ಪಾಪು ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ: ಗಣ್ಯರಿಂದ ಗುಣಗಾನ

ನಿನ್ನೆ ನಿಧನರಾದ ಹಿರಿಯ ಸಾಹಿತಿ, ಪತ್ರಕರ್ತ ಡಾ.ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು.ಪಾಪು ನಿಧನದ ಹಿನ್ನೆಲೆಯಲ್ಲಿ ಒಂದು ನಿಮಿಷ ಕಾಲ ಮೌನಾಚರಿಸಲಾಯಿತು.
ಪಾಟೀಲ ಪುಟ್ಟಪ್ಪ
ಪಾಟೀಲ ಪುಟ್ಟಪ್ಪ

ಬೆಂಗಳೂರು: ನಿನ್ನೆ ನಿಧನರಾದ ಹಿರಿಯ ಸಾಹಿತಿ, ಪತ್ರಕರ್ತ ಡಾ.ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು.ಪಾಪು ನಿಧನದ ಹಿನ್ನೆಲೆಯಲ್ಲಿ ಒಂದು ನಿಮಿಷ ಕಾಲ ಮೌನಾಚರಿಸಲಾಯಿತು.

ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿ, ಪಾಟೀಲ್ ಪುಟ್ಟಪ್ಪ ಅವರ ಜೀವನ ಮತ್ತು ಸಾಧನೆಯನ್ನು ವಿವರಿಸಿದರು.

ಸಭಾ ನಾಯಕರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರಂಭದಲ್ಲಿ ಸಂತಾಪ ಸೂಚಕ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ಶತಾಯುಷಿ ಪಾಟೀಲ್ ಪಟ್ಟಪ್ಪ ಅವರು ನಿನ್ನೆ ನಿಧನರಾಗಿದ್ದಾರೆ. 

ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ ಅವರು ಮಾಡಿದ ಕೆಲಸ ಅಪಾರ. ಕರ್ನಾಟಕ ಏಕೀಕರಣ ಹೋರಾಟದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಧೀಮಂತ ನಾಯಕನನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. 

ಕನ್ನಡದ ಅಸ್ಮಿತೆಗಾಗಿ ಹೋರಾಡಿದ ಆ ವ್ಯಕ್ತಿತ್ವ ಇಂದು ನಮ್ಮನ್ನು ಅಗಲಿದೆ. ಎರಡು ದಿನಗಳ ಹಿಂದೆ ಅವರ ಆರೋಗ್ಯ ವಿಚಾರಿಸಿ ಬಂದಿದ್ದೆ. ಆದರೆ ಅವರು ನಮ್ಮನ್ನು ಅಗಲಿದ್ದಾರೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಆರ್.ವಿ.ದೇಶಪಾಂಡೆ ಮಾತನಾಡಿ, ಪಾಟೀಲ ಪುಟ್ಟಪ್ಪ ಅವರು ನಮ್ಮನ್ನಗಲಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ಅವರು ಮಾಡಿದ ಹೋರಾಟ, ಸಾಹಿತ್ಯಕ್ಕೆ ನೀಡಿದ ಕೊಡುಗೆ, ಸಂಪಾದಕರಾಗಿ, ಪತ್ರಕರ್ತರಾಗಿ, ನ್ಯಾಯವಾದಿಯಾಗಿ ನೀಡಿದ ಕೊಡುಗೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹದ್ದು. ಪ್ರೀತಿಯಿಂದ ಅವರನ್ನು ಜನ ಪಾಪು ಎಂದು ಕರೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದಾರೆ ಎಂದರು.

ಪಾಪು ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಗೆ ಬಹಳ ಆತ್ಮೀಯರಾಗಿದ್ದರು. ಕನ್ನಡ ಭಾಷೆ ಸರಿಯಾಗಿ ಅನುಷ್ಠಾನಗೊಳ್ಳಬೇಕು, ಎಲ್ಲಾ ಹಂತಗಳಲ್ಲಿ ಕನ್ನಡ ಅನುಷ್ಠಾನವಾಗಬೇಕು ಎಂಬ ಉದ್ದೇಶದಿಂದ ಹೆಗಡೆಯವರು ಪಾಪು ಅವರನ್ನು 1985ರಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. 

2018ರಲ್ಲಿ ತಾವು ಸಚಿವನಾಗಿದ್ದಾಗ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿ ಅವರು ನೀಡಿದ ಮಾರ್ಗದರ್ಶನ ಅಪಾರವಾಗಿತ್ತು. ಇದರಿಂದಲೇ ಸಮ್ಮೇಳನ ಯಶಸ್ಸು ಕಂಡಿತು. ಹೋರಾಟಗಾರರಾಗಿದ್ದ ಅವರು ಯಾವುದೇ ವಿಷಯದಲ್ಲಿ ಸ್ಪಷ್ಟವಾಗಿ, ಧೈರ್ಯವಾಗಿ ಮಾತನಾಡುತ್ತಿದ್ದರು. ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಅವರ ವಿರುದ್ಧ ಟೀಕೆ ಟಿಪ್ಪಣಿ ಮಾಡುವ ಧೈರ್ಯ ಬೆಳೆಸಿಕೊಂಡಿದ್ದರು. ಅಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಕರ್ನಾಟಕ ಏಕೀಕರಣ ಹೋರಾಟದ ಕೊನೆಯ ಕೊಂಡಿ ಎಂದು ಬಣ್ಣಿಸಿದರು.

ಜೆಡಿಎಸ್ ಸದಸ್ಯ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ಪಾಟೀಲ ಪುಟ್ಟಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರನಾಗಿ, ಸಾಹಿತಿಯಾಗಿ ಹೋರಾಟದ ಮೂಲಕ ಹೊಸತನವನ್ನು ತಂದುಕೊಟ್ಟರು. ಒಬ್ಬ ಸಾಹಿತಿಯಾಗಿ ಕನ್ನಡದ ಅಸ್ಮಿತೆಯನ್ನು ಕನ್ನಡ ನಾಡಿನ ಜಲ, ನೆಲವನ್ನು ರಕ್ಷಿಸಲು ಹೋರಾಟದ ಮೇಲ್ಪಂಕ್ತಿ ಹಾಕಿಕೊಟ್ಟರು. 

ಅವರ ಹೋರಾಟ ನಮಗೆ ಪ್ರೇರಣೆ ಕೊಡಲಿ, ಅವರ ಮಾರ್ಗದರ್ಶನದಲ್ಲಿ ನಾಡನ್ನು ಇನ್ನೂ ಚೆನ್ನಾಗಿ ಕಟ್ಟೋಣ. ಕನ್ನಡವನ್ನು ಉಳಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.

ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಮಾತನಾಡಿ, ಪಾಟೀಲ್ ಪುಟ್ಟಪ್ಪ ಅವರು ಕನ್ನಡ ನಾಡು, ನುಡಿ, ಗಡಿ ವಿಚಾರಗಳಲ್ಲಿ ಗಟ್ಟಿತನದಲ್ಲಿ ಹೋರಾಡಿದ ಶ್ರೇಷ್ಠ ಕನ್ನಡಿಗ. ಒಬ್ಬ ಶ್ರೇಷ್ಠ ಪತ್ರಿಕೋದ್ಯಮಿ, ಸಂಪಾದಕರಾಗಿ ಅವರು ವಿಶ್ವವಾಣಿ ಪತ್ರಿಕೆಯನ್ನು ಬಹುಕಾಲದವರೆಗೆ ನಡೆಸಿದ್ದಾರೆ. 

ಅವರು ಹೊರನಾಡ ಕನ್ನಡಿಗರಿಗೆ ಬಲ ತುಂಬಿದವರು. ತಮಗೂ ಅವರಿಗೆ ಅವಿನಾಭಾವ ಸಂಬಂಧ ಇತ್ತು. ಅವರು ರಚನಾತ್ಮಕವಾಗಿ ಕೆಲಸ ಮಾಡಿದ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಗಡಿನಾಡ ಕನ್ನಡಿಗರ ವಿಚಾರದಲ್ಲಿ ಪಾಪು ಮಾಡಿದ ಸೇವೆ ಅಪಾರವಾದುದು. ಪತ್ರಿಕಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಕೊಡಿಗೆ ನೀಡಿದ್ದಾರೆ. ಅವರು ನಾಡಿನ ಪ್ರಜ್ಞಾಸಾಕ್ಷಿಯಾಗಿದ್ದರು ಎಂದು ಹೇಳಿದರು.


ಅವರು ನಿಧನರಾಗುವ ಎರಡು ದಿನ ಮೊದಲು ಮುಖ್ಯಮಂತ್ರಿಯವರು ಬಂದು ಅವರನ್ನು ಭೇಟಿಯಾಗಿದ್ದರು. ಸರ್ಕಾರಗಳಿಗೆ ಸಮಾಜಕ್ಕೆ ಬರವಣಿಗೆಯ ಮೂಲಕ ದಿಟ್ಟತನದ ಮಾರ್ಗದರ್ಶನ ಮಾಡಿದ್ದರು. ಬರವಣಿಗೆಯ ಮೂಲಕ ಸಮಾಜ ಸುಧಾರಣೆ ಮಾಡಿದ್ದರು.ಅವರ ಅಗಲಿಕೆ ಕನ್ನಡಿಗರಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ನಾಡಿನ ಹಿರಿಯ ಚೇತನ, ಪಾಟೀಲ್ ಪುಟ್ಟಪ್ಪನವರು ನಿನ್ನೆ ರಾತ್ರಿ 10 ಗಂಟೆಗೆ ನಮ್ಮನ್ನು ಅಗಲಿದ್ದಾರೆ. 

ಕೆಲವು ದಿನಗಳಿಂದ ಪಾಪು ವಯೋಸಹಜವಾದ ಕಾಯಿಲೆಗಳಿಂದ ನರಳುತ್ತಿದ್ದರು. ಹಾಗಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶತಾಯುಷಿಯಾಗಿ 102ನೇ ವರ್ಷದಲ್ಲಿ ನಿಧನರಾಗಿದ್ದು, ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ ಎಂದರು.

ನಾಡು, ನುಡಿ, ನೆಲ, ಜಲ, ಭಾಷೆ, ಗಡಿ ಸಮಸ್ಯೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರು. ಅವರು ಒಂದು ರೀತಿಯಲ್ಲಿ ಕನ್ನಡದ ಕಟ್ಟಾಳು. ಕಾನೂನು ಪದವೀಧರರಾಗಿದ್ದರೂ ಅವರು ವಕೀಲಿ ವೃತ್ತಿಯಲ್ಲಿ ಮುಂದುವರಿಯಲಿಲ್ಲ. ಅವರ ಆಸಕ್ತಿ ಪತ್ರಿಕೋದ್ಯಮವಾಗಿತ್ತು. 

ಹಾಗಾಗಿ ಅದರಲ್ಲೆ ಮುಂದುವರಿದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಕೋರ್ಸ್‌ ಮಾಡಿ ಬಂದ ಬಳಿಕ, ಪ್ರಪಂಚ, ವಿಶ್ವವಾಣಿ ಮುಂತಾದ ಪತ್ರಿಕೆಗಳನ್ನು ನಡೆಸುತ್ತಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಡಿದರು. ಕನ್ನಡದ ಎಲ್ಲಾ ಹೋರಾಟಗಳಲ್ಲೂ ಅವರು ಮುಂಚೂಣಿಯಲ್ಲಿದ್ದರು ಎಂದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಎರಡು ಮೂರು ಬಾರಿ ಅವರನ್ನು ಭೇಟಿ ಮಾಡಿದ್ದೆ. ಅವರು ಗಾಲಿ ಕುರ್ಚಿಯಲ್ಲಿ ಬೆಂಗಳೂರಿಗೆ ಬಂದು ಗಾಂಧಿ ಭವನದಲ್ಲಿ ತಂಗುತ್ತಿದ್ದರು. ಗಾಂಧಿ ಭವನಕ್ಕೆ ಹೇಳಿ ಕಳುಹಿಸಿದ್ದರೆ ನಾನೇ ಬರುತ್ತಿದ್ದೆ ಎಂದು ಹೇಳಿದರೆ, ಇಲ್ಲ ನಾನು ಆರೋಗ್ಯವಾಗಿದ್ದೇನೆ. ಕಾಲು ಮಾತ್ರ ನೋವು ಎಂದು ಹೇಳುತ್ತಿದ್ದರು.

 ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಅವರಿಗೆ ನಾಡೋಜ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ನೃಪತುಂಗ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ. ತಾವು ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದಾಗ ಅವರು ಆ ಸಮಿತಿಯಲ್ಲಿದ್ದರು. ಪಾಪು ಅವರು ಸಮಿತಿಯ ಮೂರನೇ ಅಧ್ಯಕ್ಷರಾಗಿದ್ದರು. ತಾವು ಅಧ್ಯಕ್ಷರಾಗಿದ್ದಾಗ ಪಾಪು, ಸಿದ್ದಲಿಂಗಯ್ಯ ಪುರಾಣಿಕ್, ಶಂಕರೇಗೌಡ, ಖಾದ್ರಿ ಶಾಮಣ್ಣ ಮುಂತಾದ ಘಟನಾನುಘಟಿಗಳು ಸದಸ್ಯರಾಗಿದ್ದರು. 

ಇಂತಹವರ ಒಡನಾಡದಿಂದಲೇ ತಮಗೆ ಕನ್ನಡ ಸಾಹಿತ್ಯದ ಮಲೆ ಪ್ರೀತಿ ಬೆಳೆಯಿತು. ತಮ್ಮ ಕನ್ನಡವೂ ಬೆಳೆಯಲು ಕಾರಣವಾಯಿತು. ಗೋಖಾಕ್ ಚಳವಳಿಯಲ್ಲಿಯೂ ಅವರು ಮುಂಚೂಣಿಯಲ್ಲಿದ್ದರು. 5 ದಶಕಗಳ ಕಾಲ ವಿದ್ಯಾವರ್ಧಕ ಶಾಲೆಯ ಅಧ್ಯಕ್ಷರಾಗಿ ದೀರ್ಘ ಕಾಲ ಕೆಲಸ ಮಾಡಿದ್ದರು. ಗಾಲಿ ಖುರ್ಚಿಯಲ್ಲೇ ಬಂದು ಭಾಷಣ ಮಾಡುತ್ತಿದ್ದರು. ಕನ್ನಡ ಎಂದರೆ ಅವರಿಗೆ ಅಷ್ಟು ಬದ್ಧತೆ ಇತ್ತು. ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ಕನ್ನಡ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿ, ಸರ್ಕಾರ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಮಗೂ ಪಾಟೀಲ್ ಪುಟ್ಟಪ್ಪ ಅವರಿಗೆ ನಿಕಟವಾದ ಬಾಂಧ್ಯವ್ಯವಿತ್ತು. ತುಮಕೂರಿನಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರ ಗೋಕಾಕ್‌ ಚಳವಳಿ ಅವಿಸ್ಮರಣೀಯ. ನೆಹರೂ ಜೊತೆ ಇದ್ದ ಸಂಬಂಧವನ್ನು ಅವರು ಆಗಾಗ ಸ್ಮರಿಸುತ್ತಿದ್ದರು. ಪಕ್ಕಾ ಗಾಂಧಿವಾದಿಯಾಗಿದ್ದ ಅವರ ಅಗಲಿಕೆ ದುಃಖ ತಂದಿದೆ. ಅವರು ನಿಜವಾದ ಗಾಂಧಿ ಅನುಯಾಯಿ. ಮಕ್ಕಳ ಜೊತೆ ಅಪಾರ ಪ್ರೀತಿ ಹೊಂದಿದ್ದರು ಎಂದು ಸ್ಮರಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ತಾವು ಕನ್ನಡ ಸಂಸ್ಕೃತಿ ಖಾತೆ ಸಚಿವನಾದ ಕೂಡಲೇ ಅವರು ತಮಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಆಡಂಬರದ ಜೀವನ ಕಂಡರೆ ಅವರು ಸಿಟ್ಟು ಬರುತ್ತಿತ್ತು. ಅದೇ ರೀತಿ ಅನ್ಯಾಯ, ಜಾತಿ, ಧರ್ಮದ ಜಗಳದ ಬಗ್ಗೆಯೂ ಅವರಿಗೆ ಅಪಾರ ಕೋಪ ಬರುತ್ತಿತ್ತು ಎಂದರು. ಸಚಿವೆ ಶಶಿಕಲಾ ಜೊಲ್ಲೆ ಪಾಪು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com