ಅಯೋಧ್ಯೆ, ಆರ್ಟಿಕಲ್ 370, ಸಿಎಎ: 'ಸುಪ್ರೀಂ' ಕೇಂದ್ರ ಸರ್ಕಾರವನ್ನು ಪ್ರಶಂಸಿಸಿದ ಆರ್‌ಎಸ್ಎಸ್ ಸರಸಂಚಾಲಕ ಭೈಯಾಜಿ ಜೋಶಿ

ಅಯೋಧ್ಯೆ ರಾಮಜನ್ಮಭೂಮಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವು ಮತ್ತು ಸಿಎಎ ಜಾರಿ ಕುರಿತಂತೆ ಕೇಂದ್ರ ಸರ್ಕಾರದ ದಿಟ್ಟ ಕ್ರಮಗಳನ್ನು ಆರ್‌ಎಸ್ಎಸ್ ಪ್ರಶಂಸಿಸಿದೆ. 
ಸುರೇಶ್ ಭೈಯಾಜಿ ಜೋಶಿ
ಸುರೇಶ್ ಭೈಯಾಜಿ ಜೋಶಿ

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವು ಮತ್ತು ಸಿಎಎ ಜಾರಿ ಕುರಿತಂತೆ ಕೇಂದ್ರ ಸರ್ಕಾರದ ದಿಟ್ಟ ಕ್ರಮಗಳನ್ನು ಆರ್‌ಎಸ್ಎಸ್ ಪ್ರಶಂಸಿಸಿದೆ. 

ತನ್ನ ವಿವಿಧ ಚಟುವಟಿಕೆಗಳ ಮೂಲಕ ಅರೆಸ್ಸೆಸ್ ದೇಶದ 80,000 ಸ್ಥಳಗಳಿಗೆ ತಲುಪಿದೆ ಎಂದು ಸಂಘದ ಸರಕಾರ್ಯವಾಹ ಭೈಯಾಜಿ ಜೋಶಿ ತಿಳಿಸಿದ್ದಾರೆ. ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.  

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ 3000 ಶಾಖೆಗಳು ಹೆಚ್ಚಾಗಿವೆ. ದೇಶದ 39,000 ಸ್ಥಳಗಳಲ್ಲಿ, 63,500 ಶಾಖೆಗಳು ಹಾಗೂ 25000 ಸ್ಥಳಗಳಲ್ಲಿ 28,500 ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.  1951 ರಿಂದ ಸಂಘದ ಪ್ರತಿನಿಧಿ ಸಭೆಗಳು 1975- 76 ರನ್ನು ಹೊರತುಪಡಿಸಿ ನಿರಂತರವಾಗಿ ಪೂರ್ವ ನಿಗದಿಯಾದಂತೆ ನಡೆದಿವೆ. ಆದರೆ, ಪ್ರಸ್ತುತ ಸಂದರ್ಭದ ಸೂಕ್ಷ್ಮತೆಯನ್ನು ಪರಿಗಣಿಸಿ ಈ ಬಾರಿ ಪ್ರತಿನಿಧಿ ಸಭೆ ರದ್ದಾಗಿದೆ. ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಸಭೆ  ಮಾತ್ರ ನಡೆದಿದೆ.  

ಸಂಪೂರ್ಣ ದೇಶದಲ್ಲಿ  18-22 ಮತ್ತು 20-35ರ ವಯಸ್ಸಿನ ಒಂದು ಲಕ್ಷ  ಯುವಕರನ್ನು  ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ  ಮುಂದಿನ 2-3 ವರ್ಷಗಳಲ್ಲಿ ಸೂಕ್ತ ತರಬೇತಿ ನೀಡಿ ನಿಯೋಜಿಸಲು ಸಂಘವು ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಭೈಯ್ಯಾಜಿ ತಿಳಿಸಿದರು. ಗ್ರಾಮ ವಿಕಾಸ-  ದೇಶದಲ್ಲಿ ಈಗಾಗಲೇ 1000 ಗ್ರಾಮಗಳನ್ನುಗುರುತಿಸಲಾಗಿದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಸ್ವಾವಲಂಬನೆ, ಸಾಮಾಜಿಕ ಸಾಮರಸ್ಯಗಳನ್ನೊಳಗೊಂಡ  5 ಆಯಾಮಗಳ ಕೆಲಸವನ್ನು ಸಂಘ ಹಮ್ಮಿಕೊಳ್ಳಲಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ನೀರು ಉಳಿಸಿ, ಮರ ಬೆಳೆಸಿ, ಪ್ಲಾಸ್ಟಿಕ್ ತ್ಯಜಿಸಿ ಈ ಸೂತ್ರದ ಅಡಿಯಲ್ಲಿ  ಕೆಲಸ ಮಾಡಲು ಸಂಘವು ಸಮಾಜದೊಡನೆ ಕೈಜೋಡಿಸಿ ಕೆಲಸ ಮಾಡಲಿದೆ ಎಂದರು. 

ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಪ್ರಸ್ತುತ ಬೈಠಕ್ ನಲ್ಲಿ ಕೆಳಗಿನ 3 ನಿರ್ಣಯಗಳನ್ನುಅಂಗೀಕರಿಸಲಾಗಿದೆ. 
1 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಸರ್ವೋಚ್ಛ ನ್ಯಾಯಾಲಯವು ಒಪ್ಪಿಗೆಯನ್ನು ಸೂಚಿಸಿದೆ. ಅ.ಭಾ.ಕಾ.ಮಂ. ಈ ನಿರ್ಣಯವನ್ನು ಸ್ವಾಗತಿಸುತ್ತದೆ.  

2 ಜಮ್ಮುಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370 ನೇ ವಿಧಿಯನ್ನು ತನ್ನ ಐತಿಹಾಸಿಕ ನಿರ್ಣಯದಲ್ಲಿ ಸರ್ಕಾರ ಸಂಸತ್ತಿನಲ್ಲಿ ರದ್ದು ಗೊಳಿಸಿತು. ಈ ದೃಢ ನಿರ್ಧಾರಕ್ಕಾಗಿ ಕೇಂದ್ರ ಸರ್ಕಾರ ಮತ್ತು ಸಂಸತ್ತನ್ನು ಆರ್ ಎಸ್ ಎಸ್ ಅಭಿನಂದಿಸುತ್ತದೆ. 

3 ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿನ ಹಿಂದೂ, ಫಾರ್ಸಿ, ಸಿಖ್, ಬೌದ್ಧ, ಜೈನ ಮತ್ತು ಕ್ರೈಸ್ತರ ಮೇಲೆ ಧರ್ಮದ ಆಧಾರದ ಮೇಲೆ ದಮನಕ್ಕೊಳಗಾಗಿದ್ದವರಿಗೆ ಪೌರತ್ವವನ್ನು ಕೊಡುವ ಸಿಎಎ  ಕಾನೂನನ್ನು ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಅ.ಭಾ.ಕಾ.ಮಂ. ಅಭಿನಂದಿಸುತ್ತದೆ. 

ಸಿಎಎ ಕುರಿತಾದ ಪ್ರಶ್ನೆಯೊಂದಕ್ಕೆಉತ್ತರಿಸಿದ ಅವರು, ದೇಶದ ಗೃಹಮಂತ್ರಿ ಮತ್ತು ಪ್ರಧಾನಿಗಳು ಜನರೊಡನೆ ಮುಕ್ತ ಸಂವಾದಕ್ಕಾಗಿ ಆಹ್ವಾನ ನೀಡಿದ್ದಾರೆ. ದೇಶದ ಹಲವು ಸಂಘಟನೆಗಳು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ಕೆಲ ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕೋಸ್ಕರಗೊಂದಲಗಳನ್ನು ಸೃಷ್ಟಿಸುತ್ತಿವೆ.  ಈ ಗೊಂದಲವನ್ನು ತಿಳಿಗೊಳಿಸುವ ಜವಾಬ್ದಾರಿ ಎಲ್ಲ ರಾಜಕೀಯ ನೇತಾರರ ಮೇಲಿದೆ ಎಂದು ಹೇಳಿದರು.
 
ಕುಟುಂಬ ವ್ಯವಸ್ಥೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಪಾಶ್ಚಾತ್ಯೀಕರಣ ಮತ್ತು ಆಧುನೀಕರಣದಲ್ಲಿ ವ್ಯತ್ಯಾಸವಿದೆ. ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯೀಕರಣ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ ಕುಮಾರ್, ಸಹ ಪ್ರಚಾರ ಪ್ರಮುಖರಾದ  ನರೇಂದ್ರ ಠಾಕೂರ್ ಹಾಗು ಸುನೀಲ್ ಅಂಬೇಕರ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com