ಕೊವಿದ್-19 ಎರಡನೇ ಪ್ರಕರಣ ಹಿನ್ನೆಲೆ: ಕಲಬುರಗಿಯಲ್ಲಿ ಜಾತ್ರೆ, ಸಮಾರಂಭ, ವಾರದ ಸಂತೆಗೂ ಬ್ರೇಕ್

ಜಿಲ್ಲೆಯಲ್ಲಿ ಕರೋನವೈರಸ್ ನ ಎರಡನೇ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಸೋಂಕು ಹರಡುವಿಕೆ ತಡೆಯುವ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ತೀವ್ರಗೊಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಜಿಲ್ಲೆಯಲ್ಲಿ ಕರೋನವೈರಸ್ ನ ಎರಡನೇ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಸೋಂಕು ಹರಡುವಿಕೆ ತಡೆಯುವ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ತೀವ್ರಗೊಳಿಸಿದೆ.

ಜಿಲ್ಲಾಡಳಿತ ಸಿಆರ್‌ಪಿಸಿ ಸೆಕ್ಷನ್ 133 ರ ಅಡಿ ಜಾತ್ರೆಗಳು, ಉರುಸ್‍, ಸಮಾರಂಭಗಳು, ವಾರದ ಸಂತೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಭಾನುವಾರ ಸಂಜೆಯಿಂದ ಈ ಆದೇಶ ಜಾರಿಗೆ ಬಂದಿದೆ.

ಪ್ರಯೋಗಾಲಯದ ವರದಿಯಂತೆ ಎರಡನೇ ವ್ಯಕ್ತಿಯಲ್ಲಿ ಕೊವಿದ್‍-19 ಸೋಂಕು ದೃಢಪಟ್ಟಿದ್ದು, ಆತನನ್ನು ಕಲಬುರಗಿ ಇಎಸ್ಐಸಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ದಾಖಲು ಮಾಡಲಾಗಿದೆ. ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಒಟ್ಟು 77 ಜನರನ್ನು ಗುರುತಿಸಲಾಗಿದೆ. ಅಲ್ಲದೆ, ಆತನೊಂದಿಗೆ ಎರಡನೇ ಸಂಪರ್ಕದಲ್ಲಿದ್ದ 140 ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರನ್ನು 14 ದಿನಗಳವರೆಗೆ ಮನೆಗಳಲ್ಲೇ ನಿರ್ಬಂಧಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಇಲಾಖೆ ಇವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.’ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. 

ಮೂಲಗಳಂತೆ ಸೋಂಕು ತಗುಲಿದ ವ್ಯಕ್ತಿಯ ಆರೈಕೆ ಮಾಡಿದ ಆತನ ರಕ್ತಸಂಬಂಧಿ ವೈರಸ್ ಸೋಂಕಿಗೆ ಒಳಗಾಗಿದ್ದಾನೆ ಎಂದು ಹೇಳಲಾಗುತ್ತಿದೆ. 

ಸಾಮೂಹಿಕ ಸಮಾರಂಭಗಳನ್ನು ನಿಯಂತ್ರಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಚಲಿಸುವ ಬಸ್‌ಗಳ ಸಂಖ್ಯೆಯನ್ನು ಸಹ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಜನರು ಗುಂಪುಗಳಾಗಿ ಸೇರಬಾರದು. ಸಾಧ್ಯವಾದಷ್ಟು ಮನೆಗಳಿಂದ ಹೊರಗೆ ಬರಬಾರದು. ಕುಟುಂಬದ ಒಬ್ಬ ಸದಸ್ಯ ಮಾತ್ರ ಮಾರುಕಟ್ಟೆಗೆ ಹೋಗುವುದು ಸೂಕ್ತ ಎಂದು ಶರತ್ ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತದ ಮನವಿಗೆ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕಲಬುರಗಿ ನಗರದಲ್ಲಿ ಸೋಮವಾರ.ಹೋಟೆಲ್‌ಗಳು, ಅಂಗಡಿಗಳು ಮತ್ತು ಸಾರ್ವಜನಿಕ ಉದ್ಯಾನಗಳು ಸೇರಿದಂತೆ ಇತರ ವಾಣಿಜ್ಯ ಮುಂಗಟ್ಟುಗಳಲ್ಲಿ ಕೆಲವೇ ಜನರು ಕಾಣಿಸಿಕೊಂಡಿದ್ದಾರೆ. 

ಕಳೆದ ವಾರ, ಜಿಲ್ಲೆಯಲ್ಲಿ ಶಂಕಿತ ಕರೋನವೈರಸ್‍ ನ ಚಿಕಿತ್ಸೆ ಪಡೆಯುತ್ತಿದ್ದ 76 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಇದು ಭಾರತದಲ್ಲಿ ವೈರಸ್‌ನ ಮೊದಲ ಸಾವು ಪ್ರಕರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com