಹಿಂತಿರುಗಿದ್ದ ೨೪ ಜನರ ಪೈಕಿ ಕೊರೋನಾ ರೋಗ ಲಕ್ಷಣ ಕಂಡು ಬಂದಿದ್ದ ನಾಲ್ವರ ಪೈಕಿ ಒಬ್ಬರ ವೈದ್ಯಕೀಯ ವರದಿ ಬಂದಿದ್ದು. ಅವರಲ್ಲಿ ಕೊರೋನಾ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com